ನವೆಂಬರ್‌ನಲ್ಲಿ 16 ಸಿನಿಮಾ ಬಿಡುಗಡೆ; 12ಕ್ಕೆ 6 ಚಿತ್ರಗಳು ರಿಲೀಸ್!
ಕೊರೋನಾ ಕಾರಣಕ್ಕೆ ಬಿಡುಗಡೆಯಾಗದೇ ಉಳಿದ ಹಲವು ಚಿತ್ರಗಳು ಬಿಡುಗಡೆಯ ದಿನಾಂಕ ಘೋಷಿಸಿ ತೆರೆ ಬರಲು ತುದಿಗಾಲಲ್ಲಿ ನಿಂತಿವೆ. ಈ ತಿಂಗಳು ಬಿಡುಗಡೆಯಾಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ..
ನ.12ರ ಒಂದೇ ದಿನ ‘ಟಾಮ್ ಆ್ಯಂಡ್ ಜೆರ್ರಿ’, ‘ಹಿಟ್ಲರ್’, ‘ಪ್ರೇಮಂ ಪೂಜ್ಯಂ’, ‘ಬೈ1 ಗೆಟ್1 ಫ್ರೀ’, ‘ಕಪೋ ಕಲ್ಪಿತಂ’, ‘ಯರ್ರಾಬಿರ್ರಿ’ ಚಿತ್ರಗಳು ತೆರೆ ಕಾಣಲಿವೆ. ನ.18ರಂದು ‘ಲಕ್ಷ್ಯ’ ಎಂಬ ಒಂದು ಚಿತ್ರ ಬಿಡುಗಡೆಯಾದರೆ, ನ.19ರಂದು ಮತ್ತೆ 6 ಸಿನಿಮಾಗಳು ತೆರೆ ಕಾಣಲಿದೆ. ರಮೇಶ್ ಅರವಿಂದ್ ನಟನೆಯ ಫ್ಯಾಮಿಲಿ ಥ್ರಿಲ್ಲರ್ ‘100’, ರಾಜ್ ಬಿ ಶೆಟ್ಟಿನಿರ್ದೇಶಿಸಿ ನಟಿಸಿರುವ ‘ಗರುಡ ಗಮನ ವೃಷಭ ವಾಹನ’, ಮನು ರವಿಚಂದ್ರನ್ ಅಭಿನಯದ ‘ಮುಗಿಲ್ ಪೇಟೆ’, ‘ಒಂಭತ್ತನೇ ದಿಕ್ಕು’ ಮೊದಲಾದ ಚಿತ್ರಗಳು ರಿಲೀಸ್ ಆಗಲಿದೆ. ನ.26ರಂದು ಗಣೇಶ್ ನಟನೆಯ ‘ಸಖತ್’ ಸೇರಿ ಮೂರು ಸಿನಿಮಾ ಥೇಟರ್‌ಗೆ ಬರಲಿವೆ. ಹೀಗೆ ಒಟ್ಟು 16 ಚಿತ್ರಗಳು ಈ ತಿಂಗಳಲ್ಲಿ ತೆರೆ ಕಾಣಲಿವೆ.
ಒಳ್ಳೆಯ ಸಿನಿಮಾ ಬಂದರೆ ಸಮಸ್ಯೆಯಾಗದು – ಕೆ ವಿ ಚಂದ್ರಶೇಖರ್, ಪ್ರದರ್ಶಕರ ಸಂಘದ ಅಧ್ಯಕ್ಷ
ರಾಜ್ಯದಲ್ಲಿ ಪ್ರಸ್ತುತ 550ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಚಿತ್ರಪ್ರದರ್ಶನ ನಡೆಯುತ್ತಿದೆ. ಪ್ರೇಕ್ಷಕ ಉತ್ಸಾಹದಿಂದ ಥೇಟರ್‌ಗೆ ಬರುತ್ತಿದ್ದಾನೆ. ಸದ್ಯ ಬಿಡುಗಡೆಯಾಗುವ ಚಿತ್ರಗಳು ಕೆಲವೇ ಥೇಟರ್‌ಗಳಲ್ಲಿ ರಿಲೀಸ್ ಆಗುತ್ತವೆ. ರಾಜ್ಯದಲ್ಲಿರುವ ಅಷ್ಟೂಚಿತ್ರಮಂದಿರಗಳು ಭರ್ತಿಯಾಗುವ ದೃಷ್ಟಿಯಿಂದ ವಾರಕ್ಕೆ ಐದಾರು ಸಿನಿಮಾಗಳು ಬಂದರೆ ಒಳ್ಳೆಯದೇ.
ಮುಂದಿನ ತಿಂಗಳು ಅನೇಕ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಮುಂದಿನ ತಿಂಗಳಲ್ಲಿ ಶ್ರೀಮುರಳಿ ನಟನೆಯ ‘ಮದಗಜ’, ಧನಂಜಯ ನಾಯಕರಾಗಿರುವ ‘ಬಡವ ರಾಸ್ಕಲ್’, ಶರಣ್ ನಟನೆಯ ‘ಅವತಾರ’ ಪುರುಷ ಚಿತ್ರಗಳು ತೆರೆ ಕಾಣಲಿವೆ. ಆದರೆ ಇವುಗಳ ನಡುವೆ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ತೆರೆಗಪ್ಪಳಿಸುವ ಸಾಧ್ಯತೆ ಇದೆ. ಡಿಸೆಂಬರ್ 31ಕ್ಕೆ ರಕ್ಷಿತ್ ಶೆಟ್ಟಿಅವರ ‘777 ಚಾರ್ಲಿ’ ತೆರೆ ಕಾಣಲಿದೆ.
ಸಿನಿಮಾ ಬಿಡುಗಡೆ ನಾವು ತಡೆಯೋದಕ್ಕಾಗಲ್ಲ – ಜೈರಾಜ್, ಫಿಲಂ ಚೇಂಬರ್ ಅಧ್ಯಕ್ಷ
ಈ ತಿಂಗಳು ಬಿಡುಗಡೆಯಾಗುತ್ತಿರುವ ಬಹುತೇಕ ಚಿತ್ರಗಳು ಕಡಿಮೆ ಬಜೆಟ್‌ನವು. ಮುಂದೆ ಸ್ಟಾರ್ ಸಿನಿಮಾಗಳು ರಿಲೀಸ್ ಆದರೆ ಥೇಟರ್ ಸಿಗಲ್ಲ ಅನ್ನುವ ಕಾರಣಕ್ಕೆ ಅವರು ಈಗ ಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ. ಇದರಿಂದ ಹಾನಿಯೇನಿಲ್ಲ. ಬದಲಿಗೆ ಎಲ್ಲಾ ಚಿತ್ರಮಂದಿರಗಳಿಗೂ ಸಿನಿಮಾಗಳು ಸಿಗುತ್ತವೆ.
‘ಈ ಶುಕ್ರವಾರದಿಂದ ಕೊರೋನಾ ಪೂರ್ವದಲ್ಲಿ ನಡೆಯುತ್ತಿದ್ದ ಹಾಗೆ ರಾಜ್ಯದ 550ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನೈಟ್ ಶೋಗಳೂ ನಡೆಯಲಿವೆ’ ಎಂದು ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿ ಚಂದ್ರಶೇಖರ್ ತಿಳಿಸಿದ್ದಾರೆ. ಇದು ಬಿಡುಗಡೆಯಾಗುತ್ತಿರುವ ಚಿತ್ರಗಳಿಗೆ ಬೋನಸ್ ಆಗಲಿದೆ.