Republic Day: 2022ರ ಗಣರಾಜ್ಯೋತ್ಸವಕ್ಕೆ ಮಧ್ಯ ಏಷ್ಯಾ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಲು ಭಾರತ ಚಿಂತನೆ

2022 ರ ಗಣರಾಜ್ಯೋತ್ಸವ(Republic Day 2022)ಕ್ಕೆ ಭಾರತ ಮಧ್ಯ ಏಷ್ಯಾ ರಾಷ್ಟ್ರಗಳ(Central Asia Nations) ಪ್ರಮುಖ ನಾಯಕರನ್ನು ಆಹ್ವಾನಿಸಲು ಚಿಂತನೆ ನಡೆಸಿದೆ. ಉಜ್ಬೇಕಿಸ್ತಾನ್​, ತುರ್ಕಮೆನಿಸ್ತಾನ್, ಕಜಕಿಸ್ತಾನ್, ಕಿರ್ಗಿಜ್​ ಗಣರಾಜ್ಯ ಮತ್ತು ತಜಕಿಸ್ತಾನ್​​ -ಈ 5 ಮಧ್ಯ ಏಷ್ಯಾ ರಾಷ್ಟ್ರಗಳ ಪ್ರಮುಖ ನಾಯಕರನ್ನು ಮುಂದಿನ ವರ್ಷದ ಗಣರಾಜ್ಯೋತ್ಸವಕ್ಕೆ ಪ್ರಮುಖ ಅತಿಥಿಗಳನ್ನಾಗಿ ಭಾರತ(India) ಆಹ್ವಾನಿಸಲಿದೆ. ಈ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸುವ ಬಗ್ಗೆ ಭಾರತ ಚಿಂತನೆ ನಡೆಸುತ್ತಿದೆ ಎಂದು ಸರ್ಕಾರದ ಮೂಲಗಳು ಪಿಟಿಐ(PTI)ಗೆ ತಿಳಿಸಿವೆ.

2018ರಲ್ಲಿ ಏಸಿಯಾನ್ ನಾಯಕರು ಭಾಗಿ

ಪ್ರಸ್ತುತ, ಗಣರಾಜ್ಯೋತ್ಸವ ಸಮಾರಂಭಕ್ಕೆ ಪಾಲ್ಗೊಳ್ಳಲಿರುವ ಅತಿಥಿಗಳ ಪಟ್ಟಿಯನ್ನು ಇನ್ನೂ ಸಹ ಅಂತಿಮಗೊಳಿಸಿಲ್ಲ ಎಂದು ಮೂಲಗಳು ತಿಳಿಸಿವೆ. 2018ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಾರತವು 10 ರಾಷ್ಟ್ರಗಳ ಪ್ರಭಾವಿ ಪ್ರಾದೇಶಿಕ ಬ್ಲಾಕ್​​ ASEAN ನ ನಾಯಕರನ್ನು ಆಹ್ವಾನಿಸಿತ್ತು. ಅದರಂತೆ ಎಲ್ಲಾ ಆಹ್ವಾನಿತರು ಭಾಗಿಯಾಗಿದ್ದರು.

ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ಬಾಂಧವ್ಯ

ಕಳೆದ ಕೆಲವು ವರ್ಷಗಳಲ್ಲಿ, ಭಾರತವು ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ರೂಪಿಸಿಕೊಳ್ಳಲು, ಅವುಗಳೊಂದಿಗೆ ಸಹಕಾರವನ್ನು ಹೆಚ್ಚಿಸಿಕೊಳ್ಳಲು ಗಮನಹರಿಸುತ್ತಿದೆ. ಜುಲೈ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 5 ರಾಷ್ಟ್ರಗಳ ಪ್ರವಾಸದ ಬಳಿಕ, ಭಾರತದ ಬಾಂಧವ್ಯವು ಈ ದೇಶಗಳೊಂದಿಗೆ ಉತ್ತಮವಾಗಿ ರೂಪಿಸಲ್ಪಟ್ಟಿತು. ಅಪ್ಘನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮಧ್ಯ ಏಷ್ಯಾ ರಾಷ್ಟ್ರಗಳ ಪ್ರಾಮುಖ್ಯತೆಯನ್ನು ಬಲಪಡಿಸಿದವು.

2021ರಲ್ಲಿ ಮುಖ್ಯ ಅತಿಥಿ ಇರಲಿಲ್ಲ

ಎಲ್ಲಾ 5 ಮಧ್ಯ ಏಷ್ಯಾ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ನವೆಂಬರ್ 10ರಂದು ಅಪ್ಘಾನಿಸ್ತಾನದ ಕುರಿತು ಭಾರತ ಆಯೋಜಿಸಿದ್ದ ಪ್ರಾದೇಶಿಕ ಸಂವಾದದಲ್ಲಿ ಭಾಗವಹಿಸಿದ್ದರು. ರಷ್ಯಾ ಮತ್ತು ಇರಾನ್​​ನ NSAಗಳು ಸಹ ಈ ಸಂವಾದಲ್ಲಿ ಪಾಲ್ಗೊಂಡಿದ್ದರು. ಭಾರತಕ್ಕೆ ಈ ವರ್ಷ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಇರಲಿಲ್ಲ.

ಬೋರಿಸ್ ಜಾನ್ಸನ್​​ ಭಾರತ ಪ್ರವಾಸ ರದ್ದಾಗಿತ್ತು

ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಬ್ರಿಟಿಷ್ ಪ್ರಧಾನಿ ಬೋರಿಸ್​ ಜಾನ್ಸನ್​ ಅವರನ್ನು ಆಹ್ವಾನಿಸಲಾಗಿತ್ತು. ಅವರೂ ಸಹ ಆಹ್ವಾನವನ್ನು ಸ್ವೀಕರಿಸಿದ್ದರು. ಆದಾಗ್ಯೂ ಗಣರಾಜ್ಯೋತ್ಸವಕ್ಕೆ ಇನ್ನು 3 ವಾರ ಇರುವಾಗ, ಯುಕೆಯಲ್ಲಿ ಕೋವಿಡ್​-19 ಪ್ರಕರಣಗಳು ಉಲ್ಭಣಗೊಂಡವು. ಈ ಕಾರಣದಿಂದಾಗಿ ಬೋರಿಸ್​ ಜಾನ್ಸನ್​​ ದೆಹಲಿ ಭೇಟಿಯನ್ನು ರದ್ದುಗೊಳಿಸಿದರು. ಬ್ರೆಜಿಲ್​ ಅಧ್ಯಕ್ಷ ಜೈರ್​​ ಮೆಸ್ಸಿಯಾಸ್​ ಬೋಲ್ಸನಾರೊ ಅವರು 2020ರಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ಅವರು ಈ ಸಂದರ್ಭವನ್ನು ಅಲಂಕರಿಸಿದ ಬ್ರೆಜಿಲ್​​ನ 3ನೇ ಅಧ್ಯಕ್ಷರಾಗಿದ್ದರು.

ಕಳೆದ ವರ್ಷಗಳಲ್ಲಿ ಆಹ್ವಾನಿತರು ಇವರೇ

2019 ರಲ್ಲಿ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಆರ್-ಡೇ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿದ್ದರು. 2018 ರಲ್ಲಿ, ಆಸಿಯಾನ್ ದೇಶಗಳ ನಾಯಕರು ಆಚರಣೆಗಳಲ್ಲಿ ಭಾಗವಹಿಸಿದ್ದರು. 2017 ರಲ್ಲಿ, ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ಆದರೆ 2016 ರಲ್ಲಿ ಆಗಿನ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರು ಈ ಸಂದರ್ಭವನ್ನು ಅಲಂಕರಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *