ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂಥ ಕ್ರಮಗಳು ಬೇಡ; ಭಾರತಕ್ಕೆ ಚೀನಾದ ಎಚ್ಚರಿಕೆ
ನವದೆಹಲಿ: ಲಡಾಖ್ ಪೂರ್ವಭಾಗದಲ್ಲಿ ವಾಸ್ತವಗಡಿರೇಖೆಯ ಬಳಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂಥ ಯಾವುದೇ ಕ್ರಮ ಕೈಗೊಳ್ಳದಂತೆ ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರೆ ಜಿ ರಾಂಗ್ ಗುರುವಾರ ಟ್ವೀಟ್ ಮಾಡಿದ್ದು, ಭಾರತದಲ್ಲಿ ತಾವು ಸಂಪರ್ಕ ಹೊಂದಿರುವ ವ್ಯಕ್ತಿಯೊಬ್ಬರು ಬುಧವಾರ ರಾತ್ರಿ ಕರೆ ಮಾಡಿ, ಲಡಾಖ್ ಬಿಕ್ಕಟ್ಟು ಇನ್ನೂ ಎಷ್ಟು ದಿನ ಮುಂದುವರಿಯುತ್ತದೆ ಎಂದು ಪ್ರಶ್ನಿಸಿದರು ಎಂದು ಹೇಳಿದರು.
ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಚೀನಾ ಮತ್ತು ಭಾರತ ಮಿಲಿಟರಿ ಹಾಗೂ ರಾಜತಾಂತ್ರಿಕ ಮಾರ್ಗಗಳಲ್ಲಿ ಮಾತುಕತೆ ನಡೆಸುತ್ತಿವೆ. ಸದ್ಯಕ್ಕೆ ಚೀನಾ-ಭಾರತ ಗಡಿ ಭಾಗದಲ್ಲಿ ಪರಿಸ್ಥಿತಿ ಸ್ಥಿರವಾಗಿದ್ದು, ಸೇನೆಗಳನ್ನು ಹಿಂಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಂಧಾನ ಮಾತುಕತೆಯಲ್ಲಿ ಭಾರತ ಎಲ್ಲಾದರೂ ಒಂದು ಕಡೆ ಸಂಧಾನ ಮಾಡಿಕೊಳ್ಳುವುದು ಒಳ್ಳೆಯದು. ಅಷ್ಟೇ ಅಲ್ಲ, ಗಡಿ ಭಾಗದಲ್ಲಿ ಸದ್ಯಕ್ಕೆ ಇರುವ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂಥ ಯಾವುದೇ ಕ್ರಮ ಕೈಗೊಳ್ಳದಂತೆ ತನಗೆ ತಾನೇ ನಿರ್ಬಂಧವಹಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಬೆದರಿಕೆ ಹಾಕಿದರು.
ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಭಾರತ ಸೂಕ್ತ ವಾತಾವರಣ ಸೃಷ್ಟಿಸಬೇಕು. ಜತೆಗೆ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸುವಂತೆ ಕ್ರಮ ಖೈಗೊಳ್ಳಬೇಕು ಎಂದು ಹೇಳಿದರು.
ಡೆಪ್ಸಾಂಗ್ ಕುರಿತ ಮಾತುಕತೆ ವಿಫಲ: ಡೆಪ್ಸಾಂಗ್ ಸಮತಟ್ಟು ಪ್ರದೇಶದಲ್ಲಿ ಚೀನಾ ನಿಯೋಜಿಸಿರುವ 15 ಸಾವಿರ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಕುರಿತು ಶನಿವಾರ ಮಧ್ಯಾಹ್ನ ನಡೆದಿದ್ದ ಮಾತುಕತೆ ವಿಫಲವಾಗಿದೆ.
ದೇಶದ ಭದ್ರತೆ ದೃಷ್ಟಿಯಿಂದ ಡೆಪ್ಸಾಂಗ್ ಸಮತಟ್ಟು ಪ್ರದೇಶ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇದು ಆಯಕಟ್ಟಿನ ಪ್ರದೇಶದಲ್ಲಿದ್ದು, ದೌಲತ್ ಬೇಗ್ ಓಲ್ಡಿ ಬಳಿಯಿರುವ ಏರ್ಸ್ಟ್ರಿಪ್ ಅಲ್ಲದೆ ಉತ್ತರದಲ್ಲಿ ಕರಾಕೋರಂ ಪಾಸ್ಗೆ ಸಂಪರ್ಕ ಒದಗಿಸುವಲ್ಲಿ ಇದು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.
ಡೆಪ್ಸಾಂಗ್ ಸಮತಟ್ಟು ಪ್ರದೇಶದ ಬಹುತೇಕ ಭಾಗಗಳು ಭಾರತದ ಹಿಡಿತದಲ್ಲೇ ಇದೆ. ಆದರೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಈ ಪ್ರದೇಶದ ಪೂರ್ವಭಾಗದಲ್ಲಿ ಜಮಾವಣೆಗೊಂಡಿದೆ. ದೌಲತ್ ಬೇಗ್ ಓಲ್ಡಿಯ ಏರ್ಸ್ಟ್ರಿಪ್ನಿಂದ 25 ಕಿ.ಮೀ. ದೂರದಲ್ಲಿರುವ ಇಕ್ಕಟ್ಟಾದ ಪ್ರದೇಶ (ಬಾಟಲ್ನೆಕ್) ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಚೀನಾ ಇದೀಗ ಈ ಪ್ರದೇಶವನ್ನು ಅತಿಕ್ರಮಿಸಿಕೊಳ್ಳಲು ಹವಣಿಸುತ್ತಿದೆ ಎಂದು ಭಾರತೀಯ ಸೇನಾಪಡೆ ಮೂಲಗಳು ತಿಳಿಸಿವೆ.