ಅಮೃತಸರದ ಸ್ವರ್ಣಮಂದಿರ ಅಪವಿತ್ರಗೊಳಿಸಿದ ಆರೋಪ; ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿದ ಜನರ ಗುಂಪು, ತನಿಖೆಗೆ ಆದೇಶಿಸಿದ ಸಿಎಂ
ಚಂಡೀಗರ್(ಡಿ.19): ಪಂಜಾಬ್(Punjab)ನ ಅಮೃತಸರ(Amritsar)ದ ಸ್ವರ್ಣಮಂದಿರ(Golden Temple)ದಲ್ಲಿ ವ್ಯಕ್ತಿಯೊಬ್ಬ ಅಪಚಾರವೆಸಗಿದ ಆರೋಪ ಕೇಳಿ ಬಂದ ಹಿನ್ನೆಲೆ, ಕೋಪೋದ್ರಿಕ್ತ ಜನರ ಗುಂಪೊಂದು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಹತ್ಯೆ(Killed)ಗೈದಿರುವ ಘಟನೆ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯು ಸ್ವರ್ಣ ಮಂದಿರದ ಗರ್ಭಗುಡಿಗೆ ನುಗ್ಗಿ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿ, ಅಪವಿತ್ರಗೊಳಿಸಲು ಯತ್ನಿಸಿದ್ದ ಎನ್ನಲಾಗಿದೆ. ಹೀಗಾಗಿ ಅಲ್ಲಿದ್ದ ಶಿರೋಮಣಿ ಸಮಿತಿಯ ಸಿಬ್ಬಂದಿ ಹಾಗೂ ಭಕ್ತರು ಆತನನ್ನು ನಡೆದು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ, ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖಡ್ಗವನ್ನು ಮುಟ್ಟಲು ಯತ್ನಿಸಿದ್ದ
ಪಂಜಾಬ್ ಚುನಾವಣೆಗೂ ಮುನ್ನ ಈ ಅತ್ಯಂತ ಸೂಕ್ಷ್ಮ ವಿಷಯ ಉದ್ವಿಗ್ನತೆ ಉಂಟು ಮಾಡಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರತಿದಿನ ನಡೆಯುವ ಸಂಜೆಯ ಪ್ರಾರ್ಥನೆಯ ಸಂದರ್ಭದಲ್ಲಿ ವ್ಯಕ್ತಿಯೋರ್ವ ಆ ಸ್ಥಳಕ್ಕೆ ಜಿಗಿದು ಬಂದ. ಬಳಿಕ ಗುರು ಗ್ರಂಥ ಸಾಹೀಬ್ (ಸಿಖ್ ಧರ್ಮದ ಪವಿತ್ರ ಗ್ರಂಥ) ಬಳಿ ಇರಿಸಲಾಗಿದ್ದ ಖಡ್ಗವನ್ನು ಮುಟ್ಟುವುದಕ್ಕೆ ಯತ್ನಿಸಿದ್ದ. ಆಗ ಅಲ್ಲಿದ್ದ ಜನರು ಆತನನ್ನು ತಡೆದು, ಥಳಿಸಿ ಹತ್ಯೆ ಮಾಡಿದರು ಎಂದು ತಿಳಿದು ಬಂದಿದೆ.
ಪ್ರಾರ್ಥನೆ ವೇಳೆ ಜರುಗಿದ ಘಟನೆ
ಸಿಸಿಟಿವಿಯಲ್ಲಿ ಈ ಘಟನೆಯ ದೃಶ್ಯಾವಳಿ ಸೆರೆಯಾಗಿದೆ. ಪ್ರಾರ್ಥನೆ ನಡೆಯುತ್ತಿದ್ದ ಸಮಯದಲ್ಲಿ ವ್ಯಕ್ತಿಯೊಬ್ಬ ಗರ್ಭಗುಡಿಗೆ ನುಗ್ಗಲು ಯತ್ನಿಸಿದಾಗ, ಜನರು ಆತನನ್ನು ತಡೆಯಲು ಧಾವಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂಲಗಳ ಪ್ರಕಾರ, ಸಂಜೆ 6 ಗಂಟೆ ಸುಮಾರಿಗೆ ಪೂಜೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯ ನಂತರ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಿಖ್ರ ಗುರುಗ್ರಂಥ ಸಾಹಿಬ್ಗೆ ಯಾವುದೇ ಹಾನಿಯಾಗಿಲ್ಲ, ಅಪವಿತ್ರವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಸಿಎಂ ಖಂಡನೆ
ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಎಸ್ ಚಿನ್ನಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಈ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಹತ್ಯೆಗೀಡಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ
ಘಟನೆಯಲ್ಲಿ ವ್ಯಕ್ತಿ ಹತ್ಯೆಯಾಗಿದ್ದಾನೆ ಎಂಬ ವಿಷಯವನ್ನು ಪೊಲೀಸರು ಖಚಿತಪಡಿಸಿದ್ದಾರೆ. ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತಪಟ್ಟ ವ್ಯಕ್ತಿ ಯಾರು? ಆತ ಎಲ್ಲಿಂದ ಬಂದಿದ್ದಾನೆ? ಯಾವಾಗ ಗೋಲ್ಡನ್ ಟೆಂಪಲ್ ಪ್ರವೇಶಿಸಿದನು. ಆತನನೊಂದಿಗೆ ಎಷ್ಟು ಜನರಿದ್ದರು? ಎಂಬುದನ್ನು ಕಂಡುಹಿಡಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಈ ಎಲ್ಲದರ ಬಗ್ಗೆ ತನಿಖೆ ನಂತರ ಗೊತ್ತಾಗಲಿದೆ. ಜನರು ಮತ್ತು ಧರ್ಮಗುರುಗಳು ಶಾಂತ ರೀತಿಯಲ್ಲಿ ಇರಬೇಕೆಂದು ಮನವಿ ಮಾಡುತ್ತೇನೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರಿಂದ ಮಾಹಿತಿ ಲಭ್ಯ
ಹತ್ಯೆಗೀಡಾದ ವ್ಯಕ್ತಿಯು ಸುಮಾರು 20-25 ವರ್ಷದವನಾಗಿದ್ದು, ತಲೆಗೆ ಹಳದಿ ಬಣ್ಣದ ಬಟ್ಟೆ ಕಟ್ಟಿಕೊಂಡಿದ್ದ. ಆತ ಗರ್ಭಗುಡಿಯೊಳಗೆ ಪ್ರವೇಶಿಸಲು ಯತ್ನಿಸಿದಾಗ, ಅಲ್ಲೇ ಇದ್ದ ಭಕ್ತರ ಗುಂಪು ಆತನನ್ನು ತಡೆದು, ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಅಮೃತಸರದ ಡೆಪ್ಯುಟಿ ಪೊಲೀಸ್ ಕಮಿಷನರ್ ಪರ್ಮಿಂದರ್ ಸಿಂಗ್ ಭಂಡಲ್ ಮಾಹಿತಿ ನೀಡಿದ್ದಾರೆ.
ವ್ಯಕ್ತಿ ಉತ್ತರ ಪ್ರದೇಶದವನು?
ಆತ ಒಬ್ಬನೇ ಇದ್ದನು. ಪ್ರಾರ್ಥನಾ ಸ್ಥಳದಲ್ಲಿ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳು ಇರುವುದರಿಂದ ಎಲ್ಲಾ ವಿವರಗಳನ್ನು ಆದಷ್ಟು ಬೇಗನೇ ಬಹಿರಂಗಪಡಿಸಲಾಗುವುದು. ನಮ್ಮ ಪೊಲೀಸರು ಈ ವಿಷಯದಲ್ಲಿ ಬಹಳ ಜಾಗರೂಕರಾಗಿದ್ದು, ಸಿಸಿಟಿವಿ ದೃಶ್ಯಾವಳಿ ಮೂಲಕ ಸತ್ಯ ಶೋಧಿಸುತ್ತಿದ್ದಾರೆ. ಇಂದು ಆ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಭಂಡಲ್ ಹೇಳಿದ್ದಾರೆ. ಆ ವ್ಯಕ್ತಿ ಉತ್ತರ ಪ್ರದೇಶಕ್ಕೆ ಸೇರಿದವನು ಎಂದು ಅವರು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.