ಚಿಂಚೋಳಿಯಲ್ಲಿ ಸತತ ಎರಡು ದಿನ ಭೂಮಿ ಕಂಪನ: ಆತಂಕದಲ್ಲಿ ಜನ

ಹೈಲೈಟ್ಸ್‌:

  • ಶನಿವಾರ ನಸುಕಿನ 5.45ರ ಸುಮಾರಿಗೆ ಗಡಿಕೇಶ್ವರ ಗ್ರಾಮದಲ್ಲಿ ಭೂಕಂಪ
  • ಶುಕ್ರವಾರ ರಾತ್ರಿ 1 ಗಂಟೆ ವೇಳೆಯೂ ಭೂಕಂಪನದ ಅನುಭವ
  • ಭೂಕಂಪನದ ಭೀತಿಯಿಂದ ಮುಕ್ತಿ ನೀಡಲು ಗ್ರಾಮಸ್ಥರ ಒತ್ತಾಯ

ಕಲಬುರಗಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜನರಿಗೆ ಮತ್ತೆ ಭೂಕಂಪ ಭೀತಿ ಬೆಂಬಿಡದೆ ಕಾಡುತ್ತಿದೆ. ಕಳೆದ ಎರಡು ದಿ‌ಗಳಿಂದ ಸತತ ಎರಡು ಬಾರಿ ಭೂಮಿ ಕಂಪಿಸಿದ್ದು, ಆತಂಕದಲ್ಲಿ ಜೀವನ ನಡೆಸಿದ್ದಾರೆ. ಚಿಂಚೋಳಿ ತಾಲೂಕಿನ ಗಡಿಗೇಶ್ವರ ಗ್ರಾಮದಲ್ಲಿ ಮತ್ತೆ ಲಘು ಭೂ ಕಂಪನ ಅನುಭವ ಉಂಟಾಗಿದೆ.

ಶನಿವಾರ ನಸುಕಿನ 5.40 ರ ಸಮಯದಲ್ಲಿ ಎರಡು ಬಾರಿ ಲಘು ಭೂ ಕಂಪನದ ಅನುಭವವಾಗಿದೆ. ಭೂಕಂಪದಿಂದಾಗಿ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿವೆ. ಜನರು ಆತಂಕದಿಂದ ಮನೆಯಿಂದ ಹೊರಬಂದಿದ್ದಾರೆ. ಶುಕ್ರವಾರ ಕೂಡ ಗ್ರಾಮದಲ್ಲಿ ಲಘು ಭೂ ಕಂಪನವಾಗಿತ್ತು. ಗಡಿಕೇಶ್ವರ ಮತ್ತು ತೇಗಲತಿಪ್ಪಿ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ 1 ಗಂಟೆ ಸುಮಾರಿಗೆ ಭೂಮಿ ಕಂಪಿಸಿತ್ತು. ಕಳೆದ ಕೆಲ ವರ್ಷಗಳಿಂದ ಭೂಮಿಯ ಅಡಿ ಭಾಗದಿಂದ ಭಾರಿ ಸದ್ದು ಕೇಳಿಬರುತ್ತಿತ್ತು. ಇದೀಗ ಗಡಿಕೇಶ್ವರದ ಜನರಿಗೆ ಮೇಲಿಂದ ಮೇಲೆ ಲಘು ಭೂ ಕಂಪನ ಅನುಭವವಾಗುತ್ತಿದ್ದು ಜನ ಆತಂಕದಲಿದ್ದಾರೆ.

ಗಡಿಗೇಶ್ವರ ಗ್ರಾಮದಲ್ಲಿ ಈ ಘಟನೆ ಪದೇ ಪದೇ ಮರುಕಳಿಸುತ್ತಿದೆ. ಆದರೆ ಇದಕ್ಕೆ ಮೂಲ ಕಾರಣ ಪತ್ತೆ ಹಚ್ಚುವ ಹಾಗೂ ಶಾಶ್ವತ ಪರಿಹಾರ ಒದಗಿಸಿ ಕೊಡುವಲ್ಲಿ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹಲವು ಬಾರಿ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರ ಹಾಗೂ ತಜ್ಞರ ತಂಡ ಭೇಟಿ ನೀಡಿದ್ದಾರೆ. ಆದರು ಸಹ ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವಲಿ ವಿಫಲವಾಗಿದ್ದಾರೆ. ಈ ಸಮಸ್ಯೆ ಕುರಿತು ಉಸ್ತುವಾರಿ ಸಚಿವರ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ ಮಲಗಿದ ಏಕಾಏಕಿ ಕೇಳಿಬರುವ ಭಾರಿ ಸದ್ದು ಹಾಗೂ ಭೂಮಿ ಕಂಪಿಸಿದ ಅನುಭವದಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಸಮಸ್ತ ಅಧಿಕಾರಿಗಳು ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕಾಗಿ ಗ್ರಾಮದ ಜನ ಒತ್ತಾಯಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *