T20 World Cup 2021| ಟಿ20 ವಿಶ್ವಕಪ್ಗೆ ಇಂದಿನಿಂದ ಸಿಗಲಿದೆ ಅದ್ದೂರಿ ಚಾಲನೆ; ಯಾರು ಕಪ್ ಗೆಲ್ಲುವ ಫೇವರಿಟ್?
ಬಹುನಿರೀಕ್ಷಿತ 2021 ರ ಟಿ 20 ವಿಶ್ವಕಪ್‌ಗಾಗಿ (T20 World Cup 2021) ವೇದಿಕೆ ಸಜ್ಜಾಗಿದೆ. ಅಕ್ಟೋಬರ್ 17ರ ಭಾನುವಾರದಿಂದ ಟೂರ್ನಿಗೆ ವೈಭದ ಚಾಲನೆ ಸಿಗಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಓಮನ್ (Oman) ವಿರುದ್ಧ ಪಪುವಾ ನ್ಯೂಗಿನಿಯಾ (Papua New Guinea) ತಂಡ ಕಣಕ್ಕಿಳಿಯಲಿದೆ. ಇಂದು ಸಂಜೆ ನಡೆಯುವ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ (Bangladesh) ತಂಡ ಸ್ಕಾಟ್ಲೆಂಡ್ (Scotland) ವಿರುದ್ಧ ಸೆಣಸಲಿದೆ. ಆದರೆ, ಪ್ರಮುಖ ಬಲಿಷ್ಠ ತಂಡಗಳ ಪಂದ್ಯಗಳು ಆರಂಭವಾಗಲು ಇನ್ನೂ ನಾಲ್ಕೈದು ದಿನಗಳಿದ್ದು, ರೋಚಕ ಪಂದ್ಯಗಳನ್ನು ನೋಡಲು ಮತ್ತಷ್ಟು ದಿನ ಕಾಯುವ ಅಗತ್ಯ ಇದೆ. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, 4 ಗ್ರೂಪ್ಗಳನ್ನು ವಿಂಗಡಿಸಲಾಗಿದೆ. ಗ್ರೂಪ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.
ಗ್ರೂಪ್ -1
1. ಇಂಗ್ಲೆಂಡ್
2. ಆಸ್ಟ್ರೇಲಿಯಾ
3. ದಕ್ಷಿಣ ಆಫ್ರಿಕಾ
4. ವೆಸ್ಟ್ ಇಂಡೀಸ್
ಗ್ರೂಪ್-2
1. ಅಫ್ಘಾನಿಸ್ತಾನ
2. ಪಾಕಿಸ್ತಾನ
3. ಭಾರತ
4. ನ್ಯೂಜಿಲೆಂಡ್
ಗ್ರೂಪ್ – ಎ
1. ಐರ್ಲೆಂಡ್
2. ನಮೀಬಿಯಾ
3. ಶ್ರೀಲಂಕಾ
4. ನೆದರ್ಲೆಂಡ್
ಗ್ರೂಪ್ – ಬಿ
1. ಬಾಂಗ್ಲಾದೇಶ
2. ಪಪುವಾ ನ್ಯೂಗಿನಿ
3. ಸ್ಕಾಟ್ಲೆಂಡ್
4. ಓಮನ್
ಯಾರು ಟಿ-20 ವಿಶ್ವಕಪ್ ಗೆಲ್ಲುವ ಫೇವರಿಟ್?
ಟೂರ್ನಿ ಆರಂಭಕ್ಕೂ ಮುನ್ನವೇ ಈಗಾಗಲೇ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಯಾವುದು? ಎಂಬ ಚರ್ಚೆ ಆರಂಭವಾಗಿದೆ. ಈ ಹಿಂದೆ 2016ರಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ಡರೇನ್ ಸಮಿ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ಅನ್ನು ಮಣಿಸಿ ವಿಶ್ವಕಪ್ ಜಯಿಸಿತ್ತು. ಬೆನ್ ಸ್ಟೋಕ್ಸ್ ಎಸೆತ ಕೊನೆಯ ನಾಲ್ಕು ಎಸೆತಗಳಿಗೆ ವೆಸ್ಟ್ ಇಂಡೀಸ್ನ ಕಾರ್ಲೋಸ್ ಬ್ರಾಥ್ವೇಟ್ ಸತತ ನಾಲ್ಕು ಸಿಕ್ಸರ್ ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ರೋಚಕ ಗೆಲುವು ದಾಖಲಿಸಿ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತ್ತು.
ಹಾಗೆ ನೋಡಿದರೆ ವೆಸ್ಟ್ ಇಂಡೀಸ್ ಈ ವರ್ಷ ರನ್ನಿಂಗ್ ಚಾಂಪಿಯನ್ ಅಲ್ಲದೆ, ಕಿರೋನ್ ಪೊಲ್ಲಾರ್ಡ್ ನೇತೃತ್ವದಲ್ಲಿ ವೆಸ್ಟ್ ಇಂಡೀಸ್ ಈ ವರ್ಷವೂ ಅದ್ಭುತ ಪ್ರದರ್ಶನ ನೀಡಿದೆ. ತಂಡದಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡುವಂತಹ ಅನೇಕ ಆಟಗಾರರು ಇದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತಂಡ ಸಮತೋಲಿತವಾಗಿದೆ. ಹೀಗಾಗಿ ಫೇವರಿಟ್ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಅಗ್ರಸ್ಥಾನದಲ್ಲಿದೆ.‘
ನಂತರದ ಸ್ಥಾನದಲ್ಲಿ ಕ್ರಮವಾಗಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ, ಬಾಬರ ಅಜಂ ನೇತೃತ್ವದ ಪಾಕಿಸ್ತಾನ, ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ಹಾಗೂ ಆರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ಕಪ್ ಗೆಲ್ಲುವ ಫೇವರಿಟ್ ತಂಡಗಳ ಪಟ್ಟಿಯಲ್ಲಿದೆ. ಆದರೆ, ಈಗಾಗಲೇ ಅನೇಕ ವಿಶ್ಲೇಷಕರು ಮತ್ತು ಕ್ರಿಕೆಟ್ ತಜ್ಞರು ಭಾರತ ಮತ್ತು ಪಾಕಿಸ್ತಾನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಎಲ್ಲಾ ಟಿಕೆಟ್ ಸೋಲ್ಡ್ ಔಟ್:
ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಇಡೀ ವಿಶ್ವ ಕಾದು ಕುಳಿತಿರುತ್ತದೆ. ವಿಶ್ವಕಪ್ನ ಇತರೆ ಪಂದ್ಯಗಳಿಗಿಂತ ಈ ಪಂದ್ಯಕ್ಕೆ ಹೆಚ್ಚು ಮಹತ್ವ ಇರುತ್ತದೆ. ಕಳೆದ ವಿಶ್ವಕಪ್ ನಂತರ ಭಾರತ ಮತ್ತು ಪಾಕಿಸ್ತಾನ ಈ ವರ್ಷದ ಟಿ20 ವಿಶ್ವಕಪ್ನಲ್ಲಿ ಮತ್ತೆ ಮುಖಾಮುಖಿಯಾಗುತ್ತಿರುವ ಕಾರಣ ಈ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಬಕ ಪಕ್ಷಿಯಂತೆ ಕಾದುಕುಳಿತಿದ್ದಾರೆ.
ಅಕ್ಟೋಬರ್ 24 ರಂದು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಈ ಪಂದ್ಯದ ಎಲ್ಲಾ ಟಿಕೆಟ್ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿದ್ದು, ಸೋಲ್ಡ್ ಔಟ್ ಆಗಿದೆ ಎಂಬ ಮಾಹಿತಿಗಳು ದೊರೆತಿದೆ.
ಪಾಕಿಸ್ತಾನ ತಂಡ ಭಾರತವನ್ನು ಈವರೆಗೆ ಏಕದಿನ ಮತ್ತು ಟಿ20 ವಿಶ್ವಕಪ್ನಲ್ಲಿ ಸೋಲಿಸಿದ ದಾಖಲೆಗಳೇ ಇಲ್ಲ. ಈ ನಡುವೆ ಪಾಕ್ ನಾಯಕ ಬಾಬರ್ “ಅಜಂ ಭಾರತದ ವಿರುದ್ಧ ಈ ಬಾರಿ ಪಾಕಿಸ್ತಾನ ಖಚಿತವಾಗಿ ಗೆಲ್ಲಲಿದೆ” ಎಂದು ಹೇಳಿಕೆ ನೀಡಿರುವುದು ಪಂದ್ಯದ ವೋಲ್ಟೇಜ್ ಅನ್ನು ಮತ್ತಷ್ಟು ಹೆಚ್ಚಿಸಿದೆ.