ಬಿಜೆಪಿ ನಾಯಕತ್ವ ಬದಲಾವಣೆ: ವಲಸಿಗರಲ್ಲಿ ಹೆಚ್ಚಿದ ಆತಂಕ, ರಾತ್ರೋರಾತ್ರಿ ಸಚಿವರುಗಳ ಸಭೆ!

ಹೈಲೈಟ್ಸ್‌:

  • ಬಿಜೆಪಿಯಲ್ಲಿ ಜೋರಾದ ನಾಯಕತ್ವ ಬದಲಾವಣೆಯ ಗೊಂದಲ
  • ಇತ್ತ ವಲಸಿಗರಲ್ಲಿ ಹೆಚ್ಚಿದ ಆತಂಕ, ಸಚಿವರುಗಳ ಸರಣಿ ಸಭೆ
  • ಸಿಎಂ ಬಿಎಸ್‌ವೈಗೆ ಮುಖ ತೋರಿಸಿದೆ ನಡೆದ ಯೋಗೇಶ್ವರ್‌

ಬೆಂಗಳೂರು: ನಾಯಕತ್ವ ಬದಲಾವಣೆ ಮಾತು ಕೇಳಿ ಬರುತ್ತಿರುವುದರಿಂದ ಆತಂಕಗೊಂಡಿರುವ ವಲಸಿಗ ಸಚಿವರು ತಮ್ಮ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಸೋಮವಾರ ರಾತ್ರಿ ಸಭೆ ನಡೆಸಿದ್ದಾರೆಂದು ಗೊತ್ತಾಗಿದೆ. ಸಚಿವರಾದ ಡಾ.ಕೆ.ಸುಧಾಕರ್‌, ಎಸ್‌.ಟಿ.ಸೋಮಶೇಖರ್‌, ಬಿ.ಸಿ. ಪಾಟೀಲ್‌ ಮತ್ತಿತರರು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.
ನಡೆದು ಹೋದ ಹೆಬ್ಬಾರ್‌!
ಈ ನಡುವೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ ನಿವಾಸಕ್ಕೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಧಾವಂತದಿಂದ ನಡೆದು ಹೋದದ್ದು ಗಮನ ಸೆಳೆದಿದೆ. ಮಂಗಳವಾರ ಬೆಳಗ್ಗೆ ತಮ್ಮ ನಿವಾಸದಿಂದ ಹೊರಬಂದು ಕಾರಿನ ಬಳಿ ನಿಂತ ಹೆಬ್ಬಾರ್‌, ಬಿ.ಸಿ.ಪಾಟೀಲ್‌ ಅವರಿಗೆ ಕರೆ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬರುವುದಾಗಿ ಪಾಟೀಲ್‌ ಹೇಳಿದರು ಎಂಬ ವರ್ತಮಾನವಿದೆ. ಆದರೆ, ಸಚಿವ ಬಿ.ಸಿ.ಪಾಟೀಲ್‌ ಬಾರದ ಕಾರಣ ಗಡಿಬಿಡಿಯಿಂದ ನಡೆದುಕೊಂಡೇ ತಮ್ಮ ಸಹೋದ್ಯೋಗಿಯ ನಿವಾಸಕ್ಕೆ ಹೆಬ್ಬಾರ್‌ ತೆರಳಿದರು. ಹೆಬ್ಬಾರ್‌ ಮತ್ತು ಬಿ.ಸಿ.ಪಾಟೀಲ್‌ ಮನೆಗಳು ಅಕ್ಕಪಕ್ಕದಲ್ಲೇ ಇವೆ.

ಸಹಿ ಸಂಗ್ರಹ ನಿಜ!
ಸಿಎಂ ಬಿಎಸ್‌ವೈ ಪರ 66 ಶಾಸಕರಿಂದ ಸಹಿ ಸಂಗ್ರಹ ಮಾಡಿಸಿದ್ದು ನಿಜ. ಆದರೆ, ಇಂಥ ಚಟುವಟಿಕೆ ನಡೆಸದಂತೆ ಸಿಎಂ ಸೂಚಿಸಿದ್ದರಿಂದ ಇದನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ನಾಯಕತ್ವ ಬದಲಾವಣೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಲಿಂಗಾಯತ ಸಮಾಜಕ್ಕೆ ಸೀಮಿತರಲ್ಲ. ಅವರು ಎಲ್ಲ ಸಮಾಜವನ್ನು ಪ್ರತಿನಿಧಿಸುವ ಜನನಾಯಕ. ಕಟೀಲ್‌ ಅಂತಹ ಮಾತಾಡಿದ್ದಾರೆಂದು ನಂಬುವುದಿಲ್ಲ. ಕಟೀಲ್‌ ಹೆಸರಿಗೆ ಮಸಿ ಬಳಿಯಲು ಯಾರೋ ಅಂತಹ ಕೆಲಸ ಮಾಡಿದಂತಿದೆ ಎಂದು ತಿಳಿಸಿದ್ದಾರೆ.

ಸಿಎಂಗೆ ಮುಖ ತೋರಿಸಿದ ಯೋಗೇಶ್ವರ್‌!
ಸಿಎಂ ಬಿಎಸ್‌ವೈ ಅವರಿಗೆ ಮುಖಾಮುಖಿಯಾಗುವ ಸನ್ನಿವೇಶ ಬಂದಾಗ ಸಚಿವ ಸಿ.ಪಿ.ಯೋಗೇಶ್ವರ್‌ ಮುಖ ತಿರುಗಿಸಿಕೊಂಡು ಬೇರೆ ದಾರಿ ಹಿಡಿದು ಹೊರಟ ಪ್ರಸಂಗ ವಿಧಾನಸೌಧದಲ್ಲಿ ನಡೆಯಿತು. ವಿಧಾನಸೌಧದ ಕೆಂಗಲ್‌ ಹನುಮಂತಯ್ಯ ಪ್ರವೇಶ ದ್ವಾರದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರೊಂದಿಗೆ ಯೋಗೇಶ್ವರ್‌ ಮಾತನಾಡುತ್ತಿದ್ದರು. ಆಗ ಸಿಎಂ ಅವರು ಸಭೆ ಮುಗಿಸಿ ಕೆಳಗಿಳಿದು ಬರುತ್ತಿದ್ದರು. ಇದನ್ನು ಕಂಡ ಯೋಗೇಶ್ವರ್‌ ವಿಧಾನಸೌಧದ ಮೆಟ್ಟಿಲು ಏರಲು ಹೊರಟರು. ಆಗ ಸಿಎಂ ಅವರಿಗೆ ಮುಖಾಮುಖಿ ಆಗುವುದನ್ನು ತಪ್ಪಿಸಿಕೊಳ್ಳಲು ಮುಖ್ಯ ಗೇಟ್‌ನ ಪಕ್ಕದ ಸಣ್ಣ ಗೇಟ್‌ನೊಳಗೆ ಹೊಕ್ಕರು. ಯೋಗೇಶ್ವರ್‌ ಅವರ ಈ ವರ್ತನೆ ತಮಾಷೆ ಪ್ರಸಂಗದಂತೆ ಕಂಡಿತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *