ಪ್ರಾದೇಶಿಕ ಕಚೇರಿ ರದ್ದತಿಗೆ ವಿರೋಧಿಸಿ ಸಚಿವ ನಿರಾಣಿಯವರಿಗೆ ಮನವಿ
ವಿಜಯಭಾಸ್ಕರ್ ಸಮಿತಿಯ ಆಡಳಿತ ಸುಧಾರಣೆ ವರದಿಯ ಶಿಫಾರಸ್ಸಿನಂತೆ ರಾಜ್ಯದಲ್ಲಿ ಪ್ರಾದೇಶಿಕ ಕಚೇರಿಗಳು ರದ್ದು ಮಾಡಲು ಈಗಾಗಲೇ ಕಂದಾಯ ಸಚಿವರು ಹೇಳಿಕೆ ನೀಡಿರುವುದು ಆಘಾತಕಾರಿ ವಿಷಯವಾಗಿದ್ದು, ಕೂಡಲೇ ಆ ಹೇಳಿಕೆಯನ್ನು ಸರ್ಕಾರವು ಜಾರಿಗೆ ತರಬಾರದು ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಅವರು ಹೇಳೀದರು.
ಶನಿವಾರ ಸಮಿತಿಯ ನಿಯೋಗದ ನೇತೃತ್ವ ವಹಿಸಿ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಬೆಂಗಳೂರು, ಮೈಸೂರು ವಿಭಾಗಗಳು ರಾಜಧಾನಿ ಬೆಂಗಳೂರಿಗೆ ಹತ್ತಿಕೊಂಡು ಇರುವುದರಿಂದ ಅಲ್ಲಿಯ ಪ್ರಾದೇಶಿಕ ಕಚೇರಿಗಳು ರದ್ದು ಮಾಡಿದರೆ ಆ ಭಾಗಕ್ಕೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ, ರಾಜಧಾನಿ ಬೆಂಗಳೂರಿನಿಂದ ಭೌಗೋಳಿಕವಾಗಿ ಬಹು ದೂರವಿರುವ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಇದರಿಂದ ಬಹಳಷ್ಟು ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನು ಗಣನೆಗೆ ತೆಗೆದುಕೊಂಡು ಯಾವುದೇ ಕಾರಣಕ್ಕೂ ಪ್ರಾದೇಶಿಕ ಕಚೇರಿ ರದ್ದು ಮಾಡದೇ ಇರಲು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ನಿಯೋಗದ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಮುರುಗೇಶ ನಿರಾಣಿಯವರಿಗೆ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಭೇಟಿಯಾಗಿ ವಿವರವಾದ ಪ್ರಸ್ತಾವನೆ ಸಲ್ಲಿಸಲಾಯಿತು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾನ್ಯ ಸಚಿವರಿಗೆ ಸಮಿತಿಯ ಅಧ್ಯಕ್ಷರು ವಿವರಿಸಿ ಅತ್ಯಂತ ಹಿಂದುಳಿದ ಕಾರಣದಿಂದಲೇ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಮತ್ತು ಪ್ರಾದೇಶಿಕ ಅಸಮಾನತೆ ನಿವಾರಣೆ ಮಾಡಲು ಸಂವಿಧಾನದ 371ನೇ(ಜೆ) ಕಲಂ ತಿದ್ದುಪಡಿ ಮಾಡಿ ಜಾರಿಗೆ ತರಲಾಗಿದೆ. ಆಡಳಿತ ಯಂತ್ರವೇ ಕೇಂದ್ರೀಕರಣವಾದಾಗ ಈ ಭಾಗದ ಜನರಿಗೆ ನ್ಯಾಯ ಸಿಗುವುದು ಹೇಗೆ? ಅದರಂತೆ ಮುಖ್ಯಮಂತ್ರಿಗಳು ಈಗಾಗಲೇ ಕಲ್ಯಾಣ ಕರ್ನಾಟಕದ ಪ್ರತ್ಯೇಕ ಸಚಿವಾಲಯ ಮಾಡುವುದರ ಬಗ್ಗೆ ಘೋಷಣೆ ಮಾಡಿರುತ್ತಾರೆ ಅದೂ ಸಹ ಇನ್ನೂ ಅನುಷ್ಠಾನಕ್ಕೆ ಬಂದಿರುವದಿಲ್ಲ. ಅಂತಹದರಲ್ಲಿ, ವಿಜಯಭಾಸ್ಕರ ಸಮಿತಿಯ ಶಿಫಾರಸ್ಸಿನಂತೆ ಪ್ರಾದೇಶಿಕ ಆಯುಕ್ತರ ಕಚೇರಿ ಯಾವುದೇ ಕಾರಣಕ್ಕೂ ರದ್ದು ಮಾಡದೇ ಇರುವುದರ ಬಗ್ಗೆ ಅವರು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿದ ಸಚಿವರು, ಈ ಬಗ್ಗೆ ತಾವು ವಿಜಯಭಾಸ್ಕರ ಸಮಿತಿಯ ವರದಿಯನ್ನು ಅಧ್ಯಯನ ನಡೆಸಿ, ಯಾವುದೇ ರೀತಿಯ ಅನ್ಯಯವಗದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅದರಂತೆ ಸಮಿತಿಯ ಮನವಿಗೆ ಸ್ಪಂದಿಸಿದ ಅವರು ಆಗಸ್ಟ 2ನೇ ವಾರದಲ್ಲಿ ಸಮಿತಿಯ ಪರಿಣಿತರ ಜೊತೆ ಕಲ್ಯಾಣ ಕರ್ನಾಟಕ ರಚನಾತ್ಮಕ ಪ್ರಗತಿಯ ಬಗ್ಗೆ ಸಮಾಲೋಚನೆ ನಡೆಸಲು ಅಧಿಕೃತ ಸಮಯ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರುಗಳಾದ ಬಸವರಾಜ್ ಮತ್ತಿಮೂಡ್, ಅವಿನಾಶ್ ಜಾಧವ್ ಹಾಗೂ ಸಮಿತಿಯ ಮುಖಂಡರಾದ ಲಿಂಗರಾಜ್ ಸಿರಗಾಪೂರ್, ಡಾ. ಎ.ಎಸ್. ಭದ್ರಶೆಟ್ಟಿ, ಎಚ್.ಎಂ. ಹಾಜಿ, ಆಕಾಶ್ ರಾಠೋಡ್, ಹೇಮಂತ್ ರಾಠೋಡ್, ಶಾಮರಾವ್ ಪಾಟೀಲ್, ರೋಹನಕುಮಾರ್ ಬೀದರ್, ಕಾರ್ತಿಕ್ ಬೀದರ್ ಮುಂತಾದವರು ಉಪಸ್ಥಿತರಿದ್ದರು.