Amazon: ಮೊದಲ ಇಂಟರ್ನೆಟ್ ಉಪಗ್ರಹಗಳನ್ನು 2022ರ ಅಂತ್ಯದೊಳಗೆ ಪ್ರಾರಂಭಿಸಲಿದೆ ಅಮೆಜಾನ್
ಅಮೆಜಾನ್ (Amazon) ಸಂಸ್ಥೆ ಅಂದ್ರೆ ನಮಗೆ ಸಾಮಾನ್ಯವಾಗಿ ಗೊತ್ತಿರೋದು ವಸ್ತುಗಳನ್ನು, ಬಟ್ಟೆಗಳನ್ನು, ಮೊಬೈಲ್ (Mobile), ಕಂಪ್ಯೂಟರ್ (Computer), ಟಿವಿ (TV), ಫ್ರಿಡ್ಜ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆನ್‌ಲೈನ್‌ನಲ್ಲಿ ಡೆಲಿವರಿ (Delivery) ಮಾಡುವುದು. ಆದರೆ, ಅಮೆಜಾನ್ ಇದಿಷ್ಟೇ ಅಲ್ಲ. ಇನ್ನೂ ಹೆಚ್ಚಿನ ಸೇವೆಗಳನ್ನು ನೀಡಲು ಸಜ್ಜಾಗುತ್ತಿದೆ. ಈಗ ಸ್ಯಾಟಲೈಟ್ ಇಂಟರ್ನೆಟ್ ಸೇವೆಗೂ ಜೆಫ್ ಬೆಜೋಸ್ (Jeff Bezos) ಒಡೆತನದ ಕಂಪನಿ ರೆಡಿಯಾಗುತ್ತಿದೆ. ಈ ಹಿನ್ನೆಲೆ ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಮೊದಲ ಪ್ರಾಜೆಕ್ಟ್ ಕೈಪರ್ (Project Kuiper)ಇಂಟರ್ನೆಟ್ ಉಪಗ್ರಹಗಳನ್ನು 2022ರ 4ನೇ ತ್ರೈಮಾಸಿಕದಲ್ಲಿ ಪ್ರಾರಂಭಿಸುವ ಗುರಿಯನ್ನು ಹೊಂದಿದೆ ಎಂದು ಅಮೆಜಾನ್ ಸಂಸ್ಥೆ ಪ್ರಕಟಿಸಿದೆ. ಪ್ರಾಜೆಕ್ಟ್ ಕೈಪರ್‌ನೊಂದಿಗೆ, ಕಡಿಮೆ ಭೂಮಿಯ ಕಕ್ಷೆಯಲ್ಲಿ 3,236 ಉಪಗ್ರಹಗಳ ನೆಟ್‌ವರ್ಕ್ ಅನ್ನು ನಿರ್ಮಿಸುವ ಗುರಿಯನ್ನು ಅಮೆಜಾನ್ ಹೊಂದಿದೆ.
ಕಂಪನಿಯು ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ [Federal Communications Commission (FCC)]ಗೆ ತನ್ನ ಮೊದಲ ಎರಡು ಮೂಲಮಾದರಿಯ ಉಪಗ್ರಹಗಳನ್ನು ಕೈಪರ್‌ಸ್ಯಾಟ್-1 (KuiperSat-1)ಮತ್ತು ಕೈಪರ್‌ಸ್ಯಾಟ್-2(KuiperSat-2)ಎಂದು ಕರೆಯಲು ಮತ್ತು ನಿರ್ವಹಿಸಲು ಮನವಿ ಸಲ್ಲಿಸಿದೆ. ಉಪಗ್ರಹಗಳು ತನ್ನ RS1 ರಾಕೆಟ್‌ನಲ್ಲಿ ABL ಸ್ಪೇಸ್‌ನೊಂದಿಗೆ ಉಡಾವಣೆಯಾಗುತ್ತವೆ ಎಂದು ಅಮೆಜಾನ್ ಹೇಳಿರುವ ಬಗ್ಗೆ CNBC ವರದಿ ಮಾಡಿದೆ.
“ಬಾಹ್ಯಾಕಾಶದಲ್ಲಿ ಉಪಗ್ರಹಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡಲು ನಾವು ಶೀಘ್ರದಲ್ಲೇ ಸಿದ್ಧರಾಗುತ್ತೇವೆ” ಎಂದು ಅಮೆಜಾನ್‌ನ ತಂತ್ರಜ್ಞಾನದ ಉಪಾಧ್ಯಕ್ಷ ರಾಜೀವ್ ಬದ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಆನ್-ಆರ್ಬಿಟ್ ಪರೀಕ್ಷೆಗೆ ಯಾವುದೇ ಪರ್ಯಾಯವಿಲ್ಲ, ಮತ್ತು ಅಂತಹ ಸವಾಲಿನ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಸಂಕೀರ್ಣತೆ ಮತ್ತು ಅಪಾಯ ನೀಡಿದರೆ ನಾವು ಬಹಳಷ್ಟು ಕಲಿಯಲು ನಿರೀಕ್ಷಿಸುತ್ತೇವೆ” ಎಂದೂ ಅವರು ಹೇಳಿದ್ದಾರೆ.
FCCಕಳೆದ ವರ್ಷ ಅಮೆಜಾನ್‌ನ ವ್ಯವಸ್ಥೆಯನ್ನು ಅಧಿಕೃತಗೊಳಿಸಿತ್ತು, ಇದು ಕೈಪರ್‌ನಲ್ಲಿ 10 ಶತಕೋಟಿ ಡಾಲರ್‌ಗಿಂತ ಹೆಚ್ಚು ಹೂಡಿಕೆ ಮಾಡಲು ಯೋಜಿಸಿದೆ ಎಂದು ಕಂಪನಿ ಹೇಳುತ್ತದೆ.
ಇನ್ನೊಂದೆಡೆ, ಅಮೆಜಾನ್ ಕಳೆದ ವಾರ ವೆರಿಝೋನ್ (Verizon)ಜೊತೆ ಪಾಲುದಾರಿಕೆ ಘೋಷಿಸಿದ್ದು, ಈ ಮೂಲಕ ಹೆಚ್ಚಿನ ವೇಗದ ಉಪಗ್ರಹ ಇಂಟರ್ನೆಟ್ ಕ್ಷೇತ್ರದಲ್ಲಿ ಟೆಲಿಕಾಂ ದೈತ್ಯದೊಂದಿಗೆ ಸಹಕರಿಸಲಿದೆ ಎಂದೂ ವರದಿ ಹೇಳಿದೆ.
ಇತ್ತೀಚಿನ ಪೀಳಿಗೆಯ ಬ್ರಾಡ್‌ಬ್ಯಾಂಡ್ ಉಪಗ್ರಹ ವ್ಯವಸ್ಥೆಗಳಲ್ಲಿ ಅತಿ ಹೆಚ್ಚು ಮುನ್ನಡೆಯಲ್ಲಿರುವ SpaceXನ ಸ್ಟಾರ್‌ಲಿಂಕ್ ನೆಟ್‌ವರ್ಕ್‌ಗೆ ಸ್ಪರ್ಧೆ ನೀಡಲು ಕೈಪರ್ ಟೋ-ಟು-ಟೋ ಸಿದ್ಧವಾಗಿದೆ ಎಂದು ವರದಿ ಹೇಳಿದೆ.
ಬ್ರಿಟಿಷ್-ಮಾಲೀಕತ್ವದ ಒನ್‌ವೆಬ್, ಬ್ಲ್ಯಾಕ್‌ರಾಕ್-ಬೆಂಬಲಿತ ಅಸ್ಟ್ರಾನಿಸ್, ಸ್ಯಾಟಲೈಟ್-ಟು-ಸ್ಮಾರ್ಟ್‌ಫೋನ್ ಪರಿಣಿತ ಎಎಸ್‌ಟಿ ಸ್ಪೇಸ್‌ಮೊಬೈಲ್, ಸ್ಟಾರ್ಟ್-ಅಪ್ ಓಮ್ನಿಸ್ಪೇಸ್‌ನೊಂದಿಗೆ ಲಾಕ್‌ಹೀಡ್ ಮಾರ್ಟಿನ್ ಪಾಲುದಾರಿಕೆ ಮತ್ತು ಕೆನಡಾದ ಉಪಗ್ರಹ ಆಪರೇಟರ್ ಟೆಲಿಸ್ಯಾಟ್‌ನ ಲೈಟ್‌ಸ್ಪೀಡ್ ಸೇರಿದಂತೆ ವಿವಿಧ ಇತರ ನೆಟ್‌ವರ್ಕ್‌ಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ.
ಅಮೆಜಾನ್‌ನಲ್ಲಿ ಪ್ರಾಜೆಕ್ಟ್ ಕೈಪರ್ ತಂಡವು ಸ್ಥಿರವಾಗಿ ಬೆಳೆದಿದ್ದು, ಇದು ಈಗ 750ಕ್ಕಿಂತ ಹೆಚ್ಚು ಜನರನ್ನು ಹೊಂದಿದೆ ಮತ್ತು ಮುಂದಿನ ವರ್ಷದಲ್ಲಿ ನೂರಾರು ಹೆಚ್ಚು ಜನರನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ. ಅಮೆಜಾನ್ ಅಮೆರಿಕದ ವಾಷಿಂಗ್ಟನ್‌ನ ರೆಡ್‌ಮಂಡ್‌ನಲ್ಲಿ ಉಪಗ್ರಹಗಳನ್ನು ಪರೀಕ್ಷಿಸಲು ಮತ್ತು ತಯಾರಿಸಲು 219,000 ಚದರ ಅಡಿ ಸೌಲಭ್ಯ ನಿರ್ಮಿಸಿದೆ ಮತ್ತು ಇನ್ನೂ 20,000 ಚದರ ಅಡಿ ಸೌಲಭ್ಯವನ್ನು ಸೇರಿಸಲು ಪ್ಲ್ಯಾನ್ ಮಾಡಿದೆ.