ಇಂದಿನಿಂದ ಸಂಸತ್‌ ಅಧಿವೇಶನ: 17 ಹೊಸ ವಿಧೇಯಕ ಮಂಡನೆಗೆ ಸಿದ್ಧತೆ, ಸರಕಾರದ ಮೇಲೆ ಸವಾರಿಗೆ ವಿಪಕ್ಷಗಳು ರೆಡಿ!

ಹೈಲೈಟ್ಸ್‌:

  • ಇಂದಿನಿಂದ ಸಂಸತ್‌ ಮುಂಗಾರು ಅಧಿವೇಶನ ಆರಂಭ
  • ಸರಕಾರದ ವಿರುದ್ಧ ಸವಾರಿಗೆ ವಿಪಕ್ಷಗಳು ಸರ್ವ ಸನ್ನದ್ದ
  • 17 ಹೊಸ ವಿಧೇಯಕ ಮಂಡನೆಗೆ ಕೇಂದ್ರ ಸರಕಾರ ಸಿದ್ಧತೆ

ಹೊಸದಿಲ್ಲಿ: ಕೋವಿಡ್‌ ಸೋಂಕಿನ ಆತಂಕದ ನಡುವೆಯೇ ಸಂಸತ್‌ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಇನ್ನು ಸದ್ಯಕ್ಕೆ ದೇಶದಲ್ಲಿನ ಸಮಸ್ಯೆಗಳಾದ ಇಂಧನ ಬೆಲೆ ಏರಿಕೆ, ಕೊರೊನಾ ನಿರ್ವಹಣೆ, ರೈತರ ಪ್ರತಿಭಟನೆ, ಲಸಿಕೆಯ ಕೊರತೆಯಂತಹ ವಿಚಾರಗಳನ್ನು ಸಂಬಂಧ ಸರಕಾರದ ವಿರುದ್ಧ ಸವಾರಿಗೆ ಪ್ರತಿಪಕ್ಷಗಳು ಸಜ್ಜಾಗಿದೆ. ಹೀಗಾಗಿ ಮೊದಲ ದಿನದಿಂದಲೇ ಕಲಾಪ ಕಾವೇರುವ ಸಾಧ್ಯತೆಯಿದೆ. ಇದರ ನಡುವೆ ರೈತ ಸಂಘಟನೆಗಳು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲು ಸಜ್ಜಾಗಿವೆ.

ಜುಲೈ 19ರಿಂದ 17ನೇ ಲೋಕಸಭೆಯ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಆಗಸ್ಟ್‌ 13ರಂದು ಮುಕ್ತಾಯವಾಗಲಿದೆ. ಈ ಬಾರಿ 17 ಹೊಸ ವಿಧೇಯಕಗಳನ್ನು ಮಂಡಿಸಿ, ಅನುಮೋದನೆ ಪಡೆಯಲು ಸರಕಾರ ಉದ್ದೇಶಿಸಿದೆ. ಇವುಗಳ ಜತೆಗೆ ಈಗಾಗಲೇ ಬಾಕಿ ಇರುವ ಹಲವು ವಿಧೇಯಕಗಳಿಗೂ ಸಂಸತ್ತಿನ ಅಂಗೀಕಾರ ಪಡೆಯಲು ಕಸರತ್ತು ನಡೆಯಲಿದೆ.

ಹೊಸ ವಿಧೇಯಕಗಳ ಪೈಕಿ ಮೂರು ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾದ ವಿಧೇಯಕಗಳಾಗಿದ್ದು, 6 ವಾರಗಳೊಳಗೆ ಸದನದ ಅನುಮೋದನೆ ಪಡೆಯಬೇಕಿದೆ. ಅಗತ್ಯ ರಕ್ಷಣೆ ಸೇವಾ ವಿಧೇಯಕ, ರಾಷ್ಟ್ರ ರಾಜಧಾನಿ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿವಾಯು ಗುಣಮಟ್ಟ ನಿರ್ವಹಣೆ ಆಯೋಗ ವಿಧೇಯಕ ಸೇರಿ ಹಲವು ಹೊಸ ವಿಧೇಯಕಗಳನ್ನು ಮಂಡಿಸಲಾಗುತ್ತದೆ.

ಕೊರೊನಾ ನಿಯಮ ಪಾಲನೆ
ಸಾಮಾಜಿಕ ಅಂತರ ಸೇರಿ ಎಲ್ಲಮುನ್ನೆಚ್ಚರಿಕೆ ಕ್ರಮ ಪಾಲಿಸಲು ವ್ಯವಸ್ಥೆ ಮಾಡಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿಏಕಕಾಲಕ್ಕೆ ಕಲಾಪ ನಡೆಯಲಿದ್ದು, 19 ಕಲಾಪಗಳು ನಡೆಯಲಿವೆ. ಬೆಳಗ್ಗೆ 11ರಿಂದ ಸಂಜೆ 6ರವರೆಗೆ ಕಲಾಪಗಳು ನಡೆಯಲಿದೆ.

ಸವಾಲಿಗೆ ಪ್ರತಿಪಕ್ಷಗಳು ಸನ್ನದ್ಧ!

ತೈಲ ಬೆಲೆ ಏರಿಕೆ, ಕೃಷಿ ಕಾಯಿದೆಗಳು, ಕೊರೊನಾ 2ನೇ ಅಲೆಯಲ್ಲಿ ಉಂಟಾದ ಸಮಸ್ಯೆಗಳು, ರಾಜ್ಯಗಳಲ್ಲಿ ಲಸಿಕೆ ಸಮಸ್ಯೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಅಲ್ಲದೆ, ಶತಾಯಗತಾಯ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂದು ಪ್ರತಿಪಕ್ಷಗಳು ನಿರ್ಧರಿಸಿದ್ದು, ಸಂಸತ್ತಿನ ಉಭಯ ಸದನಗಳಲ್ಲಿರೈತರ ಸಮಸ್ಯೆಗಳ ಕುರಿತು ನಿಲುವಳಿ ಮಂಡಿಸಲು ಮುಂದಾಗಿವೆ.

ಸಹಕಾರ ನೀಡಿ- ಪ್ರಧಾನಿ ಮನವಿ!
ಈ ನಡುವೆ, ಸುಗಮ ಸಂಸತ್‌ ಕಲಾಪಕ್ಕೋಸ್ಕರ ಭಾನುವಾರ ಸರ್ವಪಕ್ಷ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಪ್ರತಿಪಕ್ಷಗಳ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಕಲಾಪವನ್ನು ಸುಗಮವಾಗಿ ನಡೆಯಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಸಂಸದೀಯ ಗುಂಪುಗಳ ಬದಲಾವಣೆ!
ಒಳ ಜಗಳ, ವೈಮನಸ್ಸಿನಿಂದ ಉತ್ಸಾಹ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚೈತನ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಅಧಿವೇಶನಕ್ಕೂ ಮುನ್ನ ಪಕ್ಷದ ಸಂಸದೀಯ ಗುಂಪುಗಳನ್ನು ಪುನರ್‌ರಚನೆ ಮಾಡಿದ್ದು, ತಮ್ಮ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿ ಪತ್ರಬರೆದಿದ್ದ ಜಿ-25 ಬಣದ ಕೆಲವು ಭಿನ್ನರಿಗೆ ಪ್ರಮುಖ ಸ್ಥಾನ ನೀಡಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿನ ಪಕ್ಷ ನಾಯಕನ ಸ್ಥಾನ ಉಳಿಸಿಕೊಂಡಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ಪಕ್ಷದ ಎರಡೂ ಸಂಸದೀಯ ಗುಂಪುಗಳನ್ನು ಬದಲಾವಣೆ ಮಾಡಲಾಗಿದೆ. ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಶಶಿ ತರೂರ್‌, ಮನೀಶ್‌ ತಿವಾರಿ, ಅಂಬಿಕಾ ಸೋನಿ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ರಂಥ ಹಿರಿಯ ತಲೆಗಳಿಗೂ ಮಣೆ ಹಾಕಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *