ಸರ್ಕಾರವೇ ಉಪಚುನಾವಣೆಯಲ್ಲಿ ಮುಳುಗಿ ಆಡಳಿತವನ್ನು ನಿರ್ಲಕ್ಷ್ಯಿಸಿರುವುದು ದುರದೃಷ್ಟಕರ! ಡಿಕೆಶಿ
ಹೈಲೈಟ್ಸ್:
- ಸರ್ಕಾರವೇ ಉಪಚುನಾವಣೆಯಲ್ಲಿ ಮುಳುಗಿ ಆಡಳಿತವನ್ನು ನಿರ್ಲಕ್ಷ್ಯಿಸಿರುವುದು ದುರದೃಷ್ಟಕರ!
- ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಸಮರ್ಥಿಸಿಕೊಳ್ಳುವವರಿಗೇನೂ ಕಡಿಮೆಯಿಲ್ಲ
- ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ
ಬೆಂಗಳೂರು: ಸರ್ಕಾರವೇ ಉಪಚುನಾವಣೆಯಲ್ಲಿ ಮುಳುಗಿ ಆಡಳಿತವನ್ನು ನಿರ್ಲಕ್ಷ್ಯಿಸಿರುವುದು ದುರದೃಷ್ಟಕರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಇಡೀ ಸರ್ಕಾರವೇ ಉಪಚುನಾವಣೆಯಲ್ಲಿ ಮುಳುಗಿ ಆಡಳಿತವನ್ನು ನಿರ್ಲಕ್ಷ್ಯಿಸಿರುವುದು ದುರದೃಷ್ಟಕರ. ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಸಮರ್ಥಿಸಿಕೊಳ್ಳುವವರಿಗೇನೂ ಕಡಿಮೆಯಿಲ್ಲ ಬಿಜೆಪಿಯಲ್ಲಿ. ಕಣ್ಬಿಟ್ಟು ನೋಡಿ, ಯಾವುದು ಸತ್ಯ, ಯಾವುದು ಮಿಥ್ಯ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯ ಕಾವು ತೀವ್ರಗೊಂಡಿದೆ. ಅಕ್ಟೋಬರ್ 30 ರಂದು ಉಪಚುನಾವಣೆ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದೆ. ಅದ್ರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಾನಗಲ್ ಪ್ರತಿಷ್ಠೆಯ ಕ್ಷೇತ್ರವಾಗಿದ್ದು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಎರಡು ಕ್ಷೇತ್ರಗಳಲ್ಲಿ ಬಹುತೇಕ ಸಚಿವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ, ಬದಲಾಗಿ ಆಡಳಿತ ಯಂತ್ರವೇ ಉಪಚುನಾವಣೆಯಲ್ಲಿ ಬ್ಯುಸಿಯಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಾ ಬರುತ್ತಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ಹಲವು ವಿಚಾರಗಳನ್ನು ಉದಾಹರಣೆಯಾಗಿ ನೀಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಮುಕ್ತ ಭಾರತದತ್ತ ಹೆಜ್ಜೆಯೇ ? ಬಿಜೆಪಿ ಟೀಕೆ
ಇನ್ನು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಕೂಡಾ ಟೀಕೆ ಮಾಡಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಸಂಘರ್ಷದ ಬಗ್ಗೆ ಎಐಸಿಸಿಯ ಸ್ವಘೋಷಿತ ಅಧ್ಯಕ್ಷೆ ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಪಂಚಭಾಗವಾಗಿ ಒಡೆದು ಹೋಗುವುದೇ ಎಂಬ ಆತಂಕ ನಕಲಿ ಗಾಂಧಿ ಕುಟುಂಬವನ್ನು ಕಾಡುತ್ತಿದೆ. ಇದು ಕಾಂಗ್ರೆಸ್ ಮುಕ್ತ ಭಾರತದತ್ತ ಮತ್ತೊಂದು ಹೆಜ್ಜೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.