ಅಭಿಮಾನಿಗಳ ಪ್ರೀತಿಯ ‘ಅಪ್ಪು’ಅಗಲಿ ಇಂದಿಗೆ 12 ದಿನ: ದೊಡ್ಮನೆ ಕುಟುಂಬದಿಂದ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ, ಖಾಕಿ ಪಹರೆ

ಬೆಂಗಳೂರು: ಅಭಿಮಾನಿಗಳ ಪ್ರೀತಿಯ ಅಪ್ಪು, ದೊಡ್ಮನೆಯ ನಂದಾದೀಪ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ನಿಧನರಾಗಿ ಇಂದು ಮಂಗಳವಾರಕ್ಕೆ 12 ದಿನ. ಅವರ ಅಗಲಿಕೆಗೆ ಇಡೀ ಕರುನಾಡು ಶೋಕಪಟ್ಟಿದೆ. ಅವರ ಅಂತಿಮ ದರ್ಶನಕ್ಕೆ ಲಕ್ಷಗಟ್ಟಲೆ ಜನ ಕಂಠೀರವ ಸ್ಟೇಡಿಯಂಗೆ ಆಗಮಿಸಿರುವುದು ಮಾತ್ರವಲ್ಲದೆ ಅವರ ಸಮಾಧಿ ಕಂಠೀರವ ಸ್ಟುಡಿಯೊಗೆ ಸಹ ಪ್ರತಿನಿತ್ಯ ಸಾವಿರಗಟ್ಟಲೆ ಜನರು ಬರುತ್ತಿದ್ದಾರೆ.

ಅಭಿಮಾನಿಗಳ ಪ್ರೀತಿಗೆ ಬೆಲೆ ನೀಡಿರುವ ದೊಡ್ಮನೆ ಕುಟುಂಬ ಬೆಂಗಳೂರಿನ ಅಪ್ಪು ನಿವಾಸ ಸದಾಶಿವನಗರ ಸಮೀಪವಿರುವ ಅರಮನೆ ಮೈದಾನದ ತ್ರಿಪುರವಾಸಿನಿ ಗೇಟ್ ಒಳಗೆ ಇಂದು ಪುಣ್ಯಸ್ಮರಣೆ ಪ್ರಯುಕ್ತ ಅಭಿಮಾನಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಿದೆ.

 

ಅಡುಗೆಗಾಗಿ ಅರಮನೆ ಮೈದಾನದಲ್ಲಿ 1 ಸಾವಿರ ಕೆಜಿ ಸೋನಾ ಮಸೂರಿ ಅಕ್ಕಿ, 750 ಲೀಟರ್ ಎಣ್ಣೆ, ಕೆಜಿಗಟ್ಟಲೆ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಪುದೀನಾ, ಕೊತ್ತಂಬರಿ ಸೊಪ್ಪು ಕಟ್ಟು, ರಾಶಿ ರಾಶಿ ದಿನಸಿಗಳನ್ನು ರಾಜ್ ಕುಟುಂಬ ಅರಮನೆ ಮೈದಾನಕ್ಕೆ ಪೂರೈಸಿದೆ. ರಾಶಿ ರಾಶಿ ಚಿಕನ್, ಮೊಟ್ಟೆ, ತರಕಾರಿಗಳು ಬಂದಿವೆ.

ಅರಮನೆ ಮೈದಾನದಲ್ಲಿ 800ಕ್ಕೂ ಹೆಚ್ಚು ನುರಿತ ಬಾಣಸಿಗರಿಂದ ಅಭಿಮಾನಿಗಳಿಗಾಗಿ ತರಹೇವಾರಿ ತಿನಿಸುಗಳು ಸಿದ್ದವಾಗುತ್ತಿವೆ. ಸಸ್ಯಾಹಾರಿಗಳಿಗೆ ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಭೋಜನ ವ್ಯವಸ್ಥೆಯಿದೆ. ಅಭಿಮಾನಿಗಳಿಗೆ ಬಾಳೆ ಎಲೆಯಲ್ಲಿ ದೊಡ್ಮನೆ ಕುಟುಂಬ ಊಟ ಹಾಕುತ್ತಿರುವುದು ವಿಶೇಷ. ಮಧ್ಯರಾತ್ರಿಯಿಂದಲೇ ಭೋಜನಕ್ಕೆ ಅಡುಗೆ ಆರಂಭವಾಗಿದ್ದು 10 ಗಂಟೆಯೊಳಗೆ ಅಡುಗೆ ತಯಾರಿ ಮಾಡಿಟ್ಟು 11 ಗಂಟೆಯ ಬಳಿಕ ಅರಮನೆಗೆ ಮೈದಾನಕ್ಕೆ ಬರುವ ಅಭಿಮಾನಿಗಳು, ಗಣ್ಯರಿಗೆ ಊಟ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.

100%

25ರಿಂದ 50 ಸಾವಿರದಷ್ಟು ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, 2 ಗೇಟ್ ಗಳಲ್ಲಿ 5 ಸಾವಿರ ಕುರ್ಚಿ ಮತ್ತು ಟೇಬಲ್ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನಷ್ಟು ಜನರು ಆಗಮಿಸಿದರೆ ಪ್ರತ್ಯೇಕ 8 ಕೌಂಟರ್ ತೆರೆಯಲು ನಿರ್ಧಾರ ಮಾಡಲಾಗಿದೆ. ಅನ್ನಸಂತರ್ಪಣೆಗೆ ಆಗಮಿಸುವ ಗಣ್ಯರು ಮತ್ತು ಅಭಿಮಾನಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ.

 

ಇನ್ನು ಇಂದಿನ ಅನ್ನಸಂತರ್ಪಣೆ ಕಾರ್ಯಕ್ರಮದ ಸಮಯದಲ್ಲಿ ಪ್ಯಾಲೇಸ್ ಗ್ರೌಂಡ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗುತ್ತಿದೆ. ಅದರ ಜೊತೆಗೆ ಮಧ್ಯರಾತ್ರಿಯಿಂದ ಸದಾಶಿವನಗರದ ಪುನೀತ್ ನಿವಾಸಕ್ಕೆ ಕೂಡ ಭದ್ರತೆ ಒದಗಿಸಲಾಗಿದೆ.

ಊಟದ ಮೆನುವಿನಲ್ಲಿ ಏನು ವಿಶೇಷತೆ?: ಸಂಪೂರ್ಣವಾಗಿ ರಾಜ್ ಕುಮಾರ್ ಕುಟುಂಬದ ಸೂಚನೆ ನಿರ್ದೇಶನದ ಮೇರೆಗೆ ಬಾಣಸಿಗರು ಇಂದಿನ ಊಟಕ್ಕೆ ಖಾದ್ಯಗಳನ್ನು ತಯಾರಿಸಿದ್ದು ಅದರಲ್ಲಿ ಪುನೀತ್ ರಾಜ್ ಕುಮಾರ್(Puneet Rajkumar) ಅವರು ಇಷ್ಟಪಟ್ಟು ಸೇವಿಸುತ್ತಿದ್ದ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳು ಕೂಡ ಸೇರಿವೆ.

ಸಸ್ಯಾಹಾರಿ ಅಡುಗೆಯಲ್ಲಿ ಆಲೂಗಡ್ಡೆ ಕಬಾಬ್, ಬೇಬಿ ಕಾರ್ನ್, ಲಾಲಿಪಪ್, ಕುರ್ಮ, ಅನ್ನ-ರಸಂ, ಅಕ್ಕಿ ಪಾಯಸ, ಮಸಾಲೆ ವಡೆಗಳು ಇದ್ದರೆ, ಸೌದೆ ಒಲೆಯಲ್ಲಿ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಬಾಣಸಿಗರು ಅರಮನೆ ಮೈದಾನದಲ್ಲಿ ತಯಾರಿಸುತ್ತಿದ್ದಾರೆ.

ಇನ್ನು ನಾನ್ ವೆಜ್ ಪ್ರಿಯರಿಗೆ ಕೋಳಿ ಮೊಟ್ಟೆ, ಚಿಕನ್ ಕಬಾಬ್, ಚಿಕನ್ ಚಾಪ್ಸ್, 1 ಸಾವಿರ ಕೆಜಿಯ ಘೀ ರೈಸ್, ಅನ್ನ -ರಸಂಗಳು ಇರುತ್ತವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *