ಜೇವರ್ಗಿಯಲ್ಲಿ ವಿಜ್ಞಾನ ಕೇಂದ್ರ, ನಕ್ಷತ್ರಾಲಯ ಪ್ರಾರಂಭ: ಡಾ. ಅಜಯಸಿಂಗ್

ಶರವೇಗದಲ್ಲಿ ಪ್ರಗತಿ ಹೊಂದುತ್ತಿರುವ ಪಟ್ಟಣ ಹಾಗೂ ಸುತ್ತಲಿನ ಮಕ್ಕಳು ಹಾಗೂ ಯುವಕರಿಗಾಗಿ ವಿಜ್ಞಾನ ಕೇಂದ್ರ ಹಾಗೂ ನಕ್ಷತ್ರಾಲಯ (ಪ್ಲಾನಿಟೋರಿಯಮ್) ಯೋಜನೆಗೆ ಸಂಕಲ್ಪ ತೊಟ್ಟಿರುವುದಾಗಿ ಶಾಸಕರೂ ಹಾಗೂ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್ ಅವರು ಹೇಳಿದರು.
ಬುಧವಾರ ಜೇವರ್ಗಿ ಪಟ್ಟಣದಲ್ಲಿ ಜರುಗಿದ ತ್ರೈಮಾಸಿಕ ಪ್ರಗತಿ ಯೋಜನೆಗಳ ಪರಿಶೀಳನೆಯ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಮಹತ್ವಾಕಾಂಕ್ಷಿ ಯೋಜನೆಯ ಕುರಿತಂತೆ ರಾಜ್ಯದ ಉಪ ಮುಖ್ಯಮಂತ್ರಿಗಳೂ ಆದ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಅವರೊಂದಿಗೆ ಒಂದು ಸುತ್ತಿನ ಚರ್ಚೆ ಮಾಡಿರುವೆ. ವಿಜ್ಞಾನ ಕೇಂದ್ರ ಹಾಗೂ ನಕ್ಷತ್ರಾಲಯ ಯೋಜನೆ ಅನುಷ್ಠಾನಕ್ಕಾಗಿ ತಂದೆ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಪ್ರತಿಷ್ಠಾನದಿಂದ ಅಗತ್ಯ ಜಮೀನು ಕೂಡ ಒದಗಿಸಲು ಸಿದ್ಧ ಎಂದರು.
ಉನ್ನತ ಶಿಕ್ಷಣ ಸಚಿವರು ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನು ಕೊಟ್ಟಿದ್ದಾರೆ. ಸರ್ಕಾರ ಹಾಗೂ ಧರ್ಮಸಿಂಗ್ ಪ್ರತಿಷ್ಠಾನದ ಸಹಯೋಗದಲ್ಲಿ ಸದರಿ ವಿಜ್ಞಾನ ಕೇಂದ್ರ, ಪ್ಲಾನಿಟೋರಿಯಂ ಯೋಜನೆ ಸಾಕಾರಗೊಳ್ಳಬೇಕಾಗಿದೆ. ತಾಲ್ಲೂಕಿನಿಂದ ಸೂಕ್ತ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ಆ ಜವಾಬ್ದಾರಿಯನ್ನು ಇಲ್ಲಿನ ಲೋಕೋಪಯೋಗಿ ಇಲಾಖೆಯ ಅಭಿಯಂತರರು ನಿಭಾಯಿಸಬೇಕು ಎಂದು ಅವರು ಸೂಚಿಸಿದರು.
ಧರ್ಮಸಿಂಗ್ ಪ್ರತಿಷ್ಠಾನವು ಈಗಾಗಲೇ 100 ಹಾಸಿಗೆಗಳ ಸಾಮಥ್ರ್ಯದ ಮಹಿಳೆಯರು ಹಾಗೂ ಮಕ್ಕಳಿಗಾಗಿಯೇ ಆಸ್ಪತ್ರೆ ಯೋಜನೆಗೂ ಸಹ ಭೂಮಿ ನೀಡಿದೆ. ಅದೇ ಭೂಮಿಯ ಪಕ್ಕದಲ್ಲಿಯೇ ವಿಜ್ಞಾನ ಕೇಂದ್ರ ಹಾಗೂ ಪ್ಲಾನಿಟೋರಿಯಂ ಯೋಜನೆಗೂ ಭೂಮಿ ನೀಡಲು ಸಿದ್ಧವಿದೆ. ಸದರಿ ಯೋಜನೆಗೆ ಅದೆಷ್ಟು ಜಮೀನು ಬೇಕು, ಏನೆಲ್ಲ ಅಗತ್ಯಗಳು ಬೇಕು ಎಂಬುದರ ಕುರಿತು ತಾಂತ್ರಿಕ ಅಧ್ಯಯನ ಮಾಡಿ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮುರಳೀಧರ್ ಅವರಿಗೆ ಶಾಸಕರು ತಾಕೀತು ಮಾಡಿದರು.
ಸದ್ಯ ಕಲಬುರ್ಗಿಯಲ್ಲಿರುವ ಜಿಲ್ಲಾ ವಿಜ್ಞಾನ ಕೇಂದ್ರ, ಪ್ಲಾನಿಟೋರಿಯಂ ಹೊರತುಪಡಿಸಿ ಮತ್ಯಾವ ತಾಲ್ಲೂಕಿನಲ್ಲಿ ಇಂತಹ ಕೇಂದ್ರವಿಲ್ಲ. ವಿಜ್ಞಾನ ಕೇಂದ್ರ ಮಕ್ಕಳಲ್ಲಿನ ಮೂಲ ವಿಜ್ಞಾನ, ಕಲಿಕಾ ಆಸಕ್ತಿ ಪ್ರೋತ್ಸಾಹಿಸುವುದಲ್ಲದೇ ಜನಮನದಲ್ಲಿ ವೈಜ್ಞಾನಿಕ ಮನೋಭಾವ ಭೂಮಿಕೆ ಹುಟ್ಟುಹಾಕುವಲ್ಲಿ ತನ್ನದೇ ಆದ ಪಾತ್ರ ನಿಭಾಯಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಗಣಗೌಡ ಪಾಟೀಲ್ ಅವರು ಮಾತನಾಡಿ, ಮತಕ್ಷೇತ್ರದ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕುಗಳಲ್ಲಿ 32 ಸಾವಿರ ಮಕ್ಕಳು ಹಾಗೂ ಗರ್ಭಿಣಿಯರು ಇದ್ದಾರೆ. ಐದು ವರ್ಷದೊಳಗಿನ ಮಕ್ಕಳಲ್ಲಿ 2.210 ಮಂದಿ ಸಾಧಾರಣ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 64 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಆ ಪೈಕಿ 17 ಮಕ್ಕಳನ್ನು ಪುನರ್ವಸತಿ ಕೇಂದ್ರದಲ್ಲಿಡಲಾಗಿದೆ ಎಂದರು.
ಜೇವರ್ಗಿಯಲ್ಲಿ ಇರುವಂತೆ ಅಪೌಷ್ಠಿಕ ಮಕ್ಕಳ ಯೋಗಕ್ಷೇಮ ವಿಚಾರಣೆಗೆ ಯಡ್ರಾಮಿಯಲ್ಲೂ ಸಹ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡುವ ಅಗತ್ಯತೆ ಕುರಿತು ಒತ್ತಿ ಹೇಳಿದ ಅವರು, ಜೇವರ್ಗಿಯಲ್ಲಿರುವ 355 ಅಂಗನವಾಡಿಗಳ ಪೈಕಿ 247 ಸ್ವಂತ ಕಟ್ಟಡಗಳನ್ನು ಹೊಂದಿದ್ದು, 48 ಕಟ್ಟಡಗಳು ಕಾಮಗಾರಿ ಪ್ರಗತಿಯಲ್ಲಿವೆ. ತಾಲ್ಲೂಕಿನಲ್ಲಿ ಕಳೆದ ಏಪ್ರಿಲ್‍ನಿಂದ ಇಲ್ಲಿಯವರೆಗೂ 49 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ ಎಂದರು.
ಶಾಸಕ ಡಾ. ಅಜಯಸಿಂಗ್ ಅವರು ಮಾತನಾಡಿ, ಯಡ್ರಾಮಿಯಲ್ಲಿಯೂ ಅಪೌಷ್ಠಿಕ ಮಕ್ಕಳ ಪುನರ್ವಸತಿಗೆ ಕೇಂದ್ರ ತೆರೆಯಲು ಅಗತ್ಯ ಕ್ರಮ ಜರುಗಿಸಲಾಗುತ್ತಿದೆ. ಬಾಲ್ಯ ವಿವಾಹ ತಡೆಗೆ ಜನಜಾಗೃತಿಗಾಗಿ ಧರ್ಮಸಿಂಗ್ ಪ್ರತಿಷ್ಠಾನ ಕೆಲಸ ಮಾಡಲಿದೆ. ಅದಲ್ಲದೇ 3ನೇ ಅಲೆ ಮಕ್ಕಳಿಗೆ ಬಾಧಿಸದಂತೆ ಪೌಷ್ಠಿಕಾಂಶಯುಕ್ತ ಕಿಟ್‍ಗಳನ್ನು ವಿತರಣೆ ಬಗ್ಗೆಯೂ ಚಿಂತನೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಸೇರಿ ಕೈಗೊಳ್ಳಬಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಕಡಿಮೆ ಟೆಂಡರ್ ಹೋದರೆ ಅಂತಹ ಕಾಮಗಾರಿಗಳ ಮೇಲೆ ತೀವ್ರ ನಿಗಾ ಇಡುವಂತೆ ಸೂಚಿಸಿದ ಶಾಸಕರು, ಜೇವರ್ಗಿ ಹಾಗೂ ಯಡ್ರಾಮಿ ಲೋಕೋಪಯೋಗಿ ವ್ಯಾಪ್ತಿಯಲ್ಲಿನ ಅನೇಕ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಕಡಿಮೆ ದರ ನಮೂದಿಸಿ ಟೆಂಡರ್ ಗಿಟ್ಟಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು. ಕಡಿಮೆ ಟೆಂಡರ್ ಹೋದವರು ಮಾಡುವ ಕಾಮಗಾರಿ ಮೇಲೆ ತೀವ್ರ ನಿಗಾ ಇಡಬೇಕು ಎಂದು ಅಭಿಯಂತರ ಮುರಳೀಧರ್ ಅವರಿಗೆ ಹೇಳಿದರು.
ಟೆಂಡರ್ ಮೊತ್ತ ವೈಜ್ಞಾನಿಕವಾಗಿಯೇ ನಿಗದಿಯಾಗಿರುತ್ತದೆ. ಗುತ್ತಿಗೆದಾರರು ತಮ್ಮಲ್ಲಿನ ಒಳಪೈಪೋಟಿಗಾಗಿ ಕಡಿಮೆ ದರಕ್ಕೆ ಹೋಗುತ್ತಾರೆ. ಆಗ ಕಾಮಗಾರಿ ಹೇಗೆ ಮಾಡುತ್ತಾರೆ? ಅದರಲ್ಲಿ ಗುಣಮಟ್ಟ ಹೇಗೆ ನಿರೀಕ್ಷೆ ಮಾಡಬಹುದು? ಎಂದು ಖಾರವಾಗಿ ಪ್ರಶ್ನಿಸಿದ ಶಾಸಕರು, ಕಡಿಮೆ ಟೆಂಡರ್ ಹೋಗುವವರು ಹೋಗಲಿ, ಗುಣಮಟ್ಟದಲ್ಲಿ ಯಾವುದೇ ರಾಜಿ ಇರದಂತೆ ಸದರಿ ಕಾಮಗಾರಿಗಳು ಆಗಬೇಕು ಎಂದು ತಾಕೀತು ಮಾಡಿದರು,
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಮಗ್ರ ಪ್ರಗತಿ ಸೂಚ್ಯಾಂಕದಂತೆಯೇ ಕಾಮಗಾರಿ ದರ ನಿಗದಿಯಾಗಿರುವಾಗ ಗುತ್ತಿಗೆದಾರರು ಕಡಿಮೆ ಹೇಗೆ ಹೋಗುತ್ತಾರೆ ಹಾಗೆ ಹೋದರೂ ಕಾಮಗಾರಿ ಗುಣಮಟ್ಟದಲ್ಲಿ ಮಾಡುತ್ತಾರೆ ಎಂಬುದು ಎಲ್ಲವೂ ತುಂಬಾ ಗೊಂದಲಮಯವಾಗಿದೆ. ಹಾಗಾದರೆ ಕಾಮಗಾರಿ ಒಟ್ಟು ಮೊತ್ತವನ್ನೇ ಮರು ನಿಗದಿ ಮಾಡಿರಿ ಎಂದು ಸಲಹೆ ನೀಡಿದ ಅವರು, ಕಡಿಮೆ ಟೆಂಡರ್ ಕಾಮಗಾರಿಗಳು ಗುಣಮಟ್ಟ ಕಾಪಾಡುವ ವಿಷಯದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವಿಶೇಷ ಆಸಕ್ತಿ ತೋರಿಸಬೇಕು ಎಂದು ಸೂಚಿಸಿದರು.
ಚೆನ್ನೂರ್, ಕಲ್ಲಹಂಗರಗಾ ಸಿ.ಸಿ. ರಸ್ತೆ, ಅಂಬೇಡ್ಕರ್ ಭವನದ ಕಾಮಗಾರಿಗಳು, ಸಮುದಾಯ ಭವನಗಳು, ಶಾಲಾ, ಕಾಲೇಜು ಕೋಣೆಗಳು, ಗ್ರಂಥಾಲಯ, ಜೇವರ್ಗಿ ವೃತ್ತದ ಅಭಿವೃದ್ಧಿಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವಂತೆ ತಾಕೀತು ಮಾಡಿದ ಶಾಸಕರು, ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಗೂ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಡಕೋಳ್, ಯನಗುಂಟಿ, ಮಂದೇವಾಲ್, ಸಾತಖೇಡ್ ಸೇರಿದಂತೆ ಏಳು ಕಡೆ ಸಾಗಿರುವ ಯಾತ್ರಿಕ್ ನಿವಾಸದ ಪ್ರಗತಿಯ ಕುರಿತು ನನಗೆ ಎರಡು ದಿನಗಳಲ್ಲಿ ಸ್ಥಳ ವರದಿ ಹಾಗೂ ಭಾವಚಿತ್ರಗಳೊಂದಿಗೆ ಸಲ್ಲಿಸಬೇಕು ಎಂದು ಅವರು ಹೇಳಿದರು.
ಅಭಿಯಂತರ ಮುರುಳೀಧರ್ ಅವರು ಮಾತನಾಡಿ, ಪಟ್ಟಣದ ಕ್ರೀಡಾಂಗಣ ಕಾಮಗಾರಿ ಸಾಗಿದ್ದು, ರನ್ನಿಂಗ್ ಟ್ರ್ಯಾಕ್ ಕಾಮಗಾರಿ ಕೆಲಸ ಸಾಗಿದೆ. ಗುತ್ತಿಗೆದಾರ ಗಿರಣಿ ಅವರು ಕೆಲಸ ನಿಧಾನವಾಗಿ ಮಾಡುತ್ತಿದ್ದಾರೆ. ಅವರಿಗೆ ನೋಟಿಸ್ ನೀಡಲಾಗಿದೆ. ಅಲ್ಲಿ ಚರಂಡಿ ಕಟ್ಟಬೇಕಿದೆ. ಆ ಕೆಲಸ ಕೃಷ್ಣಾ ಭಾಗ್ಯ ಜಲ ನಿಗಮ ಮಾಡಿಕೊಟ್ಟರೆ ಇಡೀ ಕ್ರೀಡಾಂಗಣಕ್ಕೆ ಕಂಪೌಂಡ್ ಕಟ್ಟಲು ಅನುಕೂಲ ಆಗುತ್ತದೆ ಎಂದರು.
ಆರ್‍ಐಡಿಎಫ್ ಯೋಜನೆಯಲ್ಲಿ ನೆಲೋಗಿ, ಬಿಲ್ಲಾಡ್, ಬಿಳವಾರ್, ಇಜೇರಿ, ಹರವಾಳ್, ದೋಟಿಹಾಳ್, ಬಳೂಂಡಗಿ ಹರನಾಳ್, ಆಂದೋಲಾ, ಗುಡೂರ್ ಮುಂತಾದೆಡೆ ನಡೆದ ಕಾಮಗಾರಿಗಳ ಕುರಿತು ಸಭೆಯಲ್ಲಿ ಶಾಸಕರು ಚರ್ಚೆ ಮಾಡಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *