ಅಕಾಲಿಕ ಮಳೆ: ಕೋಲಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಜ್ಯದ ಹಲವು ಕಡೆಗಳಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಭಾರೀ ಹಾನಿಯಾಗಿದೆ. ಕೋಲಾರದಲ್ಲಿ ಮಳೆರಾಯ ಅಬ್ಬರಿದು ಬೊಬ್ಬೆರೆಯುತ್ತಿದ್ದು, ಜಿಲ್ಲೆಯ ಹಲವೆಡೆ ಪ್ರವಾಹ ಪರಿಸ್ತಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಕೋಲಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಕೋಲಾರ ಜಿಲ್ಲೆಯಾದ್ಯಂತ ಎರಡು ದಿನಗಳ ಹಿಂದೆ 120 ಮಿಲಿ ಮೀಟರ್ಗೂ ಹೆಚ್ಚು ದಾಖಲೆಯ ಮಳೆಯಾಗಿತ್ತು. ಮಳೆಯಿಂದಾಗಿ 9 ಮನೆಗಳು ಸಂಪೂರ್ಣ ಕುಸಿದಿದ್ದು, 306 ಮನೆಗಳಿಗೆ ಹಾನಿಯಾಗಿದೆ. ಕೆರೆಕಟ್ಟೆಗಳು ಬಹುತೇಕ ರಭಸದಿಂದ ಕೋಡಿಹರಿಯುತ್ತಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೋಲಾರಕ್ಕೆ ಭೇಟಿ ನೀಡಿ ಮಳೆ ಹಾನಿ ಕುರಿತಾಗಿ ಪರಿಶೀಲನೆ ನಡೆಸಲಿದ್ದಾರೆ. ಭಾನುವಾರ ಸಿಎಂ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ವ್ಯಾಪಕ ಮಳೆಯಿಂದಾಗಿ ಒಟ್ಟು 24 ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು, 1, 078 ಮನೆಗಳು ಭಾಗಶಃ ಕುಸಿದಿವೆ. ಪೂರ್ತಿ ಕುಸಿದು ಬಿದ್ದ ಮನೆಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.