KRS Dam ಬಿರುಕು ಬಿಟ್ಟಿದೆ ಎಂದು ನಾನು ಹೇಳಿಯೇ ಇಲ್ಲ; ಯೂಟರ್ನ್‌ ಹೊಡೆದ Sumalatha

ಹೈಲೈಟ್ಸ್‌:

  • ಕೆಆರ್‌ಎಸ್‌ ಬಿರುಕು ಬಿಟ್ಟಿದೆ ಎಂದು ನಾನು ಹೇಳಿಯೇ ಇಲ್ಲ
  • ಕೆಆರ್‌ಎಸ್‌ ಡ್ಯಾಂ ವಿವಾದದಲ್ಲಿ ಯೂಟರ್ನ್‌ ಹೊಡೆದ ಸುಮಲತಾ
  • ನನ್ನ ಹೇಳಿಕೆಯನ್ನು ರಾಜಕೀಯವಾಗಿ ತಿರುಚಲಾಗಿದೆ ಎಂದು ಆಕ್ಷೇಪ

ಮೈಸೂರು: ಮಂಡ್ಯ ಜಿಲ್ಲೆಯಲ್ಲಿನ ಗಣಿಗಾರಿಕೆ ಪ್ರದೇಶಕ್ಕೆ ಗಣಿ ಸಚಿವ ಮುರುಗೇಶ ನಿರಾಣಿ ಶೀಘ್ರದಲ್ಲೇ ಭೇಟಿ ನೀಡಲಿದ್ದು, ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ವಹಿಸುವಂತೆ ಆಗ್ರಹಿಸುವುದಾಗಿ ಸಂಸದೆ

ಸುಮಲತಾ ಹೇಳಿದರು.

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಬುಧವಾರ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಆರ್‌ಎಸ್‌ ರಕ್ಷಣೆಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿರುವೆ. ನನ್ನ ಹೋರಾಟಕ್ಕೆ ಜಲಾಶಯದ ಬಗ್ಗೆ ಕಾಳಜಿ ಇರುವ ಎಲ್ಲರೂ ಕೈ ಜೋಡಿಸಬೇಕು. ವಿರೋಧ ಪಕ್ಷದವರ ಬೆಂಬಲ ಕೇಳುವ ಮೂಲಕ ಇದನ್ನು ರಾಜಕೀಯಗೊಳಿಸಲ್ಲ ಎಂದು ಪ್ರತಿಕ್ರಿಯಿಸಿದರು.

ಬಿರುಕು ಬಿಟ್ಟಿದೆ ಎಂದು ಹೇಳಿಯೇ ಇಲ್ಲ: ಕೆಆರ್‌ಎಸ್‌ ಜಲಾಶಯ ಬಿರುಕು ಬಿಟ್ಟಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನನಗೆ ಈಗಲೂ ಶೇ.500ರಷ್ಟು ಗಣಿಗಾರಿಕೆಯಿಂದ ಕೆಆರ್‌ಎಸ್‌ ಬಿರುಕಾಗುತ್ತದೆ ಎಂಬ ಆತಂಕ ಇದೆ. ನಾನು ಈ ಬಗ್ಗೆಯೇ ದಿಶಾ ಸಭೆಯಲ್ಲಿಅಧಿಕಾರಿಗಳನ್ನು ಕೇಳಿದ್ದೆ. ಆದರೆ ನನ್ನ ಹೇಳಿಕೆಯನ್ನು ಹೊರಗೆ ಬೇರೆ ರೀತಿಯಲ್ಲಿ ರಾಜಕೀಯವಾಗಿ ತಿರುಚಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಲಾಶಯದ ಸುತ್ತಮುತ್ತ ನಡೆದಿರುವ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಅಪಾಯವಿದೆ ಎಂದು ತಜ್ಞರು ವರದಿ ನೀಡಿದ್ದಾರೆ. 11 ಬಾರಿ ಜಲಾಶಯದ ಪರಿಸರದಲ್ಲಿ ಲಘುವಾಗಿ ಭೂಮಿ ಕಂಪಿಸಿರುವುದು ದಾಖಲಾಗಿದೆ. ಈ ಬಗ್ಗೆ ರೈತರು ನನ್ನ ಬಳಿ ವ್ಯಕ್ತಪಡಿಸಿದ್ದ ಆತಂಕ, ಕಲ್ಲುಗಣಿಗಾರಿಕೆ ವಿರುದ್ಧ ಸ್ಥಳೀಯರು ನೀಡಿದ್ದ ದೂರನ್ನು ಆಧರಿಸಿ ದಿಶಾ ಸಭೆಯಲ್ಲಿ ಪ್ರಶ್ನಿಸಿದ್ದೆ ಎಂದರು.

ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆಯಿಂದ ರಾಜ್ಯ ಸರಕಾರಕ್ಕೆ 1200 ಕೋಟಿ ರೂ. ನಷ್ಟವಾಗಿದೆ. ಇಷ್ಟು ರಾಜಧನ ವಸೂಲಿ ಮಾಡಿದ್ದರೆ, ಆ ಹಣವನ್ನು ಮಂಡ್ಯ ಅಭಿವೃದ್ಧಿಗೆ ಬಳಸಬಹುದಿತ್ತು. ಆದರೀಗ ಗಣಿ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚಲು ಡ್ರೋಣ್‌ ಸರ್ವೆಗೂ ಹಣ ಇಲ್ಲ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು. ಕೆಆರ್‌ಎಸ್‌ ಸುತ್ತಮುತ್ತ ಆತಂಕದ ವಾತಾವರಣ ಇರುವ ಬಗ್ಗೆ ಎಲ್ಲೆಡೆ ವರದಿ ಆಗುತ್ತಿದೆ. ಈಗಾಗಲೇ ನಾನು ಕೂಡ ಸಭೆಯಲ್ಲಿ ಬಿರುಕಾಗಿದೆಯಾ ಎಂದು ಪ್ರಶ್ನೆ ಮಾಡಿದೆ. ಈಗ ಏನೂ ಆಗಿಲ್ಲ ಅಂದರೆ ಸರಿ. ಹಾಗಂತ ಇನ್ನು 10 ವರ್ಷ ಬಿಟ್ಟು ಕೆಆರ್‌ಎಸ್‌ ಡ್ಯಾಂ ಒಡೆದು ಹೋದರೆ ಪರವಾಗಿಲ್ವಾ? 50 ವರ್ಷ ಬಿಟ್ಟು ಒಡೆದರೆ ಸರಿನಾ? ಕೊರೊನಾ ಬರುವ ಮುಂಚೆ ಮಾಸ್ಕ್‌ ಹಾಕೊಳ್ಳಿ, ಸ್ಯಾನಿಟೈಸ್‌ ಮಾಡ್ಕೊಳ್ಳಿ ಅಂತ ಹೇಳ್ತಿವಿ. ಹಾಗಂತ ನಮಗೆ ಕೊರೊನಾ ಬಂದಿದೆ ಅಂತ ತಿಳಿದುಕೊಳ್ಳೊಕ್ಕಾಗುತ್ತಾ ಎಂದು ಪ್ರಶ್ನಿಸಿದರು.

‘ಮಂಡ್ಯ ಜಿಲ್ಲೆಯಲ್ಲಿ ಇರುವ ಮನೆಹಾಳರನ್ನು ಸುಮ್ಮನೆ ಬಿಡಬಾರದು’; ನಾಗಮಂಗಲ ಶಾಸಕ ಕಿಡಿ

ಸರಕಾರವನ್ನಾಗಲಿ, ಮತ್ಯಾರನ್ನೋ ಆಗಲಿ ಚಾರ್ಜ್‌ ಮಾಡೋದು ನನ್ನ ಉದ್ದೇಶ ಅಲ್ಲ. ಅಕ್ರಮದ ಬಗ್ಗೆ ಹೋರಾಡುವ ಮನಸ್ಥಿತಿ ಇರುವ ಎಲ್ಲರ ಸಹಕಾರ ಕೇಳುತ್ತೇನೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವವರೆಗೂ ಹೋರಾಟ ಮಾಡುತ್ತೇನೆ ಎಂದರು. ಮಂಡ್ಯ, ಶ್ರೀರಂಗಪಟ್ಟಣದ ಕೆಲವೆಡೆ, ಕೆಲವರು ನನ್ನ ಕಾರಿಗೆ ಅಡ್ಡ ಹಾಕುವುದು ಸೇರಿದಂತೆ ಇನ್ನಿತರೆ ಚಟುವಟಿಕೆಗಳ ಮೂಲಕ ಅಡ್ಡಿಪಡಿಸು ತ್ತಿದ್ದಾರೆ. ಈ ಕುರಿತಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆಗೆ ಚರ್ಚಿಸುವೆ ಎಂದು ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *