ಆಫ್ಘನ್‌ ಉಗ್ರರ ತಾಣವಾಗದಂತೆ ತಡೆಯಬೇಕು: ಮೋದಿ

* ಜಿ-20 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ

* ಆಫ್ಘನ್‌ಗೆ ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚಬೇಕು

* ಆಫ್ಘನ್‌ ಸರ್ಕಾರ ಮಹಿಳೆ, ಅಲ್ಪಸಂಖ್ಯಾತರ ಒಳಗೊಳ್ಳಬೇಕು

* ಭಯೋತ್ಪಾದನೆ, ಡ್ರಗ್ಸ್‌ ವಿರುದ್ಧ ಸಂಘಟಿತ ಹೋರಾಟ ಅಗತ್ಯ

 

ನವದೆಹಲಿ(ಅ.13): ತಾಲಿಬಾನ್‌(Taliban) ಕಪಿಮುಷ್ಠಿಗೆ ಸಿಲುಕಿದ ಅಷ್ಘಾನಿಸ್ತಾನ(Afghanistan) ಕುರಿತಾದ ವಿಶೇಷ ಜಿ-20 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮಂಗಳವಾರ ಆನ್‌ಲೈನ್‌ ಮುಖಾಂತರ ಪಾಲ್ಗೊಂಡರು.

ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರ ಅಧ್ಯ​ಕ್ಷ​ತೆಯ ಜಿ-20 ಶೃಂಗವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಆಫ್ಘನ್‌(Afghanistan) ಪ್ರದೇಶವನ್ನು ಯಾವುದೇ ಕಾರಣಕ್ಕೂ ಜಾಗತಿಕ ಮತ್ತು ಪ್ರಾದೇಶಿಕವಾಗಿ ಉಗ್ರರ ತಾಣದ ಮೂಲವಾಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳಬೇಕಿದೆ’ ಎಂದು ಪ್ರತಿಪಾದಿಸಿದರು. ಆಫ್ಘನ್‌ ಪ್ರಜೆಗಳು ಮತ್ತು ಎಲ್ಲರನ್ನು ಒಳಗೊಂಡ ಆಡಳಿತಕ್ಕೆ ಮಾನವೀಯ ನೆಲೆಯಲ್ಲಿ ತ್ವರಿತ ಮತ್ತು ತಡೆರಹಿತ ನೆರವಿನ ಹಸ್ತ ಚಾಚಬೇಕಿದೆ’ ಎಂದರು.

ಮಹಿಳೆಯರು(Women) ಮತ್ತು ಅಲ್ಪಸಂಖ್ಯಾತರನ್ನು(Minorities) ಒಳಗೊಂಡ ಆಡಳಿತ ರಚನೆಯಾಗಬೇಕು. ಅಲ್ಲದೆ ಆಫ್ಘನ್‌ನಲ್ಲಿ ಮನೆ ಮಾಡಿರುವ ಮೂಲಭೂತವಾದಿ, ಭಯೋತ್ಪಾದನೆ ಮತ್ತು ಮಾದಕ ದ್ರವ್ಯದ ಕಳ್ಳ ಸಾಗಾಟದ ವಿರುದ್ಧ ಸಂಘಟಿತ ಹೋರಾಟಕ್ಕೆ ಮೋದಿ ಅವರು ಕರೆ ನೀಡಿದರು.

ಅಷ್ಘಾನಿಸ್ತಾನದ ಆರ್ಥಿಕ ಬೆಳವಣಿಗೆ ಮತ್ತು ಯುವಕ ಹಾಗೂ ಮಹಿಳೆಯರ ಅಭ್ಯುದಯಕ್ಕಾಗಿ ಕಳೆದ ಎರಡು ದಶಕಗಳಿಂದ ಭಾರತ ಹಲವು ಕೊಡುಗೆಗಳನ್ನು ನೀಡಿದೆ. ತನ್ಮೂಲಕ ಭಾರತವು ಆಫ್ಘನ್‌ನ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ನೆರವಾಗಿದೆ. ಆಫ್ಘನ್‌ನಲ್ಲಿ 500ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ಭಾರತ ಜಾರಿಗೊಳಿಸಿದೆ ಎಂದಿರುವ ಮೋದಿ ಅವರು, ಭಾರತವು ತಮ್ಮ ಆತ್ಮೀಯ ರಾಷ್ಟ್ರವೆಂಬ ಭಾವನೆ ಆಫ್ಘನ್‌ ಜನರಲ್ಲಿದೆ. ಅಷ್ಘಾನಿಸ್ತಾನದ ಜನರ ಹಸಿವು ಮತ್ತು ಅಪೌಷ್ಟಿಕಾಂಶದ ನೋವು ಭಾರತೀಯರಿಗೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಆಫ್ಘನ್‌ಗೆ ತ್ವರಿತ ಮತ್ತು ತಡೆರಹಿತವಾಗಿ ಅಂತಾರಾಷ್ಟ್ರೀಯ ನೆರವಿನ ಅಗತ್ಯವಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಅಸ್ಥಿರಕ್ಕೆ ಯತ್ನಿಸಿದರೆ ಹುಷಾರ್‌

ಅಮೆರಿಕ ಮತ್ತು ಅಷ್ಘಾನಿಸ್ತಾನದ ಪ್ರತಿನಿಧಿಗಳು ಕತಾರ್‌ ರಾಜಧಾನಿ ದೋಹಾದಲ್ಲಿ ಶನಿವಾರ ಪರಸ್ಪರ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಈ ವೇಳೆ ಆಫ್ಘನ್‌ಗೆ ಅಗತ್ಯವಿರುವ ಲಸಿಕೆ ನೆರವು ನೀಡಲು ಅಮೆರಿಕ ಸಮ್ಮತಿಸಿದೆ.

ಆ ಬಳಿಕ ಮಾತನಾಡಿದ ಆಫ್ಘನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುಟ್ಟಾಕಿ, ‘ನಮ್ಮ ಸರ್ಕಾರದ ಅಸ್ಥಿರಗೊಳಿಸುವ ಯತ್ನವು ಯಾರಿಗೂ ಒಳ್ಳೆಯದಲ್ಲ. ಆಫ್ಘನ್‌ ಜತೆ ಉತ್ತಮ ಸಂಬಂಧ ಬೆಸೆಯುವುದು ಎಲ್ಲರಿಗೂ ಒಳ್ಳೆಯದು’ ಎಂದಿದ್ದಾನೆ.ಇದಕ್ಕೆ ಅಮೆರಿಕದ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆಫ್ಘನ್‌ನಲ್ಲಿ 20 ವರ್ಷ ಬೀಡುಬಿಟ್ಟಿದ್ದ ತನ್ನ ಸೇನೆಯನ್ನು ಅಮೆರಿಕ ಹಿಂಪಡೆದ ಮತ್ತು ಆಫ್ಘನ್‌ನಲ್ಲಿ ತಾಲಿಬಾನ್‌ ಸರ್ಕಾರ ರಚನೆಯಾದ ಬಳಿಕ ಉಭಯ ದೇಶಗಳ ಮೊದಲ ಭೇಟಿಯಿದು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *