ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ: ಹಬ್ಬಗಳ ಆಚರಣೆಗೆ ಕೋವಿಡ್ ನಿಯಮ ಪ್ರಕಟ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಮಂಗಳವಾರ ಸಚಿವ ಸಂಪುಟದ ಮಹತ್ವದ ಸಭೆ ನಡೆಯಲಿದೆ.

ದಸರಾ ಹಾಗೂ ಇತರೆ ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಲು ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ.

ಕೋವಿಡ್-2ನೇ ಅಲೆಯ ಅಬ್ಬರ ಕಡಿಮೆಯಾಗಿ ಇತ್ತೀಚೆಗೆ ಜನರ ಬದುಕು ಸಹಜ ಸ್ಥಿತಿಗೆ ಮರಳುತ್ತಿದೆ. ಹಾಗೆಂದು ಜನರು ಮೈಮರೆಯುವ ಹಾಗಿಲ್ಲ. ಇನ್ನು ದಸರಾ, ದೀಪಾವಳಿ ಹೀಗೆ ಸಾಲುಸಾಲು ಹಬ್ಬಗಳು ಬರುವುದರಿಂದ ಜನರು ಬೇಕಾಬಿಟ್ಟಿ ಓಡಾಡಿಕೊಂಡು ಕೊರೋನಾ ನಿಯಮ ಉಲ್ಲಂಘಿಸಿದರೆ ಮತ್ತೆ ಮೂರನೇ ಅಲೆ ಏಳುವ ಸಾಧ್ಯತೆಯಿದೆ. ಹೀಗಾಗಿ ಸರ್ಕಾರ ಕಟ್ಟುನಿಟ್ಟಿನ ಆದೇಶವನ್ನು ಇಂದಿನ ಸಚಿವ ಸಂಪುಟ ಸಭೆಯ ನಂತರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ವಿಧಾನಸೌಧಕ್ಕೆ ಮುತ್ತಿಗೆ: ಈ ಮಧ್ಯೆ, ಕಬ್ಬಿನ ಎಫ್‌ಆರ್‌ಪಿ (ಕನಿಷ್ಠ ಬೆಂಬಲ ಬೆಲೆ) ದರ ಪುನರ್‌ ಪರಿಶೀಲಿಸುವುದು ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಇಂದು ಬೆಳಗ್ಗೆ 11 ಗಂಟೆಗೆ ಕಬ್ಬು ಬೆಳೆಗಾರರ ಸಂಘ ವಿಧಾನಸೌಧ ಮುತ್ತಿಗೆ ಹೋರಾಟ ಹಮ್ಮಿಕೊಂಡಿದೆ.

ಮೈಸೂರು ಅರಮನೆಯಲ್ಲಿ ಸರಳ ಆಚರಣೆ: ಕೋವಿಡ್-19 ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ಈ ಬಾರಿಯೂ ಶರನ್ನವರಾತ್ರಿ ಸಂದರ್ಭದಲ್ಲಿ ಪೂಜಾ ವಿಧಿಗಳನ್ನು ಕೇವಲ ಸಾಂಪ್ರದಾಯಿಕವಾಗಿ ನಡೆಸಲಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಚರಣೆಯಲ್ಲಿ ಸಾರ್ವಜನಿಕರು ಹಾಗೂ ಮಾಧ್ಯಮಗಳ ಭಾಗವಹಿಸುವಿಕೆ ಇರುವುದಿಲ್ಲ, ಕೋವಿಡ್ ಹರಡುವಿಕೆ ತಡೆ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *