ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ‘ಅಭಿನಯ ಶಾರದೆ’ ಜಯಂತಿ
ಹೈಲೈಟ್ಸ್:
- ಸಾವಿನಲ್ಲೂ ಸಾರ್ಥಕತೆ ಮೆರೆದ ಜಯಂತಿ
- ನೇತ್ರದಾನ ಮಾಡಿದ ಜಯಂತಿ
- ಜಯಂತಿ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ
ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ನಟಿ ಜಯಂತಿ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ನೇತ್ರದಾನ ಮಾಡುವ ಮೂಲಕ ಇಬ್ಬರು ಅಂಧರ ಬದುಕಿಗೆ ನಟಿ ಜಯಂತಿ ಬೆಳಕಾಗಿದ್ದಾರೆ.
ಕತ್ತಲೆಯಲ್ಲಿ ಜೀವನ ಕಳೆಯುತ್ತಿರುವ ಅಂಧರಿಗೆ ನೇತ್ರದಾನ ಮಾಡುವುದು ಪುಣ್ಯದ ಕೆಲಸ. ನೇತ್ರದಾನ ಮಾಡುವಂತೆ ವರನಟ ಡಾ.ರಾಜ್‌ಕುಮಾರ್ ಕೂಡ ಕರೆ ಕೊಟ್ಟಿದ್ದರು. ತಮ್ಮ ಕಣ್ಣುಗಳನ್ನು ಡಾ.ರಾಜ್‌ಕುಮಾರ್ ದಾನ ಮಾಡಿದ್ದರು. ಡಾ.ರಾಜ್‌ಕುಮಾರ್ ಹಾದಿಯನ್ನು ಅನುಸರಿಸಿ ಅನೇಕರು ನೇತ್ರದಾನ ಮಾಡಿದ್ದಾರೆ. ಇದೀಗ ಹಿರಿಯ ನಟಿ ಜಯಂತಿ ಅವರ ಕಣ್ಣುಗಳನ್ನೂ ದಾನ ಮಾಡಲಾಗಿದೆ. ನಾರಾಯಣ ನೇತ್ರಾಲಯದಲ್ಲಿರುವ ಡಾ.ರಾಜ್‌ಕುಮಾರ್ ಐ ಬ್ಯಾಂಕ್‌ಗೆ ಜಯಂತಿ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.
ವಯೋಸಹಜ ಕಾಯಿಲೆ ಹಾಗೂ ಅಸ್ತಮಾದಿಂದ ಬಳಲುತ್ತಿದ್ದ ಜಯಂತಿ ನಿದ್ದೆಯಲ್ಲಿರುವಾಗಲೇ ಚಿರನಿದ್ರೆಗೆ ಜಾರಿದರು. ಜಯಂತಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸೋಮವಾರ ಸಂಜೆ 4 ಗಂಟೆಯವರೆಗೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಅಭಿಮಾನಿಗಳು ಜಯಂತಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದುಕೊಂಡರು. ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗರದಲ್ಲಿ ಅಂತ್ಯಕ್ರಿಯೆ ನಡೆಯಿತು. ಪುತ್ರ ಕೃಷ್ಣಕುಮಾರ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಮರಾಠಿ ಭಾಷೆಯಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಜಯಂತಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಮೊದಲ ಗ್ಲಾಮರಸ್ ನಟಿ ಅಂತಲೇ ಜಯಂತಿ ಜನಪ್ರಿಯತೆ ಪಡೆದುಕೊಂಡಿದ್ದವರು. ಡಾ.ರಾಜ್‌ಕುಮಾರ್ ಜೊತೆಗೆ ಅತಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಕೂಡ ಜಯಂತಿ ಅವರಿಗೆ ಸಲ್ಲುತ್ತದೆ.