Petrol Diesel Price: ಯಾವ ರೀತಿ ಕಡಿಮೆಯಾಗಲಿದೆ ಪೆಟ್ರೋಲ್-ಡೀಸೆಲ್ ದರ? ಇಲ್ಲಿದೆ ಸೂತ್ರ
Petrol Diesel Price: ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದರಿಂದ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಮತ್ತಷ್ಟು ಕಡಿಮೆ ಮಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆದಾಯ ಹೆಚ್ಚಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ. ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಖಂಡಿತವಾಗಿಯೂ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತಾರೆ ಎಂದು ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ.
ಕೆಲವು ರಾಜ್ಯಗಳು ಈ ನಿರ್ಧಾರವನ್ನು ವಿರೋಧಿಸಿವೆ:
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮಾತನಾಡಿ, ‘ಜಿಎಸ್ಟಿ ಕೌನ್ಸಿಲ್ನಲ್ಲಿ ರಾಜ್ಯಗಳ ಹಣಕಾಸು ಸಚಿವರು ಕೂಡ ಸದಸ್ಯರಾಗಿದ್ದಾರೆ. ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸುತ್ತಿವೆ, ಆದರೆ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ, ಇವುಗಳ ಮೇಲಿನ ತೆರಿಗೆ ಕಡಿಮೆಯಾಗಿ ಕೇಂದ್ರ ಮತ್ತು ರಾಜ್ಯಗಳೆರಡರ ಆದಾಯವೂ ಹೆಚ್ಚಾಗುತ್ತದೆ. GST ಕೌನ್ಸಿಲ್ ತನ್ನ ಸೆಪ್ಟೆಂಬರ್ 17 ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು GST ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಿದೆ ಎಂದರು.
ಇದೇ ವೇಳೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ (Petrol Diesel Price) ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ಮತ್ತು 10 ರೂ.ಗಳಷ್ಟು ಕಡಿತಗೊಳಿಸಿದ ಸಂಬಂಧದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿತಿನ್ ಗಡ್ಕರಿ ಅವರು ಕೇಂದ್ರ ಸರ್ಕಾರವು (Central Govt) ಸಾಮಾನ್ಯ ಜನರಿಗೆ ಪರಿಹಾರ ನೀಡಲು ಉತ್ತಮ ಕ್ರಮ ಕೈಗೊಂಡಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿ ಜನಸಾಮಾನ್ಯರಿಗೆ ಪರಿಹಾರ ನೀಡಿದ ರೀತಿ ರಾಜ್ಯ ಸರ್ಕಾರಗಳೂ ಅದನ್ನು ಅನುಸರಿಸಿ ವ್ಯಾಟ್ ಕಡಿತಗೊಳಿಸುವ ನಿರೀಕ್ಷೆ ಇದೆ. ಇದರಿಂದ ಜನಸಾಮಾನ್ಯರಿಗೆ ಹೆಚ್ಚಿನ ನೆಮ್ಮದಿ ಸಿಗಲಿದೆ ಎಂದರು.
ಉಪಚುನಾವಣೆ ಫಲಿತಾಂಶದ ಪರಿಣಾಮ?
30 ವಿಧಾನಸಭಾ ಕ್ಷೇತ್ರಗಳು ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗಳ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ಈ ಕ್ರಮ ಕೈಗೊಂಡಿದೆ ಎಂಬ ಆರೋಪದ ಕುರಿತು ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಜಕೀಯವು ನಮಗೆ ಸಾಮಾಜಿಕ-ಆರ್ಥಿಕ ಸುಧಾರಣೆಗಳಿಗೆ ಮಾಧ್ಯಮವಾಗಿದೆ. ನಾವು ಚುನಾವಣೆ ಗೆಲ್ಲಲು ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು.