29 ಕೋಟಿ ಜನರಿಗೆ ಮಾತ್ರ 2 ಡೋಸ್ ಲಸಿಕೆ ನೀಡಿ 100 ಕೋಟಿ ಲಸಿಕೆಯ ಸಂಭ್ರಮಾಚರಣೆ ಹಾಸ್ಯಾಸ್ಪದ; ಸಿದ್ದರಾಮಯ್ಯ

ಬೆಂಗಳೂರು: ದೇಶದ ಜನತೆಗೆ 100 ಕೋಟಿ ಲಸಿಕೆ ನೀಡಿ ದಾಖಲೆ ನಿರ್ಮಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸಂಭ್ರಮಾಚರಣೆ ಮಾಡುತ್ತಿರುವ ಸಮಯದಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಕೊರೊನಾ ಲಸಿಕೆ ನೀಡಿರುವ ನರೇಂದ್ರ ಮೋದಿ ಸರ್ಕಾರ, ಅತ್ಯವಸರದಿಂದ 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯ ಮಾಡಿರುವ ಸಿದ್ದರಾಮಯ್ಯ, ದೇಶದಲ್ಲಿ ಇಲ್ಲಿಯ ವರೆಗೆ 29 ಕೋಟಿ ಜನರಿಗೆ ಎರಡು ಡೋಸ್ ಮತ್ತು 42 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಮಾತ್ರ ನೀಡಲಾಗಿದೆ. 139 ಕೋಟಿ ಜನರಲ್ಲಿ 68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ. ಹಾಗಿದ್ದರೆ ಯಾವ ಸಾಧನೆಗೆ ಸಂಭ್ರಮಾಚರಣೆ? ಎಂದು ಪ್ರಶ್ನಿಸಿದ್ದಾರೆ.

ಘೋಷಿತ ಗುರಿಯಂತೆ ದೇಶದ 103 ಕೋಟಿ ವಯಸ್ಕರಿಗೆ ಡಿಸೆಂಬರ್ 31ರೊಳಗೆ 2 ಡೋಸ್ ನೀಡಲು 206 ಕೋಟಿ ಲಸಿಕೆ ಬೇಕಾಗಿದೆ ಎಂದಿರುವ ಸಿದ್ದರಾಮಯ್ಯ, ಆದರೆ ಇವರು ಲಸಿಕೆ ಕೊಟ್ಟಿರುವುದು ಕೊಟ್ಟಿರುವುದು 100 ಕೋಟಿ ಮಾತ್ರ. ಗುರಿ ತಲುಪಲು ಪ್ರತಿದಿನ 1.51 ಕೋಟಿ ಲಸಿಕೆ ನೀಡಬೇಕಾಗಿದೆ ಇದಕ್ಕಾಗಿ ಬೇಕಾಗಿರುವುದು ಸಿದ್ದತೆ, ಖಾಲಿ ತಟ್ಟೆಯ ಪ್ರಚಾರ ಅಲ್ಲ. ಅಮೆರಿಕ 56%, ಚೀನಾ 70% ಜನಸಂಖ್ಯೆಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಿ ಬೂಸ್ಟರ್ ಲಸಿಕೆ ನೀಡುವ ಸಿದ್ದತೆಯಲ್ಲಿದೆ. ಭಾರತದಲ್ಲಿ ಕೇವಲ 21% ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ. ಯಾವ ಸಾಧನೆಗೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ? ಎಂದು ಟೀಕಿಸಿದ್ದಾರೆ.

ಅಲ್ಲದೇ ‘ಸುಳ್ಳು ಸಾಧನೆಗಳ ಖಾಲಿ ತಟ್ಟೆ ಬಡಿಯುತ್ತಾ ದೇಶದ ಜನರನ್ನು ಮರುಳು ಮಾಡುತ್ತಾ ಬಂದ ನರೇಂದ್ರ ಮೋದಿ ಅವರೇ? ಮೊದಲು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಎರಡು ಡೋಸ್ ಲಸಿಕೆ ನೀಡಲು ಗಂಭೀರವಾಗಿ ಸರ್ಕಾರವನ್ನು ತೊಡಗಿಸಿಕೊಳ್ಳಿ. ಸಾಧನೆಯ ಸಂಭ್ರಮಾಚರಣೆ ಆ ಮೇಲೆ ಮಾಡೋಣ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸಂಭ್ರಮ ಹಂಚಿಕೊಂಡ ಪ್ರಧಾನಿ
100 ಕೋಟಿ ಲಸಿಕೆ ದಾಖಲೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದಿಲ್ಲಿಯ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿನ ವೈದ್ಯರು, ನರ್ಸ್‌ಗಳು ಮತ್ತು ಕೋವಿಡ್‌ ಲಸಿಕೆ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಿದರು. ಈ ವೇಳೆ ಲಸಿಕೆ ಪಡೆದ ವಿಶೇಷ ಚೇತನ ಯುವತಿಯೊಬ್ಬರು ‘ಏ ಮೇರೆ ವತನ್‌’ ಗೀತೆ ಹಾಡುವ ಮೂಲಕ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದರು. ಯುವತಿಯನ್ನು ಪ್ರಧಾನಿ ಅಭಿನಂದಿಸುತ್ತಿರುವ ಚಿತ್ರ ವೈರಲ್‌ ಆಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *