ಮತಾಂತರ ಕಾಯ್ದೆಗೆ 40 ಮಠಾಧೀಶರಿಂದ ಮನವಿ; 2016ರಲ್ಲೇ ಕಾಯಿದೆ ಜಾರಿಗೆ ಕಾಂಗ್ರೆಸ್ ಮುಂದಾಗಿತ್ತು ಎಂದ ಸಿಎಂ ಬೊಮ್ಮಾಯಿ
ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರವಾಗಿ ಸದನದಲ್ಲಿ ವಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದರೆ ಪ್ರತ್ಯಸ್ತ್ರ ಸಿದ್ದಪಡಿಸಿಟ್ಟುಕೊಂಡಿರುವ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಹಿಂದಿನ ಸರಕಾರವೇ ಕಾಯಿದೆ ತರಲು ಹೊರಟಿತ್ತು, ವಿಧೇಯಕ ಸಿದ್ಧಪಡಿಸಲು ಅಗತ್ಯವಿರುವ ಪ್ರಕ್ರಿಯೆಯನ್ನು ಸಿದ್ಧರಾಮಯ್ಯ ಸರಕಾರ ಮಾಡಿತ್ತು, ಕಾನೂನು ಇಲಾಖೆಯ ಮೂಲಕವೇ ವಿಧೇಯಕ ಕುರಿತು ತಯಾರಿ ನಡೆದಿತ್ತು, ಹಿಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ಈ ಕುರಿತು ಸಿದ್ಧತೆ ಮಾಡಿದ್ದರು ಎಂದು ವಿಧಾನಸಭೆಯಲ್ಲಿ ದಾಖಲೆ ಮುಂದಿಡಲು ರಾಜ್ಯ ಸರಕಾರದ ಸಿದ್ಧತೆ ನಡೆಸಿದೆ. ರಾಜ್ಯ ಸರ್ಕಾರದ ಈ ನಡೆಯು ವಿಪಕ್ಷ ಕಾಂಗ್ರೆಸ್ ನಲ್ಲಿ ಸಂಚಲನವನ್ನುಂಟುಮಾಡಿದೆ. 2016 ರಲ್ಲಿ ಕಾಯಿದೆ ಜಾರಿ ಮಾಡಲು ತಮ್ಮ ಸರಕಾರ ತಯಾರಿ ಮಾಡಿತ್ತೇ? ವಿಧೇಯಕ ಸಿದ್ಧಪಡಿಸಲು ಕಾನೂನು ಇಲಾಖೆ ಮುಂದಾಗಿತ್ತೇ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆದೇಶಿಸಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ತಪ್ಪು ಮಾಹಿತಿಯನ್ನು ಸದನದ ಮುಂದಿಟ್ಟರೆ ಹೋರಾಟ ಮಾಡಲು ಕಾಂಗ್ರೆಸ್ ಪ್ಲಾನ್ ಹಾಕಿಕೊಂಡಿದೆ. ಈ ಮಧ್ಯೆ ನಗರದಲ್ಲಿ ರಾಜ್ಯ ವಿಧಾನ ಮಂಡಳ ಚಳಿಗಾಲದ ಜಂಟಿ ಅಧಿವೇಷನ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವ ಹಿಂದೂ ಪರಿಷತ್ ಮಠಾಧೀಶರ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸುಮಾರು 40 ಸ್ವಾಮೀಜಿಗಳು ಮತಾಂತರ ಕಾಯ್ದೆ ಮಂಡಿಸುವಂತೆ ಒಕ್ಕೂರಲಿನಿಂದ ಸಿಎಂ ಬೊಮ್ಮಾಯಿಗೆ ಮನವಿ ಮಾಡಿದರು.
ಮತಾಂತರ ನಿಷೇಧ ಕಾಯ್ದೆ ಬಗ್ಗೆ ಇಂದು ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಇವರೇ ಈ ಹಿಂದೆ ಕಾಯ್ದೆ ತರುವುದಕ್ಕೆ ಪ್ರಯತ್ನಿಸಿದ್ದರು. 2016ರಲ್ಲೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದ್ದರು ಎಂದು ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದ್ರೆ ಇವತ್ತು ಅವರು ವಿರೋಧ ಮಾಡ್ತಿದ್ದಾರೆ ಅಂತಾ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಸಿಎಂ ಬೊಮ್ಮಾಯಿ ಮತಾಂತರ ಕಾಯ್ದೆ ತರುವುದು ನಿಶ್ವಿತ ಅಂತಾ ಪರೋಕ್ಷವಾಗಿ ಹೇಳಿದರು. ಬೆಳಗಾವಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಿದ್ದರು. ಆ ವೇಳೆ ಮತಾಂತರ ವಿರೋಧಿ ಕಾನೂನು ತರಲು ಸುಮಾರು 40 ಸ್ವಾಮೀಜಿಗಳು ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಿದರು.
ಮತಾಂತರ ಮುಂದೆ ಪಿಡುಗು ಸಹ ಆಗುತ್ತೆ.. ಹೀಗಾಗಿ ನಮ್ಮ ಅಸ್ಮಿತೆ ಬಿಡಬಾರದು: ಸಿಎಂ ಬೊಮ್ಮಾಯಿ
ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ್ಯದಿಂದ ಎಲ್ಲಾ ಪರಮ ಪೂಜ್ಯರು ನನ್ನನ್ನು ಹರಿಸಿದ್ದಾರೆ. ಹಿಂದೂ ಧರ್ಮ ದಿವ್ಯ ಪರಂಪರೆ ಭಾರತದಲ್ಲಷ್ಟೇ ಅಲ್ಲ ವಿಶ್ವದಲ್ಲೇ ವಿಶಾಲತೆ ಇದೆ. ಮಾನವೀಯ ಧರ್ಮವನ್ನ ಪರಿಪಾಲನೆ ಮಾಡುವ ಧರ್ಮ ಹಿಂದೂ ಧರ್ಮ. ಇಲ್ಲಿಯ ಧಾರ್ಮಿಕ ಚಿಂತನೆ ನಂಬಿಕೆ ಪೂಜೆ ಪುನಸ್ಕಾರ ಮಾನವೀಯ ಮೌಲ್ಯ ಬೇರೆ ಯಾವ ದೇಶದಲ್ಲೂ ಇಲ್ಲ. ನಮ್ಮ ದೇಶದಲ್ಲಿ ಈ ಹಿಂದೆ ಭಕ್ತಿ ಚಳವಳಿ ನಡೆದಿದೆ. ಬಸವಣ್ಣರಿಂದ ಹಿಡಿದು ಶಂಕರಾಚಾರ್ಯವರೆಗೂ ಭಕ್ತಿ ಚಳವಳಿಗಳು ಇವೆ. ಪಾಶ್ಚಿಮಾತ್ಯ ದೇಶಗಳಲ್ಲಿ ವೈಚಾರಕತೆ ಬೇರೆ, ಜೀವನ ಶೈಲಿಯೇ ಬೇರೆ. ನಾವು ಮಾನವೀಯತೆಯನ್ನ ನಮ್ಮ ಧರ್ಮದಲ್ಲಿ ಪರಿಪಾಲನೆ ಮಾಡ್ತೀವಿ. ಬೌದ್ಧ ಧರ್ಮದಿಂದ ಸ್ವಲ್ಪ ನಾವೂ ಸಂಕಷ್ಟಕ್ಕೀಡಾಗಿದ್ದಿವಿ. ಇವತ್ತು ಗುಪ್ತವಾಗಿ ಮತಾಂತರ ನಡೆಯುತ್ತಿದೆ. ಹುಟ್ಟು ಯಾರೂ ನಿರ್ಣಯ ಮಾಡುವುದಿಲ್ಲ. ಆದ್ರೆ ಯಾವ ಧರ್ಮದಲ್ಲಿ ಹುಟ್ಟಿ ಆ ಧರ್ಮದ ಸಂಸ್ಕೃತಿಯನ್ನ ಅನುಸರಿಸುತ್ತಾನೋ ಅವನ ಮತಾಂತರದಿಂದ ಬದಲಾವಣೆ ಮಾಡೋದು ಅನ್ಯಾಯ. ಒತ್ತಡ ಆಮಿಷ ಆಗುತ್ತೆ, ಬಳಿಕ ರೋಗ ಆಗುತ್ತೆ, ಬಳಿಕ ಇದು ಪಿಡುಗು ಸಹ ಆಗುತ್ತೆ. ಹೀಗಾಗಿ ನಮ್ಮ ಅಸ್ಮಿತೆ ಬಿಡಬಾರದು. ನಮ್ಮಲ್ಲಿರುವ ಬಡತನ ಅಸಹಾಕತೆಯ ದುರಪಯೋಗ ಮಾಡುವ ಕೆಲಸಗಳು ಆಗ್ತಿದೆ. ಹೀಗಾಗಿ ಆಸೆ ಅಮಿಷ ಒತ್ತಡ ಒತ್ತಾಯಕ್ಕೆ ಅವಕಾಶವಿಲ್ಲ. ನಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ. ಅದಕ್ಕೇ ಕಾನೂನು ಮಾಡಬೇಕಿದೆ ಅಂತಾ ಪರೋಕ್ಷವಾಗಿ ಮತಾಂತರ ಕಾಯ್ದೆ ತರುವುದು ನಿಶ್ವಿತ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ವೇದಿಕೆಯಲ್ಲಿ ಹೇಳಿದರು.