ಯಾವುದೇ ಆದೇಶ, ಎಫ್ ಐಆರ್ ಇಲ್ಲದೇ 28 ಗಂಟೆಗಳಿಂದ ಗೃಹಬಂಧನ: ಪ್ರಧಾನಿ ಮೋದಿಗೆ ಪ್ರಿಯಾಂಕಾಗಾಂಧಿ ವಾದ್ರಾ
ಲಖಿಂಪುರ್ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ಥ ರೈತರನ್ನು ಭೇಟಿಮಾಡಲು ತೆರಳಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾದ್ರಾ ಅವರನ್ನು ಪೊಲೀಸರು ಗೃಹ ಬಂಧನದಲ್ಲಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಅವರು ಕಿಡಿಕಾರಿದ್ದಾರೆ.
ಲಖನೌ: ಲಖಿಂಪುರ್ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ಥ ರೈತರನ್ನು ಭೇಟಿಮಾಡಲು ತೆರಳಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾದ್ರಾ ಅವರನ್ನು ಪೊಲೀಸರು ಗೃಹ ಬಂಧನದಲ್ಲಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಅವರು ಕಿಡಿಕಾರಿದ್ದಾರೆ.
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿರುವ ಪ್ರಿಯಾಂಕಾಗಾಂಧಿ ವಾದ್ರಾ ಅವರು, ‘ನರೇಂದ್ರ ಮೋದಿ ಜೀ, ಕಳೆದ 28 ಗಂಟೆಗಳಿಂದ ನಿಮ್ಮ ಸರ್ಕಾರ ಯಾವುದೇ ಆದೇಶವಿಲ್ಲದೇ, ಎಫ್ಐಆರ್ ಇಲ್ಲದೇ ನನ್ನನ್ನು ಗೃಹ ಬಂಧನದಲ್ಲಿರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಈ ಹಿಂದೆ ಉತ್ತರ ಪ್ರದೇಶದ ಲಖೀಂಪುರ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ನಡೆದ (Lakhimpur Violence) ಸ್ಥಳಕ್ಕೆ ಹೋಗುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರನ್ನು ಅಡ್ಡಗಟ್ಟಿದ್ದ ಪೊಲೀಸರು ಬಂಧಿಸಿದ್ದರು.
ಏನಿದು ಘಟನೆ:
ಭಾನುವಾರ ರಾತ್ರಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೃಷಿ ಕಾಯ್ದೆ ವಿರೋಧಿಸಿ ರೈತರು ಒಟ್ಟುಗೂಡಿ ಪ್ರತಿಭಟನೆ ನಡೆಸುವ ಮೂಲಕ ಕಾರನ್ನು ತಡೆದಿದ್ದರು. ಈ ವೇಳೆ ಎರಡು ಕಾರು ಅವರ ಮೇಲೆ ಹರಿದು ಇಬ್ಬರು ರೈತರು ಮೃತಪಟ್ಟಿದ್ದರು. ಈ ಘಟನೆಯಿಂದ ಹಿಂಸಾಚಾರ ನಡೆದಿದ್ದು, ಇಲ್ಲಿಯವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿ ಲಖೀಂಪುಕ್ಕೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ ಈ ಹಿಂಸಾಚಾರ ಘಟನೆಯಲ್ಲಿ ಮೃತಪಟ್ಟ ನಾಲ್ಕು ರೈತರ ಕುಟುಂಬಗಳನ್ನು ಭೇಟಿ ಮಾಡಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸರು ವಶಕ್ಕೆ ಪಡೆದ ವಿಡಿಯೋ ಕೂಡ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ, ಸಾವನ್ನಪ್ಪಿದ ಅಮಾಯಕ ಜನರಿಗಿಂತ ನಾನು ಮುಖ್ಯವಾದವಳಲ್ಲ. ನೀವು ಸರ್ಕಾರವನ್ನು ರಕ್ಷಿಸುತ್ತಿದ್ದೀರ. ನನ್ನನ್ನು ಬಂಧಿಸಲು ನಿಮ್ಮ ಬಳಿ ವಾರೆಂಟ್ ಇದೆಯೇ? ವಾರೆಂಟ್ ನೀಡದಿದ್ದರೆ ನೀವು ನನ್ನನ್ನು ಮುಟ್ಟುವಂತಿಲ್ಲ ಎಂದು ಹೇಳಿದ್ದರು. ಆದರೂ ಪೊಲೀಸರು ಅವರನ್ನು ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿರಿಸಿದ್ದರು.
ಉತ್ತರ ಪ್ರದೇಶದ ಸೀತಾಪುರದ ಪಿಎಸಿ ಗೆಸ್ಟ್ ಹೌಸ್ ನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದ್ದು, ಬಂಧನ ಬಳಿಕ ಪ್ರಿಯಾಂಕಾ ಗಾಂಧಿ ತಮ್ಮ ಕೊಠಡಿಯನ್ನು ಖುದ್ದು ತಾವೇ ಪೊರಕೆ ಹಿಡಿದು ಕಸ ಗುಡಿಸಿರುವ ವಿಡಿಯೋ ಕೂಡ ವೈರಲ್ ಆಗಿದೆ.