ನಾನು ಬಿಜೆಪಿ ಸೇರಿದ್ದಕ್ಕೆ ಬಿಎಸ್‌ವೈ ಕಾರಣ: ಸಿಎಂ ಬೊಮ್ಮಾಯಿ

*  ಯಡಿಯೂರಪ್ಪ ಆಶೀರ್ವಾದದಿಂದಲೇ ಶಾಸಕ, ಮುಖ್ಯಮಂತ್ರಿಯಾದೆ
*  ಹಾನಗಲ್‌ ಪ್ರಚಾರ ವೇಳೆ ಬಿಎಸ್‌ವೈ ಅವರನ್ನ ಹಾಡಿ ಹೊಗಳಿದ ಬೊಮ್ಮಾಯಿ
*  ಉದಾಸಿ, ಬಿಎಸ್‌ವೈ ನಡುವೆ ಸಾಮ್ಯತೆ
ಹಾವೇರಿ(ಅ. 23): ಉಪಚುನಾವಣೆ(Byelection) ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಹಾನಗಲ್‌ನಲ್ಲಿ ಶುಕ್ರವಾರ ಭರ್ಜರಿ ಪ್ರಚಾರ(Campaign) ನಡೆಸಿದರು. ತಾಲೂಕಿನ ಬಮ್ಮನಹಳ್ಳಿ, ಬೆಳಗಾಲಪೇಟೆ ಹಾಗೂ ಅಕ್ಕಿಆಲೂರು ಗ್ರಾಮಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಅವರ ಜತೆ ಸರಣಿ ಪ್ರಚಾರ ಸಭೆ ನಡೆಸಿದರು. ಈ ವೇಳೆ ಯಡಿಯೂರಪ್ಪ ಅವರನ್ನು ಹೊಗಳಿದ ಬೊಮ್ಮಾಯಿ, ಅವರ ಕುರಿತ ತಮ್ಮ ಅಭಿಮಾನ, ಗೌರವವನ್ನು ಜನರೆದುರು ತೆರೆದಿಟ್ಟರು.

ಹುಬ್ಬಳ್ಳಿಯಿಂದ(Hubballi) ಯಡಿಯೂರಪ್ಪ ಜತೆ ಒಂದೇ ವಾಹನದಲ್ಲಿ ಆಗಮಿಸಿದ ಬೊಮ್ಮಾಯಿ ಅವರು ಹಾನಗಲ್‌ನ(Hanagal) ಬಮ್ಮನಹಳ್ಳಿ ವಿರಕ್ತಮಠಕ್ಕೆ ಭೇಟಿ ನೀಡಿ, ಶ್ರೀಗಳಿಂದ ಆಶೀರ್ವಾದ ಪಡೆದರು. ನಂತರ ಇಬ್ಬರೂ ಮುಖಂಡರು ಜತೆಯಾಗಿ ಪ್ರಚಾರದ ಕಣಕ್ಕೆ ಧುಮುಕಿದರು.

ಬಿಎಸ್‌ವೈ ಆಶೀರ್ವಾದದಿಂದಲೇ ಬೆಳೆದೆ:

ಯಡಿಯೂರಪ್ಪ ಆಶೀರ್ವಾದದಿಂದಲೇ ನಾನು ಬಿಜೆಪಿಗೆ(BJP) ಬಂದೆ. ಶಾಸಕನಾದೆ, ಈಗ ಮುಖ್ಯಮಂತ್ರಿ(Chief Minister) ಆಗಿದ್ದೇನೆ. ಯಡಿಯೂರಪ್ಪ ಅವರ ಆಶೀರ್ವಾದ ಹಾನಗಲ್‌ ಕ್ಷೇತ್ರದ ಮೇಲಿದೆ. ಉದಾಸಿ ಅವರಿದ್ದಾಗ ಅವರ ಪ್ರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮುಖ್ಯಮಂತ್ರಿ ಆದ ಬಳಿಕ ಎಲ್ಲ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದು ಯಡಿಯೂರಪ್ಪ ಅವರು. ಹಾನಗಲ್‌ ದತ್ತು ಪಡೆದ ರೀತಿಯಲ್ಲಿ ಯಡಿಯೂರಪ್ಪ ಅವರು ಯೋಜನೆಗಳನ್ನು ಕೊಟ್ಟರು. ಅವರ ಆಗಮನದಿಂದ ಬಿಜೆಪಿಗೆ ಆನೆಬಲ ಬಂದಂತಾಗಿದೆ ಎಂದು ಗುಣಗಾನ ಮಾಡಿದರು.

 

ಉದಾಸಿ, ಬಿಎಸ್‌ವೈ ನಡುವೆ ಸಾಮ್ಯತೆ:

ಸಿ.ಎಂ.ಉದಾಸಿ(CM Udasi) ಅವರು ಹಾನಗಲ್‌ನಲ್ಲಿ ರೈತ(Farmers) ಹೋರಾಟ, ನೀರಾವರಿಗಾಗಿ ಹೋರಾಟ ನಡೆಸಿದ್ದರು. ಪಕ್ಕದ ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರು ರೈತ ಹೋರಾಟ ನಡೆಸಿಕೊಂಡು ಬಂದರು. ಇಬ್ಬರ ರಾಜಕೀಯದಲ್ಲೂ(Politics) ಸಾಮ್ಯತೆಗಳಿವೆ. ಉದಾಸಿ ಅವರ ಒತ್ತಾಸೆಯಂತೆ ಕ್ಷೇತ್ರಕ್ಕೆ ಯಡಿಯೂರಪ್ಪ ಕೊಡುಗೆ ನೀಡಿದರು. ಉದಾಸಿ ಏನು ಕೇಳಿದರೂ ಕ್ಷಣ ಮಾತ್ರದಲ್ಲಿ ಅದಕ್ಕೆ ಮಂಜೂರಾತಿ ಕೊಟ್ಟಿದ್ದಾರೆ.

ವಿಧಾನಸಭೆಯಲ್ಲಿ ಸ್ಥಾನ ಇದ್ದಾಗ ಸುತ್ತಮುತ್ತ ಜನರು ಇರುವುದು ಸಹಜ. ಆದರೆ, ಸ್ಥಾನ ಇರುತ್ತೋ ಬಿಡುತ್ತೋ ನಿಮ್ಮ ಹೃದಯದಲ್ಲಿ ಯಡಿಯೂರಪ್ಪ ಸ್ಥಾನ ಪಡೆದಿದ್ದಾರೆ. ಇಲ್ಲಿಯ ನೀರಾವರಿ ಯೋಜನೆಗಳಿಗೆ(Irrigation Projects) ಮಂಜೂರಾತಿ ನೀಡಿದ್ದು ಯಡಿಯೂರಪ್ಪ ಅವರು. ಬಾಳಂಬೀಡ ಏತ ನೀರಾವರಿ ಯೋಜನೆಯಡಿ 180 ಕೆರೆ ತುಂಬಿಸಲು ಮಂಜೂರಾತಿ ನೀಡಿದ್ದಾರೆ. ಹಿರೇಕಾಂಶಿ ಏತ ನೀರಾವರಿ ಯೋಜನೆಗೂ ಮಂಜೂರಾತಿ ನೀಡಿದ್ದಾರೆ. ಹೋರಾಟದ ಮೂಲಕ ಬಂದ ರಾಜಕಾರಣ ರಾಜ್ಯದಲ್ಲಿ ಗಟ್ಟಿಯಾಗಿ ನಿಂತಿರುವುದಕ್ಕೆ ಯಡಿಯೂರಪ್ಪ ಕಾರಣ. ರೈತರ ಹಿತ ರಕ್ಷಣೆ ಮಾಡುವ ವಿಚಾರದಲ್ಲಿ ಅವರು ಎಂದೂ ರಾಜಿ ಆಗಲಿಲ್ಲ. ವಿರೋಧ ಪಕ್ಷದಲ್ಲಿದಾಗಲೂ ಅಷ್ಟೇ, ಬೇರೆ ಪಕ್ಷದೊಂದಿಗೆ ಸರ್ಕಾರ(Government) ಮಾಡಿದಾಗಲೂ ಅಷ್ಟೇ, ಅವರೇ ಸಿಎಂ ಆಗಿದ್ದಾಗಲೂ ರೈತರ ವಿಚಾರದಲ್ಲಿ ರಾಜಿಯಾಗಲಿಲ್ಲ ಎಂದು ಯಡಿಯೂರಪ್ಪನವರ ಕೊಡುಗೆಯನ್ನು ಕೊಂಡಾಡಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *