ಭೂಗತ ನಂಟಿನ ವ್ಯಕ್ತಿಗಳ ಜತೆ ನವಾಬ್‌ ಡೀಲ್‌: ಫಡ್ನವೀಸ್‌

* ದಾವೂದ್‌ ಇಬ್ರಾಹಿಂ ಆಪ್ತರ ಜಮೀನು ಖರೀದಿಸಿದ ಮಲಿಕ್‌

* ಭೂಗತ ನಂಟಿನ ವ್ಯಕ್ತಿಗಳ ಜತೆ ನವಾಬ್‌ ಡೀಲ್‌: ಫಡ್ನವೀಸ್‌

* ಇಂದು ಫಡ್ನವೀಸ್‌ ವಿರುದ್ಧ ಜಲಜನಕ ಬಾಂಬ್‌: ಮಲಿಕ್‌

ಮುಂಬೈ(ನ.10): ನಟ ಶಾರುಖ್‌ ಪುತ್ರನನ್ನು ಬಂಧಿಸಿದ್ದ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ಹಲವು ಆರೋಪ ಮಾಡಿದ್ದ ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಹಾಗೂ ಅವರ ಕುಟುಂಬ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜೊತೆ ನಂಟಿರುವ ವ್ಯಕ್ತಿಗಳಿಂದ ಭೂಮಿ ಖರೀದಿಸಿದೆ ಎಂದು ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್‌ ‘ಬಾಂಬ್‌’ ಸಿಡಿಸಿದ್ದಾರೆ.

ಮಾದಕ ವಸ್ತು ಕಳ್ಳ ಜಾಗಣೆ ಸಾಲದ ವ್ಯಕ್ತಿಗಳ ಜತೆ ತಮಗೆ ಹಾಗೂ ತಮ್ಮ ಪತ್ನಿಗೆ ನಂಟು ಇದೆ ಎಂದು ಆರೋಪಿಸಿದ್ದ ಮಲಿಕ್‌ ಅವರಿಗೆ ಈ ಮೂಲಕ ಫಡ್ನವೀಸ್‌ ತಿರುಗೇಟು ನೀಡಿದ್ದಾರೆ.

‘1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಸರ್ದಾರ್‌ ಖಾನ್‌ ಹಾಗೂ ಸಲೀಂ ಇಶಾಕ್‌ ಪಟೇಲ್‌ ಎಂಬುವರು ದೋಷಿಗಳಾಗಿದ್ದರು. ಕುರ್ಲಾದಂಥ ಪ್ರತಿಷ್ಠಿತ ಪ್ರದೇಶದಲ್ಲಿನ 2.8 ಎಕರೆ ಭೂಮಿಯನ್ನು ಮಲಿಕ್‌ ಅವರ ಸಾಲಿಡಸ್‌ ಇನ್ವೆಸ್ಟ್‌ಮೆಂಟ್‌ ಕಂಪನಿ ಕೇವಲ 30 ಲಕ್ಷ ರು.ಗೆ ಖರೀದಿಸಿತ್ತು. ದೋಷಿಗಳಿಂದ ಹೇಗೆ ಇಷ್ಟು ಜಮೀನು ಖರೀದಿಸಿದ್ದಿರಿ? ಅದೂ 30 ಲಕ್ಷ ರು. ಪುಡಿಗಾಸಿನಲ್ಲಿ’ ಎಂದು ಫಡ್ನವೀಸ್‌ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಈ ವಿಷಯ ತಮಗೆ ಗೊತ್ತಿರಲಿಲ್ಲ. ಒಂದು ವೇಳೆ ತಿಳಿದಿದ್ದರೆ ಆಗಲೇ ಮಲಿಕ್‌ ಅಕ್ರಮವನ್ನು ಅನಾವರಣಗೊಳಿಸುತ್ತಿದ್ದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ನನ್ನ ಪ್ರಶ್ನೆ ಏನೆಂದರೆ, ನೀವು ಸಚಿವರಾಗಿದ್ದಾಗ ಈ ಡೀಲ್ ನಡೆದಿದೆ. ಸಲೀಂ ಪಟೇಲ್ ಯಾರೆಂದು ನಿಮಗೆ ತಿಳಿದಿದೆಯೇ? ಅಪರಾಧಿಗಳಿಂದ ಏಕೆ ನೀವು ಜಮೀನು ಖರೀದಿಸಿದ್ದೀರಿ? ಅವರು ಮೂರು ಎಕರೆ ಪ್ಲಾಟ್ ಅನ್ನು ಕೇವಲ 30 ಲಕ್ಷ ರೂಪಾಯಿಗೆ ಏಕೆ ಮಾರಾಟ ಮಾಡಿದರು?’ ಎಂದು ಕೇಳಿದ್ದಾರೆ.

ಇಂದು ಬಾಂಬ್‌ ಸಿಡಿಸುವೆ- ಮಲಿಕ್‌:

ಈ ಕುರಿತು ಪ್ರತಿಕ್ರಿಯಿಸಿರುವ ಮಲಿಕ್‌, ‘ದೇವೇಂದ್ರ ಫಡ್ನವೀಸ್‌ ಅವರು ಭೂಗತ ಜಗತ್ತಿನ ಜತೆ ಹೊಂದಿರುವ ನಂಟನ್ನು ಬಯಲು ಮಾಡುತ್ತೇನೆ. ಬುಧವಾರ ಜಲಜನಕ ಬಾಂಬ್‌ ಸ್ಫೋಟಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಡ್ರಗ್‌ ಪೆಡ್ಲರ್‌ ಜೊತೆ ಫಡ್ನವೀಸ್‌ ಪತ್ನಿಗೆ ನಂಟು: ಮಲಿಕ್‌ ‘ಬಾಂಬ್‌’

ನಟ ಶಾರುಖ್‌ ಪುತ್ರ ಆರ್ಯನ್‌ ಖಾನ್‌ ಮಾದಕ ವಸ್ತು ಪ್ರಕರಣದಲ್ಲಿ ಸಿಕ್ಕಿಬಿದ್ದ ಬಳಿಕ ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿ ಸಮೀರ್‌ ವಾಂಖೇಡೆ ವಿರುದ್ಧ ದಿನಕ್ಕೊಂದು ಆರೋಪ ಮಾಡುತ್ತಿರುವ ಮಹಾರಾಷ್ಟ್ರದ ಸಚಿವ ನವಾಬ್‌ ಮಲಿಕ್‌, ಇದೀಗ ಡ್ರಗ್ಸ್‌ ಪೆಡ್ಲರ್‌ ಜೊತೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಇರುವ ಫೋಟೋ ಒಂದನ್ನು ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ನಾಯಕರು ಮತ್ತು ಡ್ರಗ್‌ ಪೆಡ್ಲರ್‌ ಜೊತೆಗಿನ ನಂಟಿನ ಬಗ್ಗೆ ಚರ್ಚೆ ನಡೆಸೋಣ ಎಂದು ಹೇಳಿ ಅದರ ಜೊತೆಗೆ ಡ್ರಗ್‌ ಪೆಡ್ಲರ್‌ ಜೈದೀಪ್‌ ರಾಣಾ ಮತ್ತು ಅಮೃತಾ ಫಡ್ನವೀಸ್‌ ಇರುವ ಫೋಟೋ ಲಗತ್ತಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಂದ್ರ ಫಡ್ನವೀಸ್‌, ನಾನು ಸಿಎಂ ಆಗಿದ್ದ ವೇಳೆ ನದಿಗಳ ಪುನರುಜ್ಜೀವನ ಕುರಿತ ಕಾರ್ಯಕ್ರಮದ ಶೂಟಿಂಗ್‌ ವೇಳೆ ತೆಗೆದ ಫೋಟೋ ಇದು. ಜೈದೀಪ್‌ ಎಲ್ಲರ ಜೊತೆಗೂ ಫೋಟೋ ತೆಗೆಸಿಕೊಂಡಿದ್ದ. ಆದರೆ ಅಮೃತಾ ಜೊತೆಗಿನ ಫೋಟೋ ಮಾತ್ರವೇ ಟ್ವೀಟ್‌ ಮಾಡುವ ಮೂಲಕ ನವಾಬ್‌ ಮಲಿಕ್‌ ತಮ್ಮ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ದೀಪಾವಳಿ ಬಳಿಕ ನಾನು ಭೂಗತ ಜಗತ್ತಿನೊಂದಿಗೆ ನವಾಬ್‌ ಮಲಿಕ್‌ಗಿರುವ ನಂಟಿನ ಕುರಿತು ಮಾಹಿತಿ ಬಹಿರಂಗಪಡಿಸುತ್ತೇನೆ. ಅದನ್ನು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಜೊತೆಗೂ ಹಂಚಿಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *