ಕಲಬುರಗಿ : ಅರಣಕಲ್ ಕೆರೆ ಒಡೆದು ಬೆಳೆ ಹಾನಿ:ಜು. 27ರಂದು ನೀರಾವರಿ ಕಚೇರಿಗೆ ಮುತ್ತಿಗೆ
ಕಲಬುರಗಿ : ಜಿಲ್ಲೆಯ ಕಾಳಗಿ ತಾಲ್ಲೂಕಿನ ಅರಣಕಲ್ ಕೆರೆ ಒಡೆದು ಅಪಾರ ಪ್ರಮಾಣದಲ್ಲಿ ರೈತರ ಬೆಳೆ ಹಾನಿಯಾಗಿದ್ದು ಕೂಡಲೇ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿ ಜುಲೈ 27ರಂದು ಬೆಳಿಗ್ಗೆ 11 ಗಂಟೆಗೆ ನಗರದಲ್ಲಿನ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣಕಲ್ ಕೆರೆಯು ಒಡೆದ ಪರಿಣಾಮವಾಗಿ ಹೆಸರು, ಉದ್ದು, ಸೋಯಾ, ಕಬ್ಬು, ಬಾಳೆ ಮುಂತಾದ ಬೆಳೆಗಳು ಹಾನಿಗೆ ಒಳಗಾಗಿವೆ. ಸುಮಾರು 500 ಎಕರೆ ಜಮೀನಿನಲ್ಲಿನ ಬೆಳೆಯು ನಷ್ಟವಾಗಿದ್ದು, ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೆರೆ ಒಡೆದ ಪರಿಣಾಮವಾಗಿ ಸುಮಾರು 100 ಕೋಟಿ ರೂ.ಗಳಷ್ಟು ಬೆಳೆ ಹಾನಿಯಾಗಿದ್ದು, ಆ ನಷ್ಟವನ್ನು ಸರ್ಕಾರವು ಭರಿಸಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ ವರ್ಷದಂತೆ ಈ ವರ್ಷವೂ ಸಹ ವ್ಯಾಪಕ ಪ್ರಮಾಣದಲ್ಲಿ ಅತಿವೃಷ್ಟಿಯಿಂದಾಗಿ ಮತ್ತೆ ಅಪಾರ ಪ್ರಮಾಣದಲ್ಲಿ ರೈತರ ಬೆಳೆ ಹಾನಿಯಾಗಿದೆ. ಈ ಬಾರಿ ಬೆಳೆ ಜಿಲ್ಲೆಯಲ್ಲಿ 8000 ಹೆಕ್ಟೇರ್ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‍ಗೆ 20000ರೂ.ಗಳ ಪರಿಹಾರ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲೆಯ ಮುಲ್ಲಾಮಾರಿ, ಬೆಣ್ಣೆತೊರೆ, ಗಂಡೋರಿ ನಾಲಾ ನೀರಾವರಿ ಯೋಜನೆಗಳಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದ್ದರಿಂದ ಹಾಗೂ ಕಳಪೆ ಕಾಮಗಾರಿ ಆಗಿರುವುದರಿಂದ ರೈತರ ಜಮೀನುಗಳಿಗೆ ನೀರು ಸಹ ಸಮರ್ಪಕವಾಗಿ ತಲುಪುತ್ತಿಲ್ಲ. ಅಲ್ಲದೇ ಇಂತಹ ಮಳೆಯ ಸಂದರ್ಭದಲ್ಲಿ ಕೆರೆ, ಕಟ್ಟೆಗಳು ಒಡೆದು ಹಾನಿಗೀಡಾದರೂ ಸಹ ಆ ಕುರಿತು ಯಾವುದೇ ಕ್ರಮಗಳನ್ನು ತಕ್ಷಣವೇ ಅಧಿಕಾರಿಗಳು ಕೈಗೊಳ್ಳುತ್ತಿಲ್ಲ. ಭ್ರಷ್ಠಾಚಾರದ ಕುರಿತು ತನಿಖೆಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಪಾಂಡುರಂಗ್ ಮಾವಿನಕರ್, ರಾಯಪ್ಪ, ಜಾಫರಖಾನ್ ಮುಂತಾದವರು ಉಪಸ್ಥಿತರಿದ್ದರು.