ಅ.29 ವಿಶ್ವ ಪಾರ್ಶ್ವವಾಯು ಜಾಗೃತಿ ದಿನ; ರಾಜ್ಯದಲ್ಲಿ ವರ್ಷಕ್ಕೆ 5 ಲಕ್ಷ ಮಂದಿಗೆ ಸ್ಟ್ರೋಕ್!
ಹೈಲೈಟ್ಸ್:
- ರಾಜ್ಯದಲ್ಲಿ ಪಾರ್ಶ್ವವಾಯುವಿಗೆ ಒಳಗಾಗುವವರ ಸಂಖ್ಯೆ ಏರಿಕೆ, ಪ್ರತಿ ವರ್ಷ ಕನಿಷ್ಠ 5 ಲಕ್ಷ ಮಂದಿಗೆ ಸಮಸ್ಯೆ
- ರಾಜಧಾನಿ ಬೆಂಗಳೂರೊಂದರಲ್ಲೇ ದಿನಕ್ಕೆ ಕನಿಷ್ಠ 25 ಮಂದಿಗೆ ಸ್ಟ್ರೋಕ್ ತಗುಲುತ್ತಿದೆ
- ಸ್ಟ್ರೋಕ್ ಸಂಭವಿಸಿ ಮೊದಲ 24 ಗಂಟೆಯೊಳಗೆ ಚಿಕಿತ್ಸೆ ನೀಡಬೇಕಾಗುತ್ತದೆ
ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಪಾರ್ಶ್ವವಾಯುವಿಗೆ ಒಳಗಾಗುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಪ್ರತಿ ವರ್ಷ ಕನಿಷ್ಠ 5 ಲಕ್ಷ ಮಂದಿ ಈ ಸಮಸ್ಯೆಗೊಳಗಾಗುತ್ತಿದ್ದಾರೆ. ರಾಜಧಾನಿ ಬೆಂಗಳೂರೊಂದರಲ್ಲೇ ದಿನಕ್ಕೆ ಕನಿಷ್ಠ 25 ಮಂದಿಗೆ ಸ್ಟ್ರೋಕ್ ತಗುಲುತ್ತಿದೆ. ಹಲವು ಸಮಸ್ಯೆಗಳ ಜತೆ ಪ್ರಾಣಕ್ಕೂ ಕಂಟಕ ತರುವ ಈ ಸಮಸ್ಯೆಗೆ ಸರಕಾರದಿಂದ ಉಚಿತ ಔಷಧ ವ್ಯವಸ್ಥೆ ಸಿಗಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಸ್ಟ್ರೋಕ್ ಗೆ ಒಳಗಾದ ತಕ್ಷಣ ಹೆಚ್ಚಿನವರು ಸ್ಥಳೀಯ ನಾಟಿ ಔಷಧದ ಮೊರೆ ಹೋಗುತ್ತಾರೆ. ವೈದ್ಯಕೀಯವಾಗಿ ಈ ರೋಗಕ್ಕೆ ಮೆಕ್ಯಾನಿಕಲ್ ತ್ರಾಂಬೆಕ್ಟಮಿ ಚಿಕಿತ್ಸೆ ಮಾಡಲಾಗುತ್ತಿದ್ದು, ಟಿಪಿಎ(ಟಿಶ್ಯೂ ಪ್ಲಾಸ್ಮಿನೋಜಿನ್ ಆಕ್ಟಿವೇಟರ್) ಔಷಧ ಬೇಕಾಗುತ್ತದೆ. ಈ ಔಷಧಕ್ಕೆ ಪ್ರಸ್ತುತ ಮಾರುಕಟ್ಟೆಯಲ್ಲಿ 40 ಸಾವಿರ ರೂ. ಬೆಲೆಯಿದ್ದು, ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ದುಬಾರಿಯಾಗಿದೆ.
ರಾಜ್ಯದಲ್ಲಿ ನಿಮ್ಹಾನ್ ಹೊರತುಪಡಿಸಿ, ಯಾವುದೇ ಸರಕಾರಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಲಭ್ಯತೆಯಿಲ್ಲದ ಜನರಿಗೆ ಸಮಸ್ಯೆಯುಂಟಾಗುತ್ತಿದೆ. ನಿಮ್ಹಾನ್ಸ್‌ನಲ್ಲೂ ಎಲ್ಲ ರೋಗಿಗಳಿಗೆ ಈ ಚಿಕಿತ್ಸೆ ಸಿಗುತ್ತಿಲ್ಲ. ಕೇವಲ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಚಿಕಿತ್ಸೆ, ಔಷಧ ಉಚಿತವಾಗಿ ಸಿಗುತ್ತಿದ್ದು, ಉಳಿದವರಿಗೂ ಚಿಕಿತ್ಸೆ ವಿಸ್ತರಣೆಗೊಂಡರೆ ಅನುಕೂಲವಾಗಲಿದೆ.
ಹೃದಯಾಘಾತ ಬಳಿಕದ ಅಪಾಯಕಾರಿ ಸಮಸ್ಯೆ
ಅಮೆರಿಕನ್ ಸ್ಟ್ರೋಕ್ ಅಸೋಸಿಯೇಶನ್ ಅಧ್ಯಯನದ ಪ್ರಕಾರ ಸ್ಟ್ರೋಕ್ ಗೆ ಒಳಗಾದ ವ್ಯಕ್ತಿಯ ಮಿದುಳಿನಲ್ಲಿ ಪ್ರತಿ ನಿಮಿಷಕ್ಕೆ 1.9 ಮಿಲಿಯನ್ ನರಗಳು ಸಾಯಲಾರಂಭಿಸುತ್ತವೆ. ಶೀಘ್ರವಾಗಿ ವ್ಯಕ್ತಿ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆ ಜೀವತೆಗೆಯುವ ರೋಗಗಳ ಪಟ್ಟಿಯಲ್ಲಿ ಹೃದಯಾಘಾತದ ಬಳಿಕ ಇದಕ್ಕೇ ಸ್ಥಾನ. 2013ರಿಂದ ಸ್ಟ್ರೋಕ್ ಚಿಕಿತ್ಸೆಯಲ್ಲಿ ಅನೇಕ ಸಂಶೋಧನೆಗಳಾಗಿವೆ.
ದೊಡ್ಡ ರಕ್ತನಾಳಗಳು ಹೆಪ್ಪುಗಟ್ಟಿದಾಗ ಕ್ಲಾಟ್ ಬಸ್ಟರ್ ಔಷಧ ಪರಿಣಾಮಕಾರಿಯಲ್ಲದ ವೇಳೆ ಮೆಕ್ಯಾನಿಕಲ್ ತ್ರಾಂಬೆಕ್ಟಮಿ ಚಿಕಿತ್ಸೆ ನೀಡಬೇಕಾಗುತ್ತದೆ. ಮಿದುಳಿನ ರಕ್ತನಾಳಗಳಿಗೆ ಹಾನಿಯುಂಟಾದಾಗ ಅಂಜಿಯೋಪ್ಲಾಸ್ಟಿ ಚಿಕಿತ್ಸೆ ರೋಗಿಯನ್ನು ಸಾವಿನಿಂದ ಪಾರುಮಾಡಬಲ್ಲದು. ವಿಶೇಷವಾಗಿ ಸ್ಟ್ರೋಕ್ ಸಂಭವಿಸಿ ಮೊದಲ 24 ಗಂಟೆಯೊಳಗೆ ಈ ಚಿಕಿತ್ಸೆ ನೀಡಬೇಕಾಗುತ್ತದೆ. ಹೃದಯದ ಆಂಜಿಯೋಪ್ಲಾಸ್ಟಿ ರೀತಿಯಲ್ಲಿ ತೊಡೆಯ ರಕ್ತನಾಳದ ಮೂಲಕ ಕ್ಯಾಥೀಟರ್‌ಅನ್ನು ತೂರಿಸಿ ರಕ್ತ ಹೆಪ್ಪುಗಟ್ಟಿರುವ ಜಾಗಕ್ಕೆ ತಲುಪಿ ಹಲವಾರು ವಿಶೇಷ ಉಪಕರಣಗಳ ಸಹಾಯದಿಂದ ಕ್ಲಾಟ್‌ಅನ್ನು ಛಿದ್ರಗೊಳಿಸಿ ರಕ್ತಸಂಚಾರವನ್ನು ಸುಗಮ ಗೊಳಿಸಬಹುದು.
ಇತ್ತೀಚಿನ ಅಂತಾರಾಷ್ಟ್ರೀಯ ಅಧ್ಯಯನಗಳ ಪ್ರಕಾರ ಈ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಹಾಗೂ ಹೆಚ್ಚು ಸುರಕ್ಷಿತ ಎಂದು ದೃಢಪಟ್ಟಿದೆ. ಈ ಚಿಕಿತ್ಸೆ ನೀಡುವ ಕೇಂದ್ರಗಳು, ನುರಿತ ತಜ್ಞರ ಸಂಖ್ಯೆ ರಾಜ್ಯದಲ್ಲಿ ತೀರಾ ವಿರಳವಿದ್ದು ರಾಜ್ಯ ಸರಕಾರ ಗಮನಿಸಬೇಕಿದೆ ಎಂದು ರಾಜ್ಯ ಸ್ಟ್ರೋಕ್ ಫೌಂಡೇಶನ್ ಉಪಾಧ್ಯಕ್ಷ ಡಾ.ವಿಕ್ರಮ್ ಹುಡೇದ್ ತಿಳಿಸಿದ್ದಾರೆ.
ಸ್ಟ್ರೋಕ್ ಗೆ ಕಾರಣ
- ಅನಿಯಂತ್ರಿತ ರಕ್ತದೊತ್ತಡ
- ಅನಿಯಂತ್ರಿತ ಮಧುಮೇಹ
- ಹೃದಯಾಘಾತ
- ಅಧಿಕ ಕೊಬ್ಬಿನಾಂಶ
- ತೀವ್ರ ಪ್ರಮಾಣದ ಧೂಮಪಾನ
‘ಬಿಫಾಸ್ಟ್’ ನೆನಪಿಡಿ
- ಬಿ-ಬ್ಯಾಲೆನ್ಸ್, ದೇಹದ ಸಮತೋಲನ ತಪ್ಪುವುದು.
- ಇ-ಐ, ದೃಷ್ಟಿದೋಷ ಕಂಡುಬರುತ್ತದೆ.
- ಎಫ್-ಫೇಸ್, ಮುಖದೊಂದು ಭಾಗ ವಕ್ರವಾಗುತ್ತದೆ.
- ಎ-ಆರ್ಮ್ಸ್, ಕೈ,ಕಾಲು, ಸ್ನಾಯು ಸ್ವಾಧೀನ ತಪ್ಪುವುದು.
- ಎಸ್-ಸ್ಪೀಚ್, ತೊದಲು ಮಾತು
- ಟಿ-ಟೈಂ, ಸ್ಟ್ರೋಕ್ ಗೆ ಒಳಗಾದ 4.30 ಗಂಟೆಗಳೊಳಗೆ ಚಿಕಿತ್ಸೆ
ಸರಕಾರ ಕೈಗೊಳ್ಳಬೇಕಿರುವ ಕ್ರಮಗಳು
- ಜನರಲ್ಲಿ ಜಾಗೃತಿ, ಚಿಕಿತ್ಸೆ ಪೂರಕ ಔಷಧಗಳ ಉಚಿತ ವ್ಯವಸ್ಥೆ
- 4 ಗಂಟೆ 30 ನಿಮಿಷದೊಳಗೆ ರೋಗಿಯನ್ನು ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ
- ತಮಿಳುನಾಡಿನ ಮಾದರಿಯಲ್ಲಿ ರಾಜ್ಯದಲ್ಲೂ ತ್ರಾಂಬೆಕ್ಟಮಿ ಉಚಿತ ಚಿಕಿತ್ಸೆ
- ರಾಜ್ಯಮಟ್ಟದಲ್ಲಿ ಸಹಾಯವಾಣಿ, ಟೆಲಿ ಕಾಲ್ ಮೂಲಕ ಸಲಹೆಗೆ ವ್ಯವಸ್ಥೆ.
- ತಾಲೂಕು, ಜಿಲ್ಲಾಮಟ್ಟದಲ್ಲಿ ಕ್ಲಿನಿಕ್ ಆರಂಭ
ರಾಜ್ಯದಲ್ಲಿ ಉತ್ತರಕರ್ನಾಟಕ, ಕರಾವಳಿ ಜನರಿಗೆ ಅನುಕೂಲವಾಗುವಂತೆ ಸರಕಾರ 4 ವಿಭಾಗವಾರು ಸ್ಟ್ರೋಕ್ ಗೆ ಉಚಿತ ಚಿಕಿತ್ಸೆ ಒದಗಿಸುವ ಆಸ್ಪತ್ರೆಗಳನ್ನು ವಿಸ್ತರಿಸಬೇಕಿದೆ. ಈ ಬಗ್ಗೆ ವೈದ್ಯಕೀಯ ಸಚಿವರಿಗೆ ಮನವಿ ಮಾಡಲಾಗಿದ್ದು, ಉಚಿತ ಚಿಕಿತ್ಸೆ ನಿರೀಕ್ಷೆಯಲ್ಲಿದ್ದೇವೆ.
ಡಾ.ಸೂರ್ಯನಾರಾಯಣ ಶರ್ಮ ಪಿ.ಎಂ., ಕಾರ್ಯದರ್ಶಿ, ಕರ್ನಾಟಕ ಸ್ಟ್ರೋಕ್ ಫೌಂಡೇಶನ್