Karnataka Rain: ಬೆಳಗಾವಿಯಲ್ಲಿ ಧಾರಾಕಾರ ಮಳೆ, ಪ್ರವಾಹ; ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ದೂರವಾಣಿ ಕರೆ

ಬೆಳಗಾವಿ: ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಜತೆ ದೂರವಾಣಿಯಲ್ಲಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ಅಲ್ಲದೆ ಪ್ರವಾಹ ಮತ್ತು ನದಿಪಾತ್ರದಲ್ಲಿ ಹೆಚ್ಚಿನ‌ ನಿಗಾ ವಹಿಸುವಂತೆ ಸೂಚನೆ ನೀಡಿದ್ದು, ಸರ್ಕಾರದಿಂದ ಹೆಚ್ಚಿನ‌ ನೆರವು ಬೇಕಾದಲ್ಲಿ ಕೂಡಲೇ ಕರೆ ಮಾಡಿ ಎಂದು ತಿಳಿಸಿದ್ದಾರೆ. ಇನ್ನು ಪ್ರವಾಹ ಪೀಡಿತ ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಹ ಸಿಎಂ ಚರ್ಚೆ ನಡೆಸಿದ್ದು, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಸಿಎಂ ಕಚೇರಿಯಿಂದ ಕರೆ ಬಂದಿತ್ತು, ನಂತರ ಸಿಎಂ ಕೂಡ ಮಾತನಾಡಿದ್ದಾರೆ. ನೆರೆ ಸಂತ್ರಸ್ತರಿಗೆ ಇರಲು ವ್ಯವಸ್ಥೆ ಹಾಗೂ ಸರಿಯಾದ ಊಟ ಕೊಡಿ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ. ನಿಪ್ಪಾಣಿ ತಾಲೂಕಿನ ನಾಲ್ಕೈದು ಗ್ರಾಮಗಳು ಮುಳಗುವ ಭೀತಿ ಇದೆ. ಅವರನ್ನು ಶಿಪ್ಟ್ ಮಾಡುವ ಕೆಲಸ ನಡೆದಿದೆ, ಆರು ಕಾಳಜಿ ಕೇಂದ್ರ ತೆರೆಯುತ್ತೇವೆ ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಟಿವಿ9 ಡಿಜಿಟಲ್​ಗೆ ಡಿಸಿ ಎಂ.ಜಿ ಹಿರೇಮಠ ಹೇಳಿಕೆ ನೀಡಿದ್ದಾರೆ.

ವಾಘವಾಡೆ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ವಾಘವಾಡೆ ಬಳಿ ಏಕಾಏಕಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದ ಹಿನ್ನೆಲೆಯಲ್ಲಿ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಹಳ್ಳದ ನೀರಿನಲ್ಲಿ ಸಿಲುಕಿ ಕೊಚ್ಚಿ ಹೋಗುತ್ತಿದ್ದ. ಈ ವೇಳೆ ಹಗ್ಗ ಎಸೆದು ಯುವಕನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದು, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಹಿರಣ್ಯಕೇಶಿ ನದಿ
ಪಶ್ಚಿಮ ಘಟ್ಟ, ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಿರಣ್ಯಕೇಶಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಸಂಕೇಶ್ವರ ಪಟ್ಟಣದ ಶಂಕರಗಲ್ಲಿ, ಬಿರೇಶ್ವರ್, ಮಠ್​​ಗಲ್ಲಿ, ಕುಂಬಾರ ಗಲ್ಲಿಯಲ್ಲಿ ಈ ನದಿ ನೀರು ಸುತ್ತುವರೆದಿದೆ. ಈ ಭಾಗದ ನೂರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಕುಂಬಾರ ಗಲ್ಲಿಯಲ್ಲಿರುವ ಲಕ್ಷ್ಮೀ ದೇವಸ್ಥಾನ ಜಲಾವೃತವಾಗಿದೆ. ಒಟ್ಟಾರೆ ಮನೆಗಳಿಗೆ ನೀರು ನುಗ್ಗಿದ್ದರಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಕಾಲೋನಿ ಜನರು ಪರದಾಡುವಂತಾಗಿದೆ.

ಮಿರ್ಜಿ ಗ್ರಾಮದ ಬಳಿಯ ಹಳೇ ಸೇತುವೆ ಜಲಾವೃತ
ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಬಳಿಯ ಹಳೇ ಒಂಟಗೋಡಿ ಮಹಾಲಿಂಗಪುರ ಸಂಪರ್ಕದ ಸೇತುವೆ ಜಲಾವೃತವಾಗಿದೆ. ಇನ್ನು ಹೊಸ ಸೇತುವೆ ಜಲಾವೃತ ಆಗಲು ಎರಡು ಅಡಿ ಮಾತ್ರ ಬಾಕಿ ಇದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *