ಕಲಬುರಗಿ : ಕ್ರೀಡಾಂಗಣದ ಹಿಂದಿನ ನಾಲಾ ನೀರಿನಲ್ಲಿ ಮರಿ ಮೊಸಳೆ ಪತ್ತೆ
ಕಲಬುರಗಿ : ನಗರದ ಹೃದಯ ಭಾಗದಲ್ಲಿರುವ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದ ಹಿಂಭಾಗದಲ್ಲಿರುವ ರಾಜಾಪುರ ಪ್ರದೇಶದ ನಾಲಾ ನೀರಿನಲ್ಲಿ ಇತ್ತೀಚೆಗಷ್ಟೇ ದೊಡ್ಡ ಮೊಸಳೆಯೊಂದು ಪತ್ತೆಯಾಗಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹರಿಬಿಟ್ಟಿದ್ದರಿಂದ ಆ ಪ್ರದೇಶದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಮೊಸಳೆ ಹಿಡಿಯುವ ಪರಿಣಿತರ ಮೂಲಕ ಕಾರ್ಯಾಚರಣೆಯನ್ನು ಆರಂಭಿಸಿದರು.
ಆರೇಳು ಜನರು ಮೊಸಳೆ ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದರು. ಸುತ್ತಮುತ್ತಲೂ ಗಿಡ, ಗಂಟಿಗಳ ಭಯಾನಕ ಪ್ರದೇಶದಲ್ಲಿ ನೀರು ನಿಂತಿದ್ದು, ಆ ನೀರಿನಲ್ಲಿ ಮೊಸಳೆ ಹುಡುಕಾಟವನ್ನು ಸಿಬ್ಬಂದಿಗಳು ಕೋಲು, ಬಡಿಗೆ, ಬಂಬೂ ಹಾಗೂ ಬಲೆಯ ಮೂಲಕ ಆರಂಭಿಸಿದರು. ಸಂಜೆ ವೇಳೆಗೆ ಮೊಸಳೆಯ ಸಣ್ಣ ಮರಿಯೊಂದು ಪತ್ತೆಯಿತು. ಅದನ್ನು ಅತ್ಯಂತ ಸುರಕ್ಷಿತವಾಗಿ ಹಿಡಿದ ಸಿಬ್ಬಂದಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.
ಮರಿ ಮೊಸಳೆ ಸಿಕ್ಕಿರುವುದರಿಂದ ಆ ಪ್ರದೇಶದ ನಾಲಾದಲ್ಲಿ ದೊಡ್ಡ, ದೊಡ್ಡ ಹೆಣ್ಣು ಹಾಗೂ ಗಂಡು ಮೊಸಳೆ ಇರುವುದು ದೃಢಪಟ್ಟಿದೆ. ಅಲ್ಲದೇ ಮರಿ ಮೊಸಳೆ ಪತ್ತೆಯಾಗಿರುವುದರಿಂದ ಇನ್ನೂ ಮರಿ ಮೊಸಳೆಗಳೂ ಸಹ ನೀರಿನಲ್ಲಿ ಇರುವ ಕುರಿತು ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಇಡೀ ಪ್ರದೇಶದಲ್ಲಿ ಮೊಸಳೆಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಸಿಬ್ಬಂದಿಗಳು ಮುಂದುವರೆಸಿದ್ದಾರೆ.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಸುನಿಲಕುಮಾರ್ ಚವ್ಹಾಣ್ ಅವರು ಮಾತನಾಡಿ, ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಮಳೆ ಬರುತ್ತಿದೆ. ಇದರಿಂದ ನಾಲೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಇದರಿಂದಾಗಿ ಮೊಸಳೆಗಳನ್ನು ಹಿಡಿಯಲು ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ ಎಂದರು.
ಮಳೆ ನಿಂತ ಮೇಲೆ ನಾಲೆಯಲ್ಲಿರುವ ನೀರು ಕಡಿಮೆಯಾದಲ್ಲಿ ಮೊಸಳೆಗಳನ್ನು ಹಿಡಿಯಲು ಸಾಧ್ಯವಾಗಲಿದೆ. ಆ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಮೊಸಳೆಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಆದಾಗ್ಯೂ, ಸಾರ್ವಜನಿಕರು ಯಾವುದೇ ಕಾರಣಕ್ಕೂ ನಾಲಾ ನೀರಿನಲ್ಲಿ ಇಳಿಯುವುದಾಗಲಿ, ದನ, ಕರುಗಳನ್ನು ಬಿಡುವುದಾಗಲಿ ಮಾಡಬಾರದು ಎಂದು ಅವರು ಮನವಿ ಮಾಡಿದರು. ಮೊಸಳೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಿದ್ದರಿಂದ ಸಾರ್ವಜನಿಕ ವಲಯದಲ್ಲಿ ನೆಮ್ಮದಿಯ ನಿಟ್ಟಿಸಿರು ಬಿಟ್ಟರೂ ಸಹ ಕಾರ್ಯಾಚರಣೆಯಲ್ಲಿ ಕೇವಲ ಮರಿ ಮೊಸಳೆ ಪತ್ತೆಯಾಗಿದ್ದರಿಂದ ಆ ನಾಲಾ ನೀರಿನಲ್ಲಿ ಬಹಳಷ್ಟು ಮೊಸಳೆಗಳಿವೆ ಎಂಬ ಭೀತಿಯು ಆವರಿಸುವಂತಾಗಿದೆ.