Hamsalekha: ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ; ಕ್ಷಮೆ ಕೋರಿದ ಹಂಸಲೇಖ
ಬೆಂಗಳೂರು: ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ, ಸಿನಿಮಾ ಸಾಹಿತಿ ಹಂಸಲೇಖ ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾದ ಘಟನೆ ನಡೆದಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದೆ. ನೆಟ್ಟಿಗರು ಹಂಸಲೇಖ ಮಾತುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರು ವಿಡಿಯೋ ಮುಖಾಂತರ ಕ್ಷಮೆ ಕೇಳಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ನಾದಬ್ರಹ್ಮ ಹಂಸಲೇಖ ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದರು. ಮೇಲುಜಾತಿ ಹಾಗೂ ಕೀಳುಜಾತಿ, ಜಾತಿತಾರತಮ್ಯ, ಜಾತಿ ಪಿಡುಗು ವಿಚಾರವಾಗಿ ಮಾತನಾಡುತ್ತಾ ಅವಹೇಳನಕಾರಿ ವಾಕ್ಯ ಪ್ರಯೋಗಿಸಿದ್ದರು. ಬಳಿಕ ಅಂಬೇಡ್ಕರ್ ವಿಚಾರವನ್ನು ಕೂಡ ಉಲ್ಲೇಖಿಸಿದ್ದರು. ಇಲ್ಲಿ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು. ಫೇಸ್ಬುಕ್ನಲ್ಲಿ ಜನರು ವಿವಿಧ ರೀತಿಯ ಕಮೆಂಟ್ಗಳನ್ನು ಮಾಡಿ ವಿಡಿಯೋ ಹಂಚಿಕೊಂಡಿದ್ದರು.