ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಭೇಟಿಗೆ ಹೋದಾಗ 6 ಬ್ಯಾಗ್ ಕೊಂಡೊಯ್ದಿದ್ದರು: ಎಚ್‌ಡಿ ಕುಮಾರಸ್ವಾಮಿ
ಹೈಲೈಟ್ಸ್:
- ಸಿಎಂ ಬಿಎಸ್‌ವೈ ಬಗ್ಗೆ ಹೊಸ ಬಾಂಬ್ ಸಿಡಿಸಿದ ಎಚ್‌ಡಿ ಕುಮಾರಸ್ವಾಮಿ
- ಪ್ರಧಾನಿ ಮೋದಿ ಭೇಟಿಗೆ ಹೋದಾಗ 6 ಬ್ಯಾಗ್ ಕೊಂಡೊಯ್ದಿದ್ದರು
- ಆದರೆ ಆ ಬ್ಯಾಗ್‌ನಲ್ಲಿ ಏನಿತ್ತು ಎಂದು ಗೊತ್ತಿಲ್ಲ ಎಂದ ಮಾಜಿ ಸಿಎಂ
ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದಿಲ್ಲಿಗೆ ಹೋಗುವಾಗ ಆರು ಬ್ಯಾಗ್‌ಗಳನ್ನು ಕೊಂಡೊಯ್ದಿದ್ದರು ಎಂಬ ಮಾಹಿತಿ ಬಂದಿದ್ದು, ಅದರಲ್ಲಿ ಏನಿತ್ತು ಎಂಬ ಬಗ್ಗೆ ಗೊತ್ತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಜ್ಯ ಜೆಡಿಎಸ್ ಕಚೇರಿ ‘ಜೆ.ಪಿ. ಭವನ’ದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ,”ಸಿಎಂ ಹಾಗೂ ಅವರ ಪುತ್ರ ವಿಶೇಷ ವಿಮಾನದಲ್ಲಿ ಆರು ದೊಡ್ಡ ಬ್ಯಾಗ್‌ನೊಂದಿಗೆ ಹೈಕಮಾಂಡ್ ಭೇಟಿಗೆ ತೆರಳಿದರು ಎಂಬ ಮಾಹಿತಿ ಇದೆ. ಆ ಬ್ಯಾಗ್‌ನಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಪ್ರಸ್ತಾಪಿಸುವ ವಿಷಯಗಳಿತ್ತೋ ಅಥವಾ ಬೇರೆ ಏನಾದರೂ ತುಂಬಿದ್ದರೋ ಗೊತ್ತಿಲ್ಲ.
ದೊಡ್ಡ ಉಡುಗೊರೆಯೋ, ಯಾವ ಉಡುಗೊರೆಯೋ ಅದೂ ಗೊತ್ತಿಲ್ಲ. ಹಾಗೆಯೇ ಪ್ರಧಾನಿ ಭೇಟಿಗೆ ಹೋದಾಗ ಆರು ಬ್ಯಾಗ್‌ಗಳು ಹೋದವೋ ಅಥವಾ ಸಿಎಂ ಒಬ್ಬರೇ ಹೋದರೋ ಎಂಬುದೂ ಗೊತ್ತಿಲ್ಲ. ರಾಜ್ಯದ ವಿಚಾರಗಳಿಗೆ ಸಂಬಂಧಪಟ್ಟಂತೆ ಸಿಎಂ ಮನವಿಗೆ ಕೇಂದ್ರ ಸರಕಾರ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡೋಣ,” ಎಂದು ಹೇಳಿದರು.