Karnataka Politics – ಯಡಿಯೂರಪ್ಪ ಬದಲಾವಣೆ ಚರ್ಚೆ ಬಗ್ಗೆ ಮೌನ ತಾಳಿದ ಬಳ್ಳಾರಿ ರೆಡ್ಡಿ

ಬಳ್ಳಾರಿ: ಇತ್ತಿಚೀನ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಶಾಸಕ ಸೋಮಶೇಖರ್ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಮ್ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸೋಮಶೇಖರ್ ರೆಡ್ಡಿ, ಏನ್ ರಾಜಕೀಯನೊ ಏನೋ ಒಂದೂ ಅರ್ಥ ಆಗತ್ತಿಲ್ಲ. ಮುಂದಿನ ಬದಲಾವಣೆಗಳನ್ನು ಕಾದು ನೋಡೊಣ ಎಂದು ನಿಟ್ಟಿಸಿರು ಬಿಟ್ಟಿದ್ದಾರೆ. ಬಳ್ಳಾರಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಸೋಮಶೇಖರ್ ರೆಡ್ಡಿ, ಕಾರ್ಯಕ್ರಮ ಮುಗಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ಏನ್ ಆಗತಿದಿಯೋ ಏನೊ ಒಂದೂ ಅರ್ಥ ಆಗತಿಲ್ಲ, ನಂಗಂತೂ ನೋಡಿ ನೋಡಿ ಸಾಕಾಗಿ ಬಿಟ್ಟಿದೆ. ನೋಡಣ ಮುಂದಿನ ಬೆಳವಣಿಗೆ ಏನ ಆಗುತ್ತೆ ಅಂತಾ.  ಸದ್ಯ ಶ್ರೀ ರಾಮುಲು ಅವರಿಗೆ ಹೈಕಮಾಂಡ್​ನಿಂದ ಕರೆ ಬಂದಿತ್ತಂತೆ. ಹೀಗಾಗಿ ಅವರು ದೆಹಲಿಗೆ ಹೋಗಿ ಬಂದಿದ್ದಾರೆ. ಮುಖ್ಯವಾಗಿ ಅವರಿಗೆ ಡಿಸಿಎಮ್ ಹುದ್ದೆ ನೀಡಬೇಕು ಎಂಬುವ ವಿಚಾರವಾಗಿ ಚರ್ಚೆ ಮಾಡಲು ಇರಬೇಕು ಎಂದು ಅನ್ನಿಸುತ್ತೆ. ಆದರೆ ನನಗೆ ಅವರು ಹೇಳಿಲ್ಲ. ಅವರ ಆಪ್ತ ವಲಯದಿಂದ ನನಗೆ ಮಾಹಿತೆ ಇದೆ ಅಷ್ಟೇ. ನೋಡಣ ಮುಂದೆ ಎಲ್ಲವೂ ಗೊತ್ತಾಗುತ್ತೆ ಎಂದು ಬಳ್ಳಾರಿ ಶಾಸಕರೂ ಆದ ಸೋಮಶೇಖರ್ ರೆಡ್ಡಿ ಹೇಳಿದರು.

ಸೋಮಶೇಖರ್ ರೆಡ್ಡಿ ಯಾವಾಗಲೂ ಯಡಿಯೂರಪ್ಪ ಅವರ ಪರವಾಗಿ ಮಾತನಾಡುತ್ತಿದ್ದವರು. ಆದರೆ ಈ ಬಾರಿ ಮಾತ್ರ ಸಿ‌ಎಮ್ ಬದಲಾವಣೆ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಅವರು ಏನು ಮಾತನಾಡದೆ ಮೌನ ತಾಳಿರುವುದು ಮಾತ್ರ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ. ಈ ಹಿಂದೆ ಜನಾರ್ಧನ ರೆಡ್ಡಿ ಬಳ್ಳಾರಿಯಲ್ಲಿ ಇದ್ದಾಗ ಬಿಜೆಪಿ ಸರ್ಕಾರ ಬಳ್ಳಾರಿಯಿಂದಲೇ ಆಡಳಿತ ನಡೆಸುತ್ತಿತ್ತು ಎಂಬಂತಹ ಮಾತುಗಳು ಕೇಳಿಬರುವ ರೀತಿಯಲ್ಲಿ ರೆಡ್ಡಿ ಬಳಗದ ಹವಾ ಇತ್ತು. ಆದರೆ ಈ ಬಾರಿ ಮಾತ್ರ ರೆಡ್ಡಿಯ ಯಾವ ಮನವಿಗೂ ಬಿಎಸ್‌ವೈ ಸ್ಪಂದಿಸಿಲ್ಲ ಎಂಬುವುದು ಬಹು ಮಟ್ಟಿಗೆ ಗೋಚರವಾಗುತ್ತೆ.

ಮೊದಲ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಜನಾರ್ಧನ್ ರೆಡ್ಡಿ, ಕರುಣಾಕರ ರೆಡ್ಡಿ ಶ್ರೀ ರಾಮುಲು ಅವರಿಗೆಲ್ಲ ಸಚಿವ ಸ್ಥಾನ ಸಿಕ್ಕಿತ್ತು. ಜೊತೆಗೆ ಬಿಜೆಪಿ ಆಡಳಿತದಲ್ಲಿ ಸಾಕಷ್ಟು ಹಿಡಿತವನ್ನ ಅವರು ಸಾಧಿಸಿದ್ದರು. ಆದರೆ ಈ ಬಾರಿಯ ಸರ್ಕಾರದಲ್ಲಿ ಇವರ ಆಟ ಏನೂ ನಡೆಯಲಿಲ್ಲ. ಹೀಗಾಗಿ ಪರೋಕ್ಷವಾಗಿ ಬಿ.ಎಸ್.ವೈ ವಿರುದ್ಧ ರೆಡ್ಡಿ ಬ್ರದರ್ಸ್​ಗೆ ಅಸಮಾಧಾನ ಇದೆಯಾ ಎಂಬ ಅನುಮಾನ ದಟ್ಟವಾಗಿದೆ.

ಈ ಬಾರಿ ಅಖಂಡ ಬಳ್ಳಾರಿ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ಒಡೆಯ ಬೇಡಿ ಎಂದು ಸೋಮಶೇಖರ್ ರೆಡ್ಡಿ ಎಷ್ಟು ಬಾರಿ ಮನವಿ ಮಾಡಿದರು ಯಡಿಯೂರಪ್ಪ ಕಿವಿಗೊಡುವ ಗೋಜಿಗೆ ಹೋಗಲಿಲ್ಲ. ಆನಂದ್ ಸಿಂಗ್ ಅವರ ಇಚ್ಛೆಯಂತೆ ಬಳ್ಳಾರಿಯಿಂದ ವಿಜಯನಗರ ಎಂಬ ಪ್ರತ್ಯೇಕ ಜಿಲ್ಲೆ ಮಾಡಲಾಯಿತು. ಜೊತೆಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಶ್ರೀ ರಾಮುಲು ಆಗಲಿ ಎಂದು ಬಯಸಿದರೂ ಆಗಲಿಲ್ಲ. ಹೀಗಾಗಿ ಬಿಜೆಪಿ ಸರ್ಕಾರದಲ್ಲಿ ರೆಡ್ಡಿ ಸಹೋದರರ ಪ್ರಭಾವ ಕಡಿಮೆ ಆಗಿದೆ ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ.

ಇನ್ನು, ಬಿ ಎಸ್ ಯಡಿಯೂರಪ್ಪ ಅವರ ಸಿಎಂ ಕುರ್ಚಿಯ ಅಲುಗಾಟ ಹೆಚ್ಚಾಗಿದೆ. ಬಿಎಸ್​ವೈ ಕೂಡ ರಾಜೀನಾಮೆ ನೀಡಲು ಸಿದ್ಧರಿದ್ದಾರೆ. ರಾಜೀನಾಮೆ ನೀಡಲು ಹೈಕಮಾಂಡ್ ಯಾವತ್ತು ಹೇಳುತ್ತೋ ಆವತ್ತೇ ರಾಜೀನಾಮೆ ಕೊಡುವುದಾಗಿ ಯಡಿಯೂರಪ್ಪ ಈಗಾಗಲೇ ಬಹಳ ಸ್ಪಷ್ಟವಾಗಿ ಹೇಳಿದ್ಧಾರೆ. ಮುಂಬರುವ ಸೋಮವಾರದಂದು ಕೇಂದ್ರದಿಂದ ವೀಕ್ಷಕರು ಆಗಮಿಸಿದ ಬಳಿಕ ಸಿಎಂ ಸ್ಥಾನದ ಬದಲಾವಣೆ ಆಗಬಹುದು ಎಂಬ ನಿರೀಕ್ಷೆ ಇದೆ. ಹೊಸ ನಾಯಕತ್ವದ ಸರ್ಕಾರದಲ್ಲಿ ರೆಡ್ಡಿ ಸಹೋದರರಿಗೆ ಪುಷ್ಟಿ ಸಿಗುತ್ತದಾ, ಅಥವಾ ಅವರ ಪ್ರಾಶಸ್ತ್ಯ ಇನ್ನೂ ಕಡಿಮೆ ಆಗುತ್ತದಾ ಎಂಬುದು ಬಳ್ಳಾರಿ ಜನರಲ್ಲಿ ಮೂಡಿರುವ ಕುತೂಹಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *