Rajinikanth Birthday: ರಜನಿಕಾಂತ್​ ಜನ್ಮದಿನ; ‘ತಲೈವಾ’ 71ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ

ಸೂಪರ್​ ಸ್ಟಾರ್​’ ಎಂಬ ಪದ ಕೇಳಿದರೆ ಮೊದಲು ನೆನಪಾಗುವುದು ರಜನಿಕಾಂತ್ (Rajinikanth)​. ಹಲವು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ‘ತಲೈವಾ’ (Thalaiva) ಇಂದಿಗೂ ಅದೇ ಚಾರ್ಮ್​ ಉಳಿಸಿಕೊಂಡಿದ್ದಾರೆ. ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಅವರ ಮನೆಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಭಾರತೀಯ ಚಿತ್ರರಂಗ ಕಂಡ ಅಪರೂಪದ ‘ಸೂಪರ್​ ಸ್ಟಾರ್​’ಗೆ ಇಂದು (ಡಿ.12) ಜನ್ಮದಿನದ ಸಂಭ್ರಮ. ರಜನಿಕಾಂತ್​ ಬರ್ತ್​​ಡೇ (Rajinikanth Birthday) ಎಂದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ರಜನಿಕಾಂತ್​ ಅವರಿಗೆ ವಿಶ್​ ಮಾಡುತ್ತಿದ್ದಾರೆ. ಅವರಿಗೆ ದೇವರು ಹೆಚ್ಚಿನ ಆರೋಗ್ಯ, ಆಯಸ್ಸು ನೀಡಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ರಜನಿಕಾಂತ್ ಸೃಷ್ಟಿ ಮಾಡಿದ ಹವಾ ಅಷ್ಟಿಷ್ಟಲ್ಲ. ತಮಿಳು ಸಿನಿಮಾ ಇತಿಹಾಸದಲ್ಲಿ ಅವರದ್ದು ದೊಡ್ಡ ಸಾಧನೆ. ಕನ್ನಡ, ಹಿಂದಿ, ತೆಲುಗು ಸಿನಿಮಾಗಳಲ್ಲೂ ಅವರು ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಜನಿಕಾಂತ್​ ಚಿತ್ರಗಳು ರಿಲೀಸ್​ ಆದರೆ ಈಗಲೂ ಥಿಯೇಟರ್​ ಮುಂದೆ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಬಣ್ಣದ ಲೋಕದಲ್ಲಿ ಅವರು ಸೃಷ್ಟಿಸಿದ ಕ್ರೇಜ್​ ಅಷ್ಟರಮಟ್ಟಿಗೆ ಇದೆ.

ಈ ವರ್ಷ ರಜನಿಕಾಂತ್ ಪಾಲಿಗೆ ವಿಶೇಷವಾಗಿತ್ತು. ಅವರು ನಟಿಸಿದ ‘ಅಣ್ಣಾತೆ’ ಸಿನಿಮಾ ಉತ್ತಮ ಕಲೆಕ್ಷನ್​ ಮಾಡಿತು. ಫ್ಯಾಮಿಲಿ ಪ್ರೇಕ್ಷಕರನ್ನು ಈ ಸಿನಿಮಾ ಸೆಳೆದುಕೊಂಡಿತು. ಅಲ್ಲದೇ, ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ‘ದಾದಾಸಾಹೇಬ್​ ಫಾಲ್ಕೆ’ ಪ್ರಶಸ್ತಿ ಕೂಡ ಈ ವರ್ಷ ಸಿಕ್ಕಿತು. ಈ ಎಲ್ಲ ಕಾರಣಗಳಿಂದಾಗಿ 2021ರ ವರ್ಷ ಅವರ ಅಭಿಮಾನಿಗಳ ಪಾಲಿಗೆ ವಿಶೇಷವಾಗಿದೆ.

‘ಅಣ್ಣಾಥೆ’ ಚಿತ್ರ ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿ ಚಿತ್ರ ತೆರೆಗೆ ಬಂತು. ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು. ನವೆಂಬರ್​​ 5ರಂದು 42.6 ಕೋಟಿ ರೂಪಾಯಿ, ನವೆಂಬರ್​ 6ರಂದು ಚಿತ್ರ 33.71 ಕೋಟಿ ಗಳಿಸಿತ್ತು. ಮೊದಲ ವಾರಾಂತ್ಯಕ್ಕೆ ಚಿತ್ರ ಒಟ್ಟಾರೆ 202.47 ಕೋಟಿ ರೂ. ಗಳಿಕೆ ಮಾಡಿತ್ತು.

ಎರಡನೇ ವಾರದ ಮೊದಲ ದಿನದಲ್ಲಿ ಚಿತ್ರವು ಜಗತ್ತಿನಾದ್ಯಂತ 4.05 ರೂ. ಕೋಟಿ ಗಳಿಸಿ ಬೀಗಿತ್ತು. ಅದನ್ನೂ ಸೇರಿದರೆ ಒಟ್ಟು 206.52 ಕೋಟಿ ರೂ. ಬಾಚಿಕೊಂಡಂತಾಗಿತ್ತು. ತಮಿಳುನಾಡಿನ ಲೆಕ್ಕಾಚಾರವನ್ನು ಮಾತ್ರ ಪರಿಗಣಿಸಿದರೆ, ಅಲ್ಲಿ ಚಿತ್ರವು, ಒಟ್ಟು 122.80 ಕೋಟಿ ರೂ. ಗಳಿಸುವ ಮೂಲಕ ಈ ವರ್ಷ ರಜನಿಕಾಂತ್​ ಅವರಿಗೆ ಯಶಸ್ಸು ತಂದು ಕೊಟ್ಟಿತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *