D K Shivakumar: ಕಾಂಗ್ರೆಸ್​ನಲ್ಲೂ ಮೇಜರ್ ಸರ್ಜರಿ, ಡಿಕೆಶಿ ಅಧ್ಯಕ್ಷ ಗಾದಿಗೇ ಕಂಟಕ? ಮುಂದಿನ ಅಧ್ಯಕ್ಷ ಯಾರು ?

ನವದೆಹಲಿ, ಜು. 23: ರಾಜಕಾರಣದಲ್ಲಿ ಯಾವಾಗ ಏನು ಬೇಕಾದರು ಸಂಭವಿಸಬಹುದು. ಯಾರು ಏನು ಬೇಕಾದರೂ ಆಗಬಹುದು.‌ ಇದಕ್ಕೆ ಬಹಳ ಒಳ್ಳೆಯ ಉದಾಹರಣೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು. ಮೊನ್ನೆ ಮೊನ್ನೆವರೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲಿಗರು ‘ಡಿಕೆಶಿ ಮುಂದಿನ‌ ಮುಖ್ಯಮಂತ್ರಿ’ ಎಂಬ ಘೋಷಣೆ ಮೊಳಗಿಸುತ್ತಿದ್ದರು. ಮುಂದಿನ ಸಿಎಂ ಎಂಬ ಮಾರ್ದನಿ ಕಿವಿಗೆ ಅಪ್ಪಳಿಸುತ್ತಿದ್ದರೂ ಡಿ.ಕೆ. ಶಿವಕುಮಾರ್ ಬಾಯಿ‌ ಬಿಡುತ್ತಿರಲಿಲ್ಲ. ಈ ಮೂಲಕ ‘ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ’ ಕಸರತ್ತು ನಡೆಸುತ್ತಿದ್ದರು. ಆದರೀಗ ಅವರಿಗೆ ಶಾಕ್ ಆಗುವಂತಹ ಮಾತುಗಳು ಕೇಳಿಬರುತ್ತಿವೆ. ರಾಜ್ಯ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದು ಗ್ಯಾರಂಟಿ ಆಗಿರುವುದರಿಂದ ಕಾಂಗ್ರೆಸ್ ಪಕ್ಷ ಈಗ ಲಿಂಗಾಯತ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿದೆ.

ಈಗಾಗಲೇ ರಾಜ್ಯ ಕಾಂಗ್ರೆಸಿನ ಪ್ರಮುಖ ಲಿಂಗಾಯತ ನಾಯಕರಾದ ಎಂ.ಬಿ. ಪಾಟೀಲ್ ಮತ್ತು ಶಾಮನೂರು ಶಿವಶಂಕರಪ್ಪ ‘ಲಿಂಗಾಯತರ ಮಹಾನ್ ನಾಯಕ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು’ ಎಂದು ಹೇಳುವ ಮೂಲಕ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ. ಇನ್ನೊಂದೆಡೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ಕೆಲ ದಿನಗಳ ಅಂತರದಲ್ಲಿ ಲಿಂಗಾಯತ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಬೇಕು ಎಂಬ ಕಸರತ್ತು ಶುರುವಾಗಿದೆ.

ರಾಜ್ಯ ಬಿಜೆಪಿಯ ಆಂತರಿಕ ಕಚ್ಚಾಟ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸಿಡಿ ರಾಜಕಾರಣ ಮತ್ತಿತರ ನಡೆಗಳಿಂದ ಜನ ಬೇಸತ್ತಿದ್ದು 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಹಿಡಿಯುವ ಅವಕಾಶ ಇದೆ. ಈಗ ಲಿಂಗಾಯತ ಮತ ಬ್ಯಾಂಕ್ ಅನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ತಂತ್ರದ ಭಾಗವಾಗಿ ಲಿಂಗಾಯತ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಯತ್ನಿಸಲಾಗುತ್ತಿದೆ ಎನ್ನಲಾಗುತ್ತಿದ್ದು ಕೆಪಿಸಿಸಿ ಅಧ್ಯ ಸ್ಥಾನಕ್ಕೆ ಹಿಂದೆಯೇ ಹೆಸರು ಕೇಳಿ ಬಂದಿದ್ದ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರೇ ಸದ್ಯದ ಫೆವರೀಟ್ ಕ್ಯಾಂಡಿಡೇಟ್ ಎಂದು ಕೂಡ ಚರ್ಚೆ ಆಗುತ್ತಿದೆ.

ಎಂಬಿಪಿ ಬಂದರೆ ಡಿಕೆಶಿ ಔಟ್: ಸಹಜವಾಗಿ ಈ ಬೆಳವಣಿಗೆ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ ಅವರ ಪಾಲಿಗೆ ನುಂಗಲಾರದ ತುತ್ತಾಗಿದೆ. ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟು ಹೈಕಮಾಂಡ್ ನಾಯಕರು ಸ್ಥಾನ‌ ಬಿಟ್ಟುಕೊಡುವಂತೆ ಸೂಚಿಸಿದರೆ ಡಿ.ಕೆ.‌ ಶಿವಕುಮಾರ್ ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ದೆಹಲಿ ಮಟ್ಟದಲ್ಲಿ ಹಿತ ಕಾಯಲು ಅವರ ಗಾಡ್ ಫಾದರ್ ಅಹಮದ್ ಪಟೇಲ್ ಈಗ ಇಲ್ಲದಿರುವುದರಿಂದ ಲಾಭಿ ನಡೆಸಲು ಸಾಧ್ಯವಿಲ್ಲ. ತಮ್ಮ ಮೇಲಿನ ಆಪಾದನೆಗಳಿಂದ ಅವರು ಇನ್ನು ಕೂಡ ಮುಕ್ತ ಆಗಿಲ್ಲದಿರುವುದರಿಂದ ಹೈಕಮಾಂಡ್ ಮಾತಿಗೆ ಸಡ್ಡು ಹೊಡೆಯಲು ಸಾಧ್ಯವಿಲ್ಲ. ಅನಿವಾರ್ಯವಾಗಿ ಡಿ.ಕೆ.‌‌ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಾಗಬಹುದು ಎನ್ನುತ್ತಿವೆ ಕಾಂಗ್ರೆಸ್ ಪಕ್ಷದ ಮೂಲಗಳು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *