Bangalore vs Kolkata: ಪ್ರಶಸ್ತಿ ಗೆಲ್ಲುವ ಆರ್ಸಿಬಿ ಕನಸು ಭಗ್ನ,ಗೆಲುವಿನ ನಗೆ ಬೀರಿದ ಕೆಕೆಆರ್
ನವದೆಹಲಿ: ಸುನಿಲ್ ನರೈನ್ ಅವರ ನಾಲ್ಕು ವಿಕೆಟ್ ಮತ್ತು 26 ರನ್ ಗಳ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಯನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿದೆ.
ಈ ಸೋಲಿನೊಂದಿಗೆ, ವಿರಾಟ್ ಕೊಹ್ಲಿ ನಾಯಕತ್ವದ ಯಾನವು ಕೊನೆಗೊಂಡಿದೆ, ಏಕೆಂದರೆ ಅವರು ಪ್ರಸ್ತುತ ಆವೃತ್ತಿಯ ನಂತರ ಆರ್ಸಿಬಿಯ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು.ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆಯುವ ಕ್ವಾಲಿಫೈಯರ್ 2 ರಲ್ಲಿ ಕೆಕೆಆರ್ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಬೆಂಗಳೂರು ನೀಡಿದ 139 ರನ್ ಗಳ ಗುರಿ ಬೆನ್ನಟ್ಟಿದ ಕೆಕೆಆರ್ (Kolkata Knight Riders) ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಮೊದಲ ವಿಕೆಟ್ ಗೆ 41 ರನ್ ಗಳ ಜೊತೆಯಾಟ ನೀಡಿದರು. ಆದಾಗ್ಯೂ, ಈ ಜೊತೆಯಾಟವನ್ನು ಅಂತಿಮವಾಗಿ ಪರ್ಪಲ್ ಕ್ಯಾಪ್ ಹೊಂದಿರುವ ಹರ್ಷಲ್ ಪಟೇಲ್ ಇನ್ನಿಂಗ್ಸ್ನ ಆರನೇ ಓವರ್ನಲ್ಲಿ ಮುರಿದರು. ನಂತರ ರಾಹುಲ್ ತ್ರಿಪಾಠಿ (6) ಅವರನ್ನು ಯುಜ್ವೇಂದ್ರ ಚಾಹಲ್ ಅವರು ಔಟ್ ಮಾಡಿದ್ದರಿಂದಾಗಿ ಕೆಕೆಆರ್ 7 ನೇ ಓವರ್ನಲ್ಲಿ 53/2 ಕ್ಕೆ ತಗ್ಗಿತು.
ಹರ್ಷಲ್ ಇನ್ನಿಂಗ್ಸ್ನ 12 ನೇ ಓವರ್ನಲ್ಲಿ ಅಯ್ಯರ್ (26) ರನ್ನು ಔಟ್ ಮಾಡಿದ ನಂತರ ಪಂದ್ಯಕ್ಕೆ ತಿರುವು ನೀಡಿದ್ದರಾದರೂ ಕೂಡ ನಂತರ ಬಂದಂತಹ ನರೈನ್ (26), ದಿನೇಶ್ ಕಾರ್ತಿಕ್ (10) ಮತ್ತು ನಿತೀಶ್ ರಾಣಾ (23) ರನ್ನು ಗಳಿಸುವ ಮೂಲಕ ಕೊಲ್ಕತ್ತಾ ಗೆಲುವಿನ ದಡವನ್ನು ಸೇರಿತು.
ಸಂಕ್ಷಿಪ್ತ ಸ್ಕೋರ್ಗಳು: ಆರ್ಸಿಬಿ 138/7 (ವಿರಾಟ್ ಕೊಹ್ಲಿ 39, ದೇವದತ್ ಪಡಿಕ್ಕಲ್ 21, ಸುನೀಲ್ ನರೇನ್ 4-21) ಕೆಕೆಆರ್ 139/6 (ಸುನೀಲ್ ನರೇನ್ 26, ಶುಭಮನ್ ಗಿಲ್ 29, ಹರ್ಷಲ್ ಪಟೇಲ್ 2-19).]