Karnataka Politics: ದಲಿತರ ಬಗ್ಗೆ ಕಾಳಜಿ ಇದ್ದರೆ ಮುಂದಿನ ಸಿಎಂ ಖರ್ಗೆ ಎಂದು ಘೋಷಿಸಲಿ; ಕಾಂಗ್ರೆಸ್ಗೆ ಕಟೀಲ್ ಸವಾಲು
ಚಿತ್ರದುರ್ಗ(ಜು.25): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಹೋರಾಟ ಮಾಡುತ್ತಾರೆ. ಅವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಮುಂದಿನ ಸಿಎಂ ಖರ್ಗೆ ಎಂದು ಘೋಷಿಸಿ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸವಾಲ್ ಹಾಕಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ಧರಾಮಯ್ಯ ಸಿಎಂ ಆಗುವ ಕನಸು ಬಿಡಬೇಕು. ರಾಜ್ಯದಲ್ಲಿ ಸಿಎಂ ಬಿಎಸ್ ವೈ ಅಭಿವೃದ್ಧಿ ಕಾರ್ಯದಿಂದ ಬಿಜೆಪಿ ಪಕ್ಷದ ಚಿಂತನೆಗೆ ಯಶಸ್ಸು ಸಿಗಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆ ಎಂದು ಕಟೀಲ್ ಹೇಳಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು, ಡಿಕೆ ಶಿವಕುಮಾರ್ ಅವರನ್ನ ಮುಗಿಸುವ ತಂತ್ರವನ್ನು ಮಾಜಿ ಸಿಎಂ ಸಿದ್ಧರಾಮಯ್ಯ ನಿಲ್ಲಿಸಲಿ. ದಲಿತರನ್ನು ಮಾತ್ರವಲ್ಲ, ಡಿಕೆಶಿ ಅವರನ್ನು ಮುಗಿಸುವ ಷಡ್ಯಂತ್ರ ಕಾಂಗ್ರೆಸ್ ನಲ್ಲಿ ನಡೆದಿದೆ. ಸಿದ್ಧರಾಮಯ್ಯ ಚಾಮುಂಡೇಶ್ವರಿಯಿಂದ ಬಾದಾಮಿ ಕ್ಷೇತ್ರಕ್ಕೆ ಬಂದರು. ಈಗ ಬಾದಾಮಿ ಕ್ಷೇತ್ರ ಬಿಡುವ ಹಂತದಲ್ಲಿದ್ದಾರೆ. ಡಿಕೆಶಿ, ಸಿದ್ಧರಾಮಯ್ಯರಿಂದ ಸಿಎಂ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ. ಅವರಿಗೆ ದಲಿತರ ಬಗ್ಗೆ ಅಷ್ಟು ಕಾಳಜಿ ಇದ್ದರೆ ಮುಂದಿನ ಸಿಎಂ ಖರ್ಗೆ ಎಂದು ಘೋಷಿಸಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯಗೆ ಕಟೀಲ್ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಸೇರಿದಾಕ್ಷಣ ಸಿದ್ಧರಾಮಯ್ಯ ಸಿಎಂ ಆದರು. ಸಿದ್ದರಾಮಯ್ಯಗೆ ಕಾಂಗ್ರೆಸ್ ಇತಿಹಾಸ ತಿಳಿಯಲು ಪುರುಸೊತ್ತಿಲ್ಲ. ಜೆಡಿಎಸ್ನ ಪಾಠ ಓದಿದವರು ಕಾಂಗ್ರೆಸ್ ಸೇರಿದಾಕ್ಷಣ ಸಿಎಂ ಆದರು. ಸಿದ್ಧರಾಮಯ್ಯ ನನಗೆ ಒಳ್ಳೆಯವರು, ಶ್ರೇಷ್ಠ ನಾಯಕರು. ಆದರೆ ಮಾಧ್ಯಮಗಳಲ್ಲಿ ಬಂದ ವರದಿ ಹೇಳುತ್ತೇನೆ. ಸಿಎಂ ಸ್ಥಾನಕ್ಕೆ ಜಿ ಪರಮೇಶ್ವರ್ ಅಡ್ಡಿಯಾಗುತ್ತಾರೆ ಅನ್ನೋ ಕಾರಣಕ್ಕೆ ಸಿದ್ಧರಾಮಯ್ಯ ಸ್ವಜಾತಿಯವರನ್ನು ಬಳಸಿಕೊಂಡು ಸೋಲಿಸಿದರು. ಅಲ್ಲದೇ ಸಿದ್ಧರಾಮಯ್ಯ ಶಿಷ್ಯ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಬಿದ್ದಿತ್ತು ಆದರೂ ಈವರೆಗೆ ಅಖಂಡ ಶ್ರೀನಿವಾಸ್ ಗೆ ನ್ಯಾಯ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದರು.
ತಾಕತ್ತಿದ್ದರೆ ದಲಿತ ಸಿಎಂ ಮಾಡಲಿ ಎಂದಿದ್ದ ಸಿದ್ಧರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್, ಅಂಬೇಡ್ಕರ್ಗೆ ಅತೀ ಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಮೊದಲ ಸಚಿವ ಸಂಪುಟದಲ್ಲಿ ನೋವಾಗಿ ಅಂಬೇಡ್ಕರ್ ರಾಜೀನಾಮೆ ನೀಡಿದ್ದರು. ಲೋಕಸಭೆ ಚುನಾವಣೆಗೆ ನಿಂತಾಗ 2ನೇ ಬಾರಿ ಅವರ ಸಹಾಯಕನನ್ನು ಎದುರು ನಿಲ್ಲಿಸಿ ಸೋಲಿಸಿದರು. ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಭಾರತ ರತ್ನವನ್ನೂ ಕೊಡಲಿಲ್ಲ. ಅಂಬೇಡ್ಕರ್ಗೆ ಭಾರತ ರತ್ನ ಕೊಟ್ಟಿದ್ದು ನಾವು. ಕಾಂಗ್ರೆಸ್ ಜಗಜೀವನ್ ರಾಮ್ ರನ್ನು ಪ್ರಧಾನಿ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ಧರಾಮಯ್ಯನವರ ಇತಿಹಾಸ ಹೇಳಬೇಕೆಂದರೆ ಕಾಂಗ್ರೆಸ್ ಗೆ ಬಂದು ಸಿಎಂ ಆದರು. ಪರಮೇಶ್ವರ್ಗೆ ಡಿಸಿಎಂ ಮಾಡಲಿಲ್ಲ, ಸೋಲಿಸಿದರು. ಖರ್ಗೆ, ಚಂದ್ರಪ್ಪ, ಧ್ರುವನಾರಾಯಣ, ಖರ್ಗೆ ಸೇರಿ ದಲಿತ ಮುಖಂಡರನ್ನು ಸೋಲಿಸಿದರು. ಇವತ್ತಿಗೂ ಖರ್ಗೆ, ಪರಮೇಶ್ವರ್ ಮುಂದಕ್ಕೆ ಬರಲು ಬಿಡಲ್ಲ. ಬಿಜೆಪಿ ಕಡಿಮೆ ಸಮಯ ಅಧಿಕಾರ ನಡೆಸಿದೆ. ಅಬ್ದುಲ್ ಕಲಾಂರನ್ನು ರಾಷ್ಟ್ರಪತಿಯಾಗಿ ನಾವು ಮಾಡಿದ್ದೇವೆ. ದಲಿತರಾದ ಕೋವಿಂದ್ ರನ್ನು ನಾವು ರಾಷ್ಟ್ರಪತಿ ಮಾಡಿದ್ದೇವೆ. ಕೇಳದೆ ಇದ್ದರೂ ಗೋವಿಂದ್ ಕಾರಜೋಳರನ್ನು ಡಿಸಿಎಂ ಮಾಡಿದ್ದೇವೆ, ಆನೇಕಲ್ ವಿಧಾನಸಭೆಯಲ್ಲಿ ಸೋತ ಎ.ನಾರಾಯಣಸ್ವಾಮಿಗೆ ಚಿತ್ರದುರ್ಗದಲ್ಲಿ ಸಂಸದರನ್ನಾಗಿಸಿದ್ದೇವೆ, ಮಂತ್ರಿ ಮಾಡಿದ್ದೇವೆ ಎಂದು ಟಾಂಗ್ ನೀಡಿದರು.
ನನ್ನ ಹೆಸರಿನ ಫೇಕ್ ಆಡಿಯೋ ಪ್ರಕರಣ ತನಿಖೆ ನಡೆಯುತ್ತಿದೆ. ಸಿದ್ಧರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರ ಯಾರೂ ಮಾಡಲು ಅಸಾಧ್ಯ. ಸಿದ್ಧರಾಮಯ್ಯ ಅರ್ಕಾವತಿ ಘಟನೆ ಮುಚ್ಚಿ ಹಾಕಿದ್ದಾರೆ. ನಮ್ಮಲ್ಲಿ ಮಿತ್ರ ಮಂಡಳಿ, ವಲಸಿಗ ಪದ ಸರಿಯಲ್ಲ. ಎಲ್ಲರೂ ಬಿಜೆಪಿಯಿಂದ ಟಿಕೆಟ್ ಪಡೆದು ಶಾಸಕರಾಗಿದ್ದಾರೆ ಎಂದರು.