Monkey Surprise – ಮೃತ ವ್ಯಕ್ತಿಯ ತಲೆಗೆ ಮುತ್ತಿಕ್ಕಿದ ಕೋತಿ; ಅಂತ್ಯಕ್ರಿಯೆಯಲ್ಲಿ ಅಚ್ಚರಿ ಮೂಡಿಸಿದ ವಾನರ
ಬಳ್ಳಾರಿ: ಪ್ರಾಣಿಗಳಲ್ಲಿ ವಿಶೇಷ ಗುಣಗಳು ಅಡಗಿರುತ್ತವೆ ಎಂದು ಪದೆ ಪದೆ ರುಜುವಾತು ಆಗುತ್ತಿದೆ, ಸಾಕಿದ ನಾಯಿ ಮಾಲೀಕ ಸತ್ತಾಗ ಶವದ ಮುಂದೆ ರೋಧನೆ ಮಾಡಿ ಪ್ರಾಣ ಬಿಟ್ಟ ಉದಾಹರಣೆಗಳು ಸಾಕಷ್ಟಿವೆ. ಅಂತಹದೇ ಒಂದು ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಬಸವೇಶ್ವರ ಕ್ಯಾಂಪನಲ್ಲಿ ನಡೆದಿದೆ. ಬಸವೇಶ್ವರ ನಗರದ ಕ್ಯಾಂಪನಲ್ಲಿ ವಿಶ್ವನಾಥ ಎಂಬ ವೃದ್ಧ ವಯೋ ಸಹಜ ಕಾಯಿಲೆ ಯಿಂದ ಸಾವನ್ನಪ್ಪಿದ. ಮನೆಯ ಹಿರಿಯನನ್ನು ಕಳೆದುಕೊಂಡು ಸಂಬಂಧಿಕರು, ಮಕ್ಕಳು, ಮೊಮ್ಮಕ್ಕಳು ಅಪಾರ ದುಃಖದಲ್ಲಿ ಇದ್ದಂತಹ ಸಂದರ್ಭದಲ್ಲಿ ಕೋತಿಯೊಂದು ದಿಢೀರ್ ಪ್ರತ್ಯಕ್ಷ ವಾಗಿದೆ. ಮೃತಪಟ್ಟ ವಿಶ್ವನಾಥ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ಹೊದುಕೆ ತೆಗೆದು ನೋಡಿ ಅವರ ಮುಖಕ್ಕೆ ಮುತ್ತಿಟ್ಟು, ತಲೆ ಸವರಿ ಕಂಬನಿ ಮಿಡಿದಿತ್ತು. ಈ ದೃಶ್ಯ ನೋಡಿದ ಜನ ಒಂದು ಕ್ಷಣ ದಂಗ ಆಗಿದ್ದರು. ಇದು ನಿಜವಾಗಿಯೂ ನಡೆದ ಘಟನೆ.
ಇನ್ನು, ಮೃತ ವ್ಯಕ್ತಿಯ ಸುತ್ತಲೂ ರೋಧಿಸುತ್ತಿದ್ದ ಕುಟುಂಬಸ್ಥರ ನಡುವೆ ಏಕಾಏಕಿ ಪ್ರತ್ಯಕ್ಷವಾದ ಕೋತಿಯೊಂದು ಕಳೇಬರ ಅಂತಿಮ ದರ್ಶನ ಪಡೆದು ಮರಳಿತ್ತು. ನಂತರ ಉತ್ತರಾದಿ ಕ್ರಿಯೆ ವೇಳೆಯಲ್ಲಿಯೂ ಈ ಕೋತಿ ಹಾಜರಾಗಿತ್ತು. ಈ ಅಪರೂಪದ ಹಾಗೂ ಸೋಜಿಗದ ದೃಶ್ಯಾವಳಿಯನ್ನ ಅಲ್ಲಿದ್ದವರಲ್ಲೊಬ್ಬರು ಸೆರೆಹಿಡಿದಿದ್ದು, ಅದರ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.
ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಕ್ಯಾಂಪ್‍ನಲ್ಲಿ ಕಳೆದ ತಿಂಗಳು 30ರಂದು ವಿಶ್ವನಾಥ ರಾಜು (70) ನಿಧನರಾಗಿದ್ದರು. ಅದೇ ದಿನ ಕೋತಿಯು ಮೃತರ ಪಾರ್ಥಿವ ಶರೀರದ ಬಳಿ ಬಂದು ತಲೆ ಮೇಲಿನ ಹೊದಿಕೆ ತೆಗೆದು, ವ್ಯಕ್ತಿ ಮುಖದ ಮೇಲೆ ತಲೆ ಇಟ್ಟು ಮರುಗಿತ್ತು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿತ್ತು. ಇದಾದ 9 ದಿನಗಳ ನಂತರ ತುಂಗಭದ್ರಾ ನದಿ ಬಳಿ ಮೃತರ ಉತ್ತರಾದಿ ಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಇದೇ ಕೋತಿ ಭಾಗವಹಿಸಿ ಪುರೋಹಿತರ ತೊಡೆ ಮೇಲೆ ಕ್ಷಣ ಕಾಲ ಕುಳಿತಿದೆ. ಬಳಿಕ ಸ್ವಲ್ಪ ಪಾಯಸ ಸೇವಿಸಿ ಅಲ್ಲಿಂದ ಹೊರಟು ಹೋಗಿದೆ. ಇವೆಲ್ಲ ದೃಶ್ಯಗಳು ಸೆರೆಯಾಗಿದ್ದು, ಎಲ್ಲೆಡೆ ಹರಿದಾಡಿವೆ.
ಮೃತಪಟ್ಟ ವಿಶ್ವನಾಥ ಅವರು ರೈತರಾಗಿದ್ದರು. ಅವರಿಗೂ ಈ ಕೋತಿಗೂ ಯಾವುದೇ ತರಹದ ಒಡನಾಟ ಇರಲಿಲ್ಲ. ಆದರು ಕಪ್ಪು ಕೋತಿ ಮಾತ್ರ ಇಂತಹ ಘಟನೆ ಯಲ್ಲಿ ಭಾಗಿಯಾಗುವುದರ ಮೂಲಕ ಆಶ್ಚರ್ಯ ಮೂಡಿಸಿದೆ. ಮೃತ ವಿಶ್ವನಾಥ ಅವರ ಮಾವ ವೆಂಕಟರಾಮರಾಜು ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದು, ವಿಶ್ವನಾಥ ಅವರು ಅನಾರೋಗ್ಯದಿಂದ ಮೃತರಾಗಿದ್ದರು. ಅವರಿಗೂ ಕೋತಿಗಳಿಗೂ ಯಾವುದೇ ರೀತಿಯ ಒಡನಾಟವಿರಲಿಲ್ಲ. ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಚ್ಚರಿ ಮೂಡಿಸುವ ಘಟನೆಗಳನ್ನು ನಾವು ಕಣ್ಣಾರೆ ನೋಡಿರುತ್ತೇವೆ. ಆದರೆ ಒಡನಾಟ ಇಲ್ಲದಿದ್ದರೂ ಮೃತನ ಅಂತಿಮ ದರ್ಶನದಲ್ಲಿ ಭಾಗಿಯಾಗುವುದಲ್ಲದೆ, ಅಸ್ಥಿ ವಿಸರ್ಜನೆ ಸಂದರ್ಭದಲ್ಲಿ ಬಾಗಿ ಯಾಗಿ ಅಚ್ಚರಿ ಮೂಡಿಸಿದ ಕೋತಿ ಹಲವು ಪ್ರಶ್ನೆ ಗಳಿಗೆ ಎಡೆಮಾಡಿದೆ.