Karnataka Politics – ಪ್ರಲ್ಹಾದ್ ಜೋಶಿ ನಿವಾಸಕ್ಕೆ ಬೊಮ್ಮಾಯಿ ದಿಢೀರ್ ಭೇಟಿ – RSS ಕಛೇರಿ ಕದ ತಟ್ಟಿದ ಶೆಟ್ಟರ್

ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾಗುತ್ತಾರೆ ಅನ್ನೋ ಮಾತು ಪ್ರಬಲವಾಗಿ ಕೇಳಿ ಬರುತ್ತಿರುವ ಸಂದರ್ಭದಲ್ಲಿಯೇ ಹುಬ್ಬಳ್ಳಿ ಬಿರುಸಿನ ರಾಜಕೀಯ ಚಟುವಟಿಕೆಗೆ ವೇದಿಕೆಯಾಗಿ ಮಾರ್ಪಟ್ಟಿದೆ. ಸಂಸತ್ ಅಧಿವೇಶನ ಮುಗಿಸಿಕೊಂಡು ಪ್ರಹ್ಲಾದ್ ಜೋಶಿ ನಿನ್ನೆ ಹುಬ್ಬಳ್ಳಿಗೆ ಬಂದಿದ್ದಾರೆ. ಹುಬ್ಬಳ್ಳಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇದರ ಬೆನ್ನ ಹಿಂದೆಯೇ ರಾತ್ರಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಜೋಶಿ ಅವರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರ್.ಎಸ್.ಎಸ್. ಕಛೇರಿ ಕೇಶವ ಕುಂಜಕ್ಕೆ ಭೇಟಿ ನೀಡಿರೋದು ಕುತೂಹಲ ಕೆರಳಿಸಿದೆ.

ಪ್ರಲ್ಹಾದ್ ಜೋಶಿ ನಿವಾಸಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ದಿಢೀರ್ ಭೇಟಿ ನೀಡಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಹುಬ್ಬಳ್ಳಿಯ ಮಧುರಾ ಎಸ್ಟೇಟ್ ನಲ್ಲಿರುವ ಪ್ರಹ್ಲಾದ್ ಜೋಷಿ ನಿವಾಸಕ್ಕೆ ನೀಡಿದ ಬೊಮ್ಮಾಯಿ, ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ ಹೊರಬಂದಿದ್ದಾರೆ. ಈ ವೇಳೆ ಮಾತನಾಡಿದ ಬೊಮ್ಮಾಯಿ, ತುಂಬಾ ದಿನಗಳ ನಂತರ ಜೋಶಿಯವರನ್ನ ಭೇಟಿಯಾಗುತ್ತಿದ್ದೇನೆ. ಕೋವಿಡ್ ಕಾರಣಕ್ಕೆ ಮೂರು -ನಾಲ್ಕು ತಿಂಗಳಿಂದ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಜೋಶಿಯವರು ಕರೆ ಮಾಡಿ, ಭೇಟಿಯಾಗುವಂತೆ ಸೂಚಿಸಿದ್ದರು. ನನ್ನ ಶಿಗ್ಗಾಂವಿ ಕ್ಷೇತ್ರ ಜೋಶಿಯವರ ಸಂಸತ್ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಮಳೆಯಿಂದ ಹಾನಿ‌ ಹೆಚ್ಚಾಗಿದೆ. ಮಳೆ ಹಾನಿ ಬಗ್ಗೆ ಚರ್ಚಿಸಲು ಜೋಶಿಯವರನ್ನು ಭೇಟಿ ಮಾಡಿದ್ದೆ. ನಮ್ಮ ಭೇಟಿ ಅತ್ಯಂತ ಸಹಜವಾದದ್ದು. ನಾಯಕತ್ವದ ಬದಲಾವಣೆ ಚರ್ಚೆ ಜೋಶಿ ಮತ್ತು ನನ್ನ ನಡುವೆ ಅಪ್ರಸ್ತುತ. ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಜೋಶಿ ಅವರ ಭೇಟಿಯ ನಂತರ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಮೂಲಗಳ ಪ್ರಕಾರ, ಮುಂದಿನ ಸಿಎಂ ಕುರಿತಾಗಿಯೇ ಪ್ರಹ್ಲಾದ್ ಜೋಶಿ ಮತ್ತು ಬೊಮ್ಮಾಯಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಪ್ರಹ್ಲಾದ್ ಜೋಶಿ ಅವರಿಗೆ ಮುಂದಿನ ಸಿಎಂ ಆಗುವಂತೆ ಬೊಮ್ಮಾಯಿ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಜೋಶಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆ ರಾಜ್ಯ ರಾಜಕೀಯದ ಕುರಿತು ಕೇಂದ್ರೀಕೃತಗೊಂಡಿತ್ತು. ಪ್ರಹ್ಲಾದ್ ಜೋಶಿ ಹೆಸರು ಸಿಎಂ ರೇಸ್ ನಲ್ಲಿದ್ದು, ಬೊಮ್ಮಾಯಿ ಭೇಟಿ ತೀವ್ರ ಕುತೂಹಲ ಕೆರಳಿಸಿರುವುದಂತೂ ಹೌದು.

ಆರ್.ಎಸ್.ಎಸ್. ಕಛೇರಿಗೆ ಭೇಟಿ ನೀಡಿದ ಶೆಟ್ಟರ್….

ಮತ್ತೊಂದೆಡೆ ಹುಬ್ಬಳ್ಳಿಯ ಆರ್.ಎಸ್.ಎಸ್. ಕಛೇರಿ ಕೇಶವ ಕುಂಜಕ್ಕೆ ಮಾಜಿ ಸಿಎಂ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದಾರೆ. ಇತ್ತ ಬೊಮ್ಮಾಯಿ ಜೋಶಿ ಅವರ ನಿವಾಸಕ್ಕೆ ಭೇಟಿ ನೀಡಿರೋ ಸಂದರ್ಭದಲ್ಲಿಯೇ ಶೆಟ್ಟರ್ ಕೇಶವ ಕುಂಜಕ್ಕೆ ಭೇಟಿ ನೀಡಿದ್ದರೆಂದು ತಿಳಿದು ಬಂದಿದೆ. ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಆರ್.ಎಸ್.ಎಸ್. ನಾಯಕರ ಜೊತೆ ಶೆಟ್ಟರ್ ಚರ್ಚಿಸಿದ್ದಾರೆ.

ಯಡಿಯೂರಪ್ಪ ಅವರ ನಂತರ ಲಿಂಗಾಯತರನ್ನೇ ಸಿಎಂ ಮಾಡಬೇಕೆಂಬ ವಿಷಯ ಬಂದಲ್ಲಿ ಜಗದೀಶ್ ಶೆಟ್ಟರ್ ಅವರೂ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೆ ಯಡಿಯೂರಪ್ಪ ಬೆಂಬಲಿತ ಶಾಸಕರೂ ಶೆಟ್ಟರ್ ಪರ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಶೆಟ್ಟರ್ ಸಹ ಸದ್ದಿಲ್ಲದ ಸಿಎಂ ಪದವಿಗೆ ಪ್ರಯತ್ನ ನಡೆಸಿರೋದು ಆರ್.ಎಸ್.ಎಸ್. ಕಛೇರಿಯ ಭೇಟಿಯ ಮೂಲಕ ಖಾತ್ರಿಯಾಗಿದೆ.ಒಟ್ಟಾರೆ ಬೆಂಗಳೂರಿನಲ್ಲಿ ರಾಜಕೀಯ ಬಿರುಸುಗೊಂಡಿರುವ ವೇಳೆಯಲ್ಲಿಯೂ ಹುಬ್ಬಳ್ಳಿಯಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಎಲ್ಲರ ಕಣ್ಣು ಸಿಎಂ ಹುದ್ದೆಯ ಮೇಲಿದ್ದು, ಯಾರನ್ನು ಮಾಡಬೇಕು ಅನ್ನೋ ಚರ್ಚೆ ಒಂದು ಕಡೆಯಾಗಿದ್ದರೆ, ನಾವೇಕೆ ಪ್ರಯತ್ನಿಸಬಾರದೆಂದು ಕೆಲವರು ತಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಸದ್ಯದ ಮಟ್ಟಿಗೆ ರಾಜಧಾನಿ ಬೆಂಗಳೂರು ನಂತರ ಹುಬ್ಬಳ್ಳಿ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ವೇದಿಕೆಯಾಗಿ ಮಾರ್ಪಟ್ಟಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *