ರಮೇಶ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ : ರಾಜೀನಾಮೆಗೆ ಸ್ಮೃತಿ ಆಗ್ರಹ, ಪ್ರಿಯಾಂಕಾ ಗಾಂಧಿ ಖಂಡನೆ

ಹೈಲೈಟ್ಸ್‌:

  • ರಮೇಶ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ ವಿಚಾರ
  • ರಾಜೀನಾಮೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗ್ರಹ
  • ಪ್ರಿಯಾಂಕಾ ಗಾಂಧಿ ಟ್ವೀಟ್‌ ಮೂಲಕ ಖಂಡನೆ

ಹೊಸದಿಲ್ಲಿ: ಕರ್ನಾಟಕದ ಕಾಂಗ್ರೆಸ್‌ ಶಾಸಕ ರಮೇಶ್‌ಕುಮಾರ್‌ ಅವರು ಅತ್ಯಾಚಾರದ ಕುರಿತು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯು ಶುಕ್ರವಾರ ಲೋಕಸಭೆಯಲ್ಲಿಯೂ ಪ್ರತಿಧ್ವನಿಸಿತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು, ”ಕರ್ನಾಟಕದ ಶಾಸಕರೊಬ್ಬರು ಅತ್ಯಾಚಾರದ ಕುರಿತು ನೀಡಿದ ಹೇಳಿಕೆ ಖಂಡನೀಯ. ಅವರ ಪಕ್ಷವು ಆ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

ಆದರೆ ಅವರು ಶಾಸಕರು, ಪಕ್ಷದ ಹೆಸರನ್ನು ಪ್ರಸ್ತಾಪಿಸಲಿಲ್ಲ. ಸ್ಮೃತಿ ಅವರು ಮಾತನಾಡುವಾಗ ಪ್ರತಿಪಕ್ಷಗಳ ಸದಸ್ಯರು ಅವರ ಎದುರು ಭಿತ್ತಿಪತ್ರಗಳನ್ನು ಹಿಡಿದು ಅಡ್ಡಿಪಡಿಸಲು ಪ್ರಯತ್ನಿಸಿದರು. ಅದಕ್ಕೆ ಮಣಿಯದ ಸಚಿವೆ, ”ಸದನದ ಕೆಲವು ಸಭ್ಯ ಸದಸ್ಯರು ನನ್ನ ಎದುರು ಭಿತ್ತಿಪತ್ರಗಳನ್ನು ಹಿಡಿದು ಅಡ್ಡಪಡಿಸುತ್ತಿದ್ದಾರೆ. ನಿಮಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಇಂತಹ ವರ್ತನೆ ಬಿಡಿ. ಸಭಾಧ್ಯಕ್ಷರ ಪೀಠದ ಎದುರು ಧರಣಿ ಕೈಬಿಟ್ಟು ನಿಮ್ಮ ಪಕ್ಷದ ಕಚೇರಿಗೆ ಹೋಗಿ ಅತ್ಯಾಚಾರದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳಿ. ಆಗ ದೇಶದಲ್ಲಿನ ಮಹಿಳೆಯರು ಮತ್ತು ಮಕ್ಕಳ ಕುರಿತು ಯಾರಿಗೆ ನಿಜವಾದ ಕಾಳಜಿ ಇದೆ ಎನ್ನುವುದು ಅರ್ಥಧಿವಾಗುತ್ತದೆ,” ಎಂಂದು ತಿರುಗೇಟು ನೀಡಿದರು.

ರಾಹುಲ್‌, ಪ್ರಿಯಾಂಕಾ ವಾದ್ರಾ ಏಕೆ ಮೌನ?
”ಪಕ್ಷದ ಹಿರಿಯ ಶಾಸಕರು ಅತ್ಯಾಚಾರದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದರೂ ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಏಕೆ ಮೌನವಾದ್ದಾರೆ,” ಎಂದು ಬಿಜೆಪಿ ಪ್ರಶ್ನಿಸಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರರಾದ ಅಪರಾಜಿತ ಸಾರಂಗಿ, ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಮತ್ತು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ರಮೇಶ್‌ಕುಮಾರ್‌ ಹೇಳಿಕೆಯನ್ನು ಖಂಡಿಸಿದರು.

ಪ್ರಿಯಾಂಕಾ ಖಂಡನೆ!
ಪ್ರಿಯಾಂಕ ಗಾಂಧಿ ಟ್ವೀಟರ್ ಮೂಲಕ ರಮೇಶ್‌ ಕುಮಾರ್‌ ಹೇಳಿಕೆ ಖಂಡಿಸಿದ್ದಾರೆ. ಇಂತಹ ಹೇಳಿಕೆಗಳು ಒಪ್ಪಲು ಸಾಧ್ಯವಿಲ್ಲ. ಕೆ.ಆರ್.ರಮೇಶ್ ಕುಮಾರ್ ಹೇಳಿಕೆಯನ್ನು ಖಂಡಿಸುತ್ತೇನೆ. ಈ ರೀತಿ ಪದಗಳು ಯಾರು ಬಳಸಬಾರದು. ರೇಪ್ ಅನ್ನುವುದು ಘೋರ ಅಪರಾಧ. ಇಲ್ಲಿಗೆ ನಿಲ್ಲಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಕ್ಷಮೆಯಾಚಿಸಿದ ರಮೇಶ್‌ ಕುಮಾರ್‌!
‘ಅತ್ಯಾಚಾರದಿಂದ ತಪ್ಪಿಸಿಕೊಳ್ಳಲಾಗದಿದ್ದರೆ ಮಲಗಿ ಆನಂದಿಸಿ’ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ ಮಾಜಿ ಸ್ಪೀಕರ್‌, ಕಾಂಗ್ರೆಸ್‌ ನಾಯಕ ರಮೇಶ್‌ ಕುಮಾರ್‌ ವಿಧಾನಸಭೆಯಲ್ಲಿ ಶುಕ್ರವಾರ ಬೇಷರತ್‌ ಕ್ಷಮೆ ಯಾಚಿಸಿದರು. ರಮೇಶ್‌ ಕುಮಾರ್‌ ಅವರ ಹೇಳಿಕೆಯನ್ನು ಪಕ್ಷ ಬೇಧವಿಲ್ಲದೆ ಹಲವಾರು ನಾಯಕರು ಖಂಡಿಸಿದ್ದು, ಸಾರ್ವಜನಿಕ ವಲಯದಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದನ್ನೆಲ್ಲ ಗಮನಿಸಿದ ರಮೇಶ್‌ ಕುಮಾರ್‌ ಅವರು ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿ ಕ್ಷಮೆ ಯಾಚಿಸಿದರು.

‘‘ನಾನು ಸದನದಲ್ಲಿ ನೀಡಿದ್ದ ಹೇಳಿಕೆಯಿಂದ ಯಾರಿಗಾದರೂ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ನಾನೊಂದು ನಾಣ್ಣುಡಿಯನ್ನು ಹೇಳಿದೆ. ಈ ಸದನಕ್ಕೆ ಅಗೌರವ ತರುವ ಅಥವಾ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವ ದುರುದ್ದೇಶವೂ ನನಗಿಲ್ಲ. ನನ್ನ ಹೇಳಿಕೆಯನ್ನು ಸಮರ್ಥಿಸುವ ಪ್ರತಿಷ್ಠೆಯೂ ಇಲ್ಲ,’’ ಎಂದು ಹೇಳಿದರು.

‘‘ನಾನು ಸಾಮಾನ್ಯ ಹಿನ್ನೆಲೆಯಿಂದ ಬಂದವನು. ಯಾರಿಗೂ ಸವಾಲೆಸೆದು ರಾಜಕೀಯ ಮಾಡುವ ಉದ್ದೇಶವೂ ಇಲ್ಲ. ನನ್ನ ಮಾತುಗಳಿಂದ ಸಮಾಜ ಅಥವಾ ಮಹಿಳೆಯರೂ ಸೇರಿ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಕ್ಕೆ ಯಾವುದೇ ಮುಜುಗರ ಇಲ್ಲ,’’ ಎಂದು ಕ್ಷಮೆಯಾಚಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *