ರಾಜ್ಯದಲ್ಲಿ ರಂಗೇರಿದ ಮತದಾನ: ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತದಾನ ಇಂದು
ಬೆಂಗಳೂರು: ಇಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಬೆಂಗಳೂರು ಸೇರಿದಂತೆ ಕೆಲವೆಡೆ ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 12ರ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಹಾಗೂ ಡಿ. 15ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಜೊತೆಗೆ ಬ್ರಾಹ್ಮಣ ಮಹಾಸಭಾಕ್ಕೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು 2ನೇ ಹಂತದ ಚುನಾವಣೆ ಡಿ.19ರಂದು ನಡೆಯಲಿದೆ.
ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ 35 ಸ್ಥಾನಗಳಿಗೆ 13 ಜಿಲ್ಲೆಗಳಿಂದ ಒಟ್ಟು 221 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ 141, ಮೈಸೂರು 9, ಮಂಡ್ಯ 16, ಹಾಸನ 11, ತುಮಕೂರು 7, ಚಿತ್ರದುರ್ಗ 5, ಕೋಲಾರ ಮತ್ತು ಚಿಕ್ಕಬಳ್ಳಾಪುರ12, ದಕ್ಷಿಣ ಕನ್ನಡ ಮತ್ತು ಉಡುಪಿ 3, ಕೊಡಗು 4, ಶಿವಮೊಗ್ಗ ಮತ್ತು ಉತ್ತರ ಕನ್ನಡ 9, ಚಿಕ್ಕಮಗಳೂರು 4 ಸೇರಿ ಒಟ್ಟು 221 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,049 ಮತಕೇಂದ್ರಗಳಿದ್ದು 5,20,721 ಮತದಾರರಿದ್ದಾರೆ.
ಬೆಂಗಳೂರಿನಲ್ಲಿ ಆಯಾ ಕ್ಷೇತ್ರದ ಮತದಾರರು ಆಯಾ ಕ್ಷೇತ್ರಗಳಲ್ಲೇ ಮತ ಚಲಾಯಿಸಲು ಅನುಕೂಲವಾಗುವಂತೆ 23 ಮತಗಟ್ಟೆಗಳನ್ನು ತೆರೆಯಲಾಗಿದೆ. ಒಬ್ಬ ಮತದಾರ 15 ಅಭ್ಯರ್ಥಿಗಳಿಗೆ ಮತ ಹಾಕಬಹುದು. ಮತದಾನದ ವೇಳೆ ಒಕ್ಕಲಿಗರ ಸಂಘದ ಸದಸ್ಯತ್ವ ಗುರುತಿನ ಚೀಟಿ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಇತರೆ ಗುರುತಿನ ಪತ್ರಗಳನ್ನು ತೆಗೆದುಕೊಂಡು ಹೋದ್ರೆ ಮತದಾನಕ್ಕೆ ಅವಕಾಶವಿಲ್ಲ. ಈಗಾಗಲೇ ಎಲ್ಲಾ ಮತಕೇಂದ್ರಗಳಲ್ಲೂ ಚುನಾವಣೆ ಆರಂಭಗೊಂಡಿದೆ. ಸೌಥ್ ಎಂಡ್ ಸರ್ಕಲ್ ವಿಜಯ ಕಾಲೇಜು, ಮಲ್ಲೇಶ್ವರಂನ ಮಹರಾಣಿ ಅಮ್ಮಣಿ ಕಾಲೇಜ್, ಒಕ್ಕಲಿಗ ಸಂಘದ ಕೇಂದ್ರ ಕಚೇರಿ ಸೇರಿದಂತೆ 300ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ.
ಭಾರಿ ಕುತೂಹಲ ಹುಟ್ಟಿಸಿರುವ ಒಕ್ಕಲಿಗ ಸಂಘದ ಚುನಾವಣೆ 5 ವರ್ಷಗಳಿಗೊಮ್ಮೆ ನಡೆಯುತ್ತೆ. ಮೂರು ವರ್ಷಗಳಿಂದ ಅಧ್ಯಕ್ಷರಿಲ್ಲದೇ ಆಡಳಿತಾಧಿಕಾರಿ ನೇತೃತ್ವದಲ್ಲಿ ಒಕ್ಕಲಿಗ ಸಂಘ ಮುಂದುವರೆದಿತ್ತು. ಸದ್ಯ ಇಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೊದಲ ಹಂತದ ಚುನಾವಣೆ ಇಂದು
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ 44 ಸಾವಿರ ಸದಸ್ಯರಿದ್ದು 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು 2ನೇ ಹಂತದ ಮತದಾನ ಡಿ.19ರಂದು ನಡೆಯಲಿದೆ. ಮೊದಲ ಹಂತದ ಮತದಾನ ಶಿವಮೊಗ್ಗ, ಹಾಸನ, ಮೈಸೂರು, ಹುಬ್ಬಳ್ಳಿ ಮತ್ತು ರಾಯಚೂರಿನಲ್ಲಿ ನಡೆಯಲಿದೆ. 2ನೇ ಹಂತದಲ್ಲಿ ಬೆಂಗಳೂರಿನ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಚುನಾವಣೆ ನಡೆಯಲಿದೆ.