ಡಿಸೆಂಬರ್‌ನಲ್ಲಿ ರವಿಚಂದ್ರನ್‌ ನಟನೆಯ Drishya 2 ತೆರೆಗೆ!

ಕನ್ನಡ ಸಿನಿ ರಸಿಕರನ್ನು ಮನೋರಂಜಿಸಲು ಬರುತ್ತಿದೆ ದೃಶ್ಯ 2, ಡಿಸೆಂಬರ್‌ನಲ್ಲಿ ಸಿನಿಮಾ ನೋಡಲು ರೆಡಿ ನಾ?

ಕ್ರೇಜಿಸ್ಟಾರ್‌ ರವಿಚಂದ್ರನ್‌ ಮುಖ್ಯಪಾತ್ರದಲ್ಲಿ ನಟಿಸಿರುವ ‘ದೃಶ್ಯ 2’ ಚಿತ್ರ ಡಿಸೆಂಬರ್‌ನಲ್ಲಿ ತೆರೆ ಕಾಣಲಿದೆ. ಪಿ ವಾಸು ನಿರ್ದೇಶನದ ಈ ಚಿತ್ರದ ಮೊದಲ ಭಾಗ ಏಳು ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್‌ ಹಿಟ್‌ ಆಗಿತ್ತು. ರವಿಚಂದ್ರನ್‌ ಅವರು ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಮಿಂಚಿದ್ದರು. ಇದೀಗ ಈ ಸಿನಿಮಾದ ಸೀಕ್ವಲ್‌ ಬಿಡುಗಡೆಗೆ ಸಿದ್ಧವಾಗಿದೆ. ಮುಂದಿನ ತಿಂಗಳು ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಈ ಸಿನಿಮಾದಲ್ಲಿ ರವಿಚಂದ್ರನ್‌ ಪತ್ನಿಯ ಪಾತ್ರದಲ್ಲಿ ಮಲಯಾಳಂ ನಟಿ ನವ್ಯಾ ನಾಯರ್‌ ಕಾಣಿಸಿಕೊಂಡಿದ್ದಾರೆ. ಆರೋಹಿ ನಾರಾಯಣ್‌, ಉನ್ನತಿ ಮುಖ್ಯಪಾತ್ರದಲ್ಲಿದ್ದಾರೆ. ಮಲಯಾಳಂನ ‘ದೃಶ್ಯಂ 2’ನ ರೀಮೇಕ್‌ ಇದಾಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ.‘ಇಡೀ ಫ್ಯಾಮಿಲಿ ಸಿನಿಮಾ ನೋಡಿ, ಹೊಟೇಲಲ್ಲಿ ಊಟ ಮಾಡಿ ಸುತ್ತಾಟ ಮುಗಿಸಿ ಮನೆಗೆ ವಾಪಾಸಾಗೋದೇ ನಮ್ಮ ನಾಡಿನ ಕ್ರಮ. ಈ ಓಟಿಟಿ ನಮಗಲ್ಲ’ ಎಂದಿದ್ದಾರೆ ಕ್ರೇಜಿಸ್ಟಾರ್‌ ರವಿಚಂದ್ರನ್‌.

 

‘ಬೇರೆ ಯಾವ ಚಿತ್ರದ ಶೂಟಿಂಗ್‌ನಲ್ಲೂ ಚಿತ್ರತಂಡದ ಜೊತೆಗೆ ಇಂಥಾ ಬಾಂಧವ್ಯ ಬೆಳೆದಿರಲಿಲ್ಲ. ನಾನಿಲ್ಲಿ ರಾಜೇಂದ್ರ ಪೊನ್ನಪ್ಪನಾಗಿಯೇ ಇದ್ದೆ. ನನ್ನ ಮಗಳ ಪಾತ್ರ ಮಾಡುವ ಹುಡುಗಿಗೆ ದಿನಾ ತಿಂಡಿ ತಂದು ಕೊಡುತ್ತಿದ್ದೆ. ಇತರರಿಗೆ ಬಿರಿಯಾನಿ ಕೊಡಿಸುತ್ತಿದ್ದೆ. ಒಂದು ದಿನ ಖಾಲಿ ಕೈಯಲ್ಲಿ ಬಂದರೆ ಎಲ್ಲಾ ಮುಖ ನೋಡುತ್ತಿದ್ದರು. ಈಗ ಶೂಟಿಂಗ್‌ ಮುಗಿಯುತ್ತಿರೋದಕ್ಕೆ ನಿಜಕ್ಕೂ ಬೇಸರವೆನಿಸುತ್ತಿದೆ.ಕೊಡಗಿನ ಮಳೆ, ಚಳಿಯ ನಡುವೆ ಶೂಟಿಂಗ್‌ ಮುಗಿಸಿದ್ದೇವೆ. ದೃಶ್ಯ 2 ಶೂಟಿಂಗ್‌ ಅವಿಸ್ಮರಣೀಯ ಅನುಭವ. ಈ ಸಲ ಹಾಸ್ಯ ಪಾತ್ರದಲ್ಲಿ ಸಾಧು ಕೋಕಿಲ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದರು.

 

‘ಅನಂತ್‌ನಾಗ್ ಸರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ನನಗೆ ಖುಷಿ ಕೊಟ್ಟಿದೆ. ಆದರೆ ಅವರ ಜೊತೆ ನನ್ನ ದೃಶ್ಯಗಳಿಲ್ಲ ಎನ್ನುವ ನಿರಾಶೆಯೂ ಇದೆ,’ ಎಂದು ಆರೋಹಿ ಖಾಸಗಿ ವೆಬ್‌ಸೈಟಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

 

ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಲು ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರತಂಡ ಸೇರಿಕೊಳ್ಳುತ್ತಿದ್ದಾರೆ. ಈಗಾಗಲೇ ವಸಿಷ್ಠ ಸಿಂಹ, ಲೂಸ್ ಮಾದ ಯೋಗೀಶ್, ಶ್ರುತಿ ಹರಿಹರನ್, ಬಾಲು ನಾಗೇಂದ್ರ, ರಘು ಮುಖರ್ಜಿ ಚಿತ್ರದಲ್ಲಿ ನಟಿಸುತ್ತಿದ್ದು, ಇದನ್ನೊಂದು ಮಲ್ಟಿಸ್ಟಾರ್ ಸಿನಿಮಾ ಆಗಿಸುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *