ರಸ್ತೆ ಗುಂಡಿ ಮುಚ್ಚಿಸಿ ಸಿಎಂ ತಾತ, ಪಾಕೆಟ್ ಮನಿ ಕೊಡ್ತೀನಿ: ಬೊಮ್ಮಾಯಿಗೆ ಬಾಲಕಿಯ ಮನಮುಟ್ಟುವ ಮನವಿ

ಹೈಲೈಟ್ಸ್‌:

  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ 7 ವರ್ಷದ ಬಾಲಕಿ ಮನವಿ
  • ಗುಂಡಿಗಳಿಂದಾಗಿ ಜನ ಸತ್ತರೆ ಅವರ ಕುಟುಂಬದವರು ಹೇಗೆ ಬದುಕೋದು
  • ಚಾಕ್ಲೇಟ್ ಕೊಳ್ಳಲು ಅಪ್ಪ ಅಮ್ಮ ಕೊಟ್ಟ ಹಣ ಕೊಡ್ತೀನಿ, ಗುಂಡಿ ಮುಚ್ಚಿಸಿ
  • ನನ್ನ ಅಪ್ಪ ಮನೆಗೆ ಬರುವವರೆಗೂ ಭಯದಿಂದ ಕಾಯುತ್ತಾ ಇರುತ್ತೇನೆ

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾಯ್ತು. ಈಗ ಪುಟಾಣಿ ಬಾಲಕಿಯೊಬ್ಬಳು ರಸ್ತೆ ಗುಂಡಿ ಅವಾಂತರಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುದ್ದು ಮುದ್ದಾಗಿ ಪ್ರಾರ್ಥನೆ ಮಾಡಿದ್ದಾಳೆ.

‘ಸಾಲ ಮಾಡುತ್ತೀರೋ ಅಥವಾ ಕಳ್ಳತನ ಮಾಡುತ್ತೀರೋ ಗೊತ್ತಿಲ್ಲ. ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಬಸವರಾಜ ಬೊಮ್ಮಾಯಿ ಅವರಿಗೆ ವಿಡಿಯೋ ಮನವಿ ಮಾಡಿರುವ ಏಳು ವರ್ಷದ, ಎರಡನೇ ತರಗತಿ ಬಾಲಕಿ ರಸ್ತೆ ಗುಂಡಿಗಳನ್ನು ಮುಚ್ಚಲು ಬೇಕಾದರೆ ತನ್ನ ಪಾಕೆಟ್ ಮನಿ ನೀಡುವುದಾಗಿ ಹೇಳಿದ್ದಾಳೆ!

ಎಲ್. ಧವನಿ ಎಂಬ ಪುಟ್ಟ ಬಾಲಕಿಯ 1.13 ನಿಮಿಷದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಜನಸಾಮಾನ್ಯರು ಹಾಗೂ ಸಂಘಸಂಸ್ಥೆಗಳು ಈ ಪುಟಾಣಿಯ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿವೆ.

ರಸ್ತೆಗಳಲ್ಲಿ ಗುಂಡಿಗಳ ಕಾರಣದಿಂದಾಗಿ ಬೈಕ್‌ನಿಂದ ಅನೇಕ ಬಾರಿ ಕೆಳಗೆ ಬಿದ್ದಿದ್ದಾಗಿ ಧವನಿ, ತನ್ನ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಗ್ರಂಥಾಲಯದಲ್ಲಿ ಸುದ್ದಿ ಪತ್ರಿಕೆಗಳನ್ನು ಓದುವಾಗ, ಅಂತಹ ರಸ್ತೆ ಗುಂಡಿಗಳ ಕಾರಣದಿಂದಾಗಿ ಅನೇಕರು ಜೀವ ಕಳೆದುಕೊಂಡಿರುವ ಬಗ್ಗೆಯೂ ಗೊತ್ತಾಗಿದೆ. ಹಾಗಿದ್ದರೂ ಸರ್ಕಾರ ಈ ಸಮಸ್ಯೆಗೆ ಸ್ಪಂದಿಸದೆ ಇದ್ದರೆ ಏನು ಮಾಡುವುದು? ಒಂದಾದ ಮೇಲೆ ಒಂದರಂತೆ ತಾನೇ ರಸ್ತೆ ಗುಂಡಿಗಳನ್ನು ಮುಚ್ಚುವುದನ್ನು ಆರಂಭಿಸುವುದಾಗಿ ಧವನಿ ಹೇಳಿದ್ದಾಳೆ.

ಬೆಂಗಳೂರಿನ ಹೆಗ್ಗನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ಈ ಪೋರಿ, ಮಾಡಿರುವ ಭಾವುಕ ಕೋರಿಕೆ ಮನಮುಟ್ಟುವಂತಿದೆ. ‘ಸಿಎಂ ತಾತ.. ನಮ್ಮ ಬೆಂಗಳೂರಲ್ಲಿ ರಸ್ತೆಗಳೇ ಸರಿಯಿಲ್ಲ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದ ಸುಮಾರು ಜನ ಸಾಯ್ತಿದ್ದಾರೆ. ಅವರು ಸತ್ತರೆ ಅವ್ರ ಕುಟುಂಬದವರು ಹೇಗೆ ಜೀವ ನಡೆಸುತ್ತಾರೆ? ನೀವೇ ಹೇಳಿ ತಾತ’ ಎಂದು ಧವನಿ ಕೇಳಿದ್ದಾಳೆ.

‘ನಮ್ಮ ಅಪ್ಪ ಯಾವಾಗ ಬರ್ತಾರೋ, ಹೇಗೆ ಬರ್ತಾರೋ ಎಂದು ನನ್ನಂತ ಮಕ್ಕಳು ಕಾಯ್ತಾ ಇರ್ತಾರೆ ಅಲ್ವಾ. ನಾನು ಕೂಡ ನಮ್ಮ ಅಪ್ಪ ಯಾವಾಗೆ ಬರ್ತಾರೋ ಅಂತ ಭಯದಿಂದ ಕಾಯ್ತಾ ಇರ್ತೇನೆ. ನಮ್ ಅಪ್ಪ- ಅಮ್ಮ ನಂಗೆ ಚಾಕ್ಲೇಟ್‌ಗೆ ಅಂತ ಕೊಟ್ಟಿರೋ ದುಡ್ಡನ್ನು ಕೊಡ್ತೇನೆ. ಪ್ಲೀಸ್ ಗುಂಡಿ ಮುಚ್ಚಿಸಿ ಸಿಎಂ ತಾತ’ ಎಂದು ಮನವಿ ಮಾಡಿದ್ದಾಳೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *