ಕಲಬುರಗಿ : ಗ್ರಂಥಪಾಲಕರ ಹುದ್ದೆಗಳಿಲ್ಲದೇ ಪದವಿ ಕಾಲೇಜುಗಳ ನೇಮಕಾತಿ ಅಧಿಸೂಚನೆ ರದ್ದತಿಗೆ ಆಗ್ರಹ
ಕಲಬುರಗಿ :ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 147 ಗ್ರಂಥಪಾಲಕರ ಹುದ್ದೆಗಳನ್ನು ಪರಿಗಣಿಸದೇ ಸುಮಾರು 1552 ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಕೂಡಲೇ ರದ್ದುಗೊಳಿಸಿ ಗ್ರಂಥಪಾಲಕರ ಹುದ್ದೆಗಳ ನೇಮಕಾತಿಯನ್ನು ಪರಿಗಣಿಸಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಕಲ್ಯಾಣ ಕರ್ನಾಟಕ ಲೈಬ್ರರಿಯನ್ಸ್ ಅಸೋಶಿಯೇಶನ್ ಅಧ್ಯಕ್ಷ ಡಾ. ಸುರೇಶ್ ಅವರು ಒತ್ತಾಯಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೇಮಕಾತಿಯಲ್ಲಿ ಹಿಂದಿನಂತೆ ಗ್ರಂಥಪಾಲಕರ ಹುದ್ದೆಗಳನ್ನು ಕಡೆಗಣಿಸಿ ಅಧಿಸೂಚನೆಯನ್ನು ಹೊರಡಿಸುವುದನ್ನು ರಾಜ್ಯ ಸರ್ಕಾರವು ಮುಂದುವರೆಸಿದೆ ಎಂದು ಆಕ್ರೋಶ ಹೊರಹಾಕಿದರು.
ಸರ್ಕಾರವು ಈಗಾಗಲೇ ಸರ್ಕಾರಿ ಪದವಿ ಕಾಲೇಜಿನ ವಿವಿಧ ವಿಷಯಗಳ 1242 ಹಾಗೂ 310 ಪ್ರಿನ್ಸಿಪಾಲರು ಹುದ್ದೆಗಳೂ ಸೇರಿದಂತೆ ಒಟ್ಟು 1552 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅದರಲ್ಲಿ 147 ಗ್ರಂಥಪಾಲಕರ ನೇಮಕಾತಿಯನ್ನು ಪರಿಗಣಿಸಿಲ್ಲ. ಆದ್ದರಿಂದ ಕೂಡಲೇ ಅಧಿಸೂಚನೆ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ 2019ರಲ್ಲಿಯೂ ಸಹ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ನೇಮಕಾತಿಯಲ್ಲಿ ಗ್ರಂಥಪಾಲಕರ ಹುದ್ದೆಗಳನ್ನು ಪರಿಗಣಿಸಿರಲಿಲ್ಲ. ಈಗಲೂ ಸಹ ಅದೇ ನಿರ್ಲಕ್ಷ್ಯ ಮುಂದುವರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನಂತರ 73 ಹುದ್ದೆಗಳ ನೇಮಕಾತಿಗೆ ಒಪ್ಪಿಗೆ ಕೊಟ್ಟಿತ್ತು. ಈಗಲೂ ಸಹ ಅದೇ ಸ್ಥಿತಿ ಮುಂದುವರೆಯಬಾರದು ಎಂದರು.
ಡಾ. ಗಣಪತಿ ಶಿಂಧೆ ಅವರು ಮಾತನಾಡಿ, ರಾಜ್ಯದಲ್ಲಿನ 28 ವಿಶ್ವವಿದ್ಯಾಲಯಗಳಲ್ಲಿ ಖಾಯಂ ಗ್ರಂಥಪಾಲಕರನ್ನು ನೇಮಕಾತಿ ಮಾಡಿಲ್ಲ. ಇದರಿಂದಾಗಿ ಸಂಶೋಧನಾ ವಿದ್ಯಾರ್ಥಿಗಳೂ ಸೇರಿದಂತೆ ನೆಟ್, ಸೆಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರೂ ಸಹ ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ಕೂಡಲೇ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಪಾಲಕರ ಖಾಯಂ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಸಾವಿತ್ರಿ ಕೃಷ್ಣ, ಡಾ. ಪರಶುರಾಮ್ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.