ಬೆಂಗ್ಳೂರಲ್ಲಿ ಶತಕ ಬಾರಿಸಿದ ಡೀಸೆಲ್‌ ದರ: ಬಿಜೆಪಿ ಸರ್ಕಾರಕ್ಕೆ ಸಾರ್ವಜನಿಕರಿಂದ ಹಿಡಿಶಾಪ

*  15 ದಿನದಲ್ಲಿ 4.30 ಏರಿದ ಡೀಸೆಲ್‌ ದರ ಈಗ 100
*  ಜನಸಾಮಾನ್ಯರಿಗೆ ದರ ಏರಿಕೆ ಬಿಸಿ
*  ತೈಲ ದರ ಏರಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ 

ಬೆಂಗಳೂರು(ಅ.17):  ರಾಜಧಾನಿಯಲ್ಲಿ ಸತತವಾಗಿ ತೈಲ ದರ(Fuel Price) ಏರಿಕೆಯಾಗುತ್ತಿದ್ದು, ಶನಿವಾರ 37 ಪೈಸೆ ಏರಿಕೆಯೊಂದಿಗೆ ಲೀಟರ್‌ ಡೀಸೆಲ್‌(Diesel) ದರ ದಾಖಲೆಯ 100 ರೂ. ತಲುಪಿದೆ. ನಗರದಲ್ಲಿ ಅ.1ರಂದು ಲೀಟರ್‌ ಡೀಸೆಲ್‌ ದರ 95.70 ಇತ್ತು. ಕಳೆದ 15 ದಿನಗಳಲ್ಲಿ ಬರೋಬ್ಬರಿ 4.30 ಏರಿಕೆಯೊಂದಿಗೆ ಶತಕ ತಲುಪಿದೆ. ಬೆಂಗಳೂರಿನ(Bengaluru) ಇತಿಹಾಸದಲ್ಲೇ(History) ಮೊದಲ ಬಾರಿಗೆ ಡೀಸೆಲ್‌ ನೂರು ರು. ತಲುಪಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ(International Oil Market) ಕಚ್ಚಾ ತೈಲದ ದರ ಹೆಚ್ಚಳ ಆಗಿರುವುದರಿಂದ ದೇಶದಲ್ಲಿ(India) ತೈಲ ದರ ಏರಿಕೆಯಾಗುತ್ತಿದೆ. ದೇಶದಲ್ಲಿ ಕಳೆದ ಕೆಲ ವರ್ಷಗಳಿಂದ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ನಿತ್ಯ ದರ ಪರಿಷ್ಕರಣೆ(Rate Revision) ಮಾಡಲಾಗುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಏರಿಕೆ ಅಥವಾ ಇಳಿಕೆಗೆ ಅನುಗುಣವಾಗಿ ದೇಶದಲ್ಲಿ ತೈಲ ದರ ಪರಿಷ್ಕರಣೆಯಾಗುತ್ತದೆ. ಅದರಂತೆ ಈಗ ತೈಲ ದರ ಏರಿಕೆಯಾಗಿದ್ದು, ನಗರದಲ್ಲಿ ಡೀಸೆಲ್‌ ನೂರು ರು. ತಲುಪಿದೆ ಎಂದು ಬೆಂಗಳೂರು ಪೆಟ್ರೋಲಿಯಂ ಡೀಲ​ರ್ಸ್‌ ಅಸೋಸಿಯೇಷನ್‌ ಸದಸ್ಯ ತಾರಾನಾಥ್‌ ಹೇಳಿದರು.

 

ಜನಸಾಮಾನ್ಯರಿಗೆ ದರ ಏರಿಕೆ ಬಿಸಿ:

ತೈಲ ದರ ಏರಿಕೆಯಿಂದ ವಾಹನ ಸವಾರರು ಸೇರಿದಂತೆ ಜನಸಾಮಾನ್ಯರ ಜೇಬಿಗೆ ಹೊರೆಯಾಗಲಿದೆ. ರಾಜಧಾನಿಯಲ್ಲಿ ಪೆಟ್ರೋಲ್‌ ಈಗಾಗಲೇ ಶತಕದ ಗಡಿ ದಾಟಿದ್ದು, ಮುಂದಿನ ಎರಡು-ಮೂರು ದಿನಗಳಲ್ಲಿ 110 ಗಡಿ ದಾಟುವ ಸಾಧ್ಯತೆಯಿದೆ. ತೈಲ ದರ ಏರಿಕೆಯಿಂದ ಸರಕು ಸಾಗಣೆ ವಾಹನಗಳ(Vehicles) ಬಾಡಿಗೆ, ಖಾಸಗಿ ವಾಹನಗಳ ಬಾಡಿಗೆ ದರ, ದಿನ ಬಳಕೆ ವಸ್ತುಗಳ ದರವೂ ಏರಿಕೆಯಾಗಲಿದೆ. ಇದರಿಂದ ಜನಸಾಮಾನ್ಯರ ಜೀವನ ನಿರ್ವಹಣೆಗೆ ತಗುಲುವ ವೆಚ್ಚವೂ ಹೆಚ್ಚಳವಾಗಲಿದೆ. ಈಗಾಗಲೇ ಅಡುಗೆ ಅನಿಲ(LPG) ದರ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರು, ಇನ್ನು ಮುಂದೆ ತೈಲ ದರ ಏರಿಕೆಯ ಪರಿಣಾಮಗಳನ್ನು ಎದುರಿಸುವುದು ಅನಿವಾರ್ಯವಾಗಲಿದೆ. ತೈಲ ದರ ಏರಿಕೆ ವಿರುದ್ಧ ಈಗಾಗಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ತೆರಿಗೆ ಕಡಿತ ಒಂದೇ ದಾರಿ

ತೈಲ ದರ ಏರಿಕೆ ವಿರುದ್ಧ ಜನಸಾಮಾನ್ಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಸದ್ಯಕ್ಕೆ ತೈಲ ದರ ಇಳಿಕೆ ಲಕ್ಷಣಗಳು ಕಾಣಿಸುತ್ತಿಲ್ಲ. ಏಕೆಂದರೆ, ತೈಲ ಉತ್ಪಾದಿಸುವ ದೇಶಗಳ ನಡುವಿನ ಸಮಸ್ಯೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್‌-ಡೀಸೆಲ್‌ ಮೇಲೆ ವಿಧಿಸುವ ತೆರಿಗೆಯನ್ನು(Tax) ಕೊಂಚ ಇಳಿಕೆ ಮಾಡಿದರೆ ಮಾತ್ರ ತೈಲ ದರ ಕಡಿಮೆಯಾಗಲಿದೆ. ಇಲ್ಲವಾದರೆ, ಜನಸಾಮಾನ್ಯರು ಈ ದರ ಏರಿಕೆ ಬಿಸಿ ಅನುಭವಿಸುವುದು ಅನಿವಾರ್ಯವಾಗಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *