ಕಲಬುರಗಿಯಲ್ಲಿ ಮತ್ತೆ ಲಘು ಭೂಕಂಪ: ಗ್ರಾಮಸ್ಥರಲ್ಲಿ ತೀವ್ರ ಆತಂಕ
ಕಲಬುರಗಿ: ಕಲಬುರಗಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಮತ್ತೆ ಭಾನುವಾರ ಬೆಳಗ್ಗೆ ಲಘು ಭೂಕಂಪ ಸಂಭವಿಸಿದೆ.
ಭಾನುವಾರ 6.06 ನಿಮಿಷಕ್ಕೆ ಈ ಲಘು ಭೂ ಕಂಪನ ಆಗಿದೆ ಎಂದು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಭೂ ಕಂಪನ ಕೇಂದ್ರವೂ ಮಾಹಿತಿ ನೀಡಿದೆ. ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಹಲಚೇರಾ, ಗಡಿಕೇಶ್ವರ, ರಾಜಾಪುರ ಸೇರಿದಂತೆ ಕೆಲವೆಡೆ ಲಘು ಭೂ ಕಂಪನ ಆಗಿದೆ.
ಕಳೆದ ಎರಡು ದಿನಗಳಿಂದ ಕಲಬರುಗಿ ಜಿಲ್ಲೆಯ ಗ್ರಾಮಗಳಲ್ಲಿ ಮೇಲಿಂದ ಮೇಲೆ ಉಂಟಾಗುತ್ತಿರುವ ಲಘು ಭೂ ಕಂಪನ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಭಾಗದಲ್ಲಿ ಗ್ರಾಮಸ್ಥರು ಈಗ ತೀವ್ರ ಆತಂಕದಲ್ಲಿಯೇ ದಿನ ದೂಡುತ್ತಿದ್ದಾರೆ.
ಭಾನುವಾರ ಬೆಳಗ್ಗೆ ಎರಡು ಬಾರಿ ಲಘು ಭೂ ಕಂಪನದ ಅನುಭವವಾಗಿದೆ. ಭೂಕಂಪದಿಂದಾಗಿ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿವೆ. ಜನರು ಆತಂಕದಿಂದ ಮನೆಯಿಂದ ಹೊರಬಂದಿದ್ದಾರೆ.
ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಬಂದು ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ಗ್ರಾಮದ ಹಿರಿಯರು ತಿಳಿಸಿದ್ದಾರೆ.