ಕುಡುಕರು ಎಣ್ಣೆ ಕುಡಿಯೋದ್ಯಾಕೆ ಅಂತ ಹೇಳಿದ್ರು ಹೆಚ್.ಡಿ.ರೇವಣ್ಣ
ಭಾನುವಾರ ನಡೆದ ಹಾಸನ ಡೇರಿ ಆವರಣದಲ್ಲಿ ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟದ ವಾರ್ಷಿಕ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಾಜಿ ಸಚಿವ ಹೆಚ್.ಡಿ,ರೇವಣ್ಣ (Former Minister HD Revanna) ಭಾಗವಹಿಸಿದ್ದರು. ಈ ವೇಳೆ ಕುಡುಕುರು ಯಾಕೆ ಹೆಚ್ಚು ಎಣ್ಣೆ ಕುಡಿತಾರೇ ಅನ್ನೋ ಗುಟ್ಟು ಬಿಚ್ಚಿಡುವ ಮೂಲಕ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕುಡಿಯಬೇಕು ಅಂತ ಯಾರೂ ಪ್ರತಿ ದಿನ ಕುಡಿಯಲ್ಲ. ಕೆಲವೊಮ್ಮೆ ಜೀವನದಲ್ಲಿ ನೋವು ಬಂದಾಗ, ಅದನ್ನು ಮರೆಯಲು ಒಂದು ಕ್ವಾರ್ಟರ್ ಹಾಕಬೇಕಾಗುತ್ತೆ. ಪಾಪ ಅವರೆಲ್ಲ ನೋವು ಮರೆಯೋಕೆ ಎಣ್ಣೆ ಕುಡಿದು ಮಲಗುತ್ತಾರೆ.

ಬಡ್ಡಿ ಸಾಲ ಮಾಡಿರ್ತಾರೆ. ಸಾಲ ಕೊಟ್ಟವರು ಮನೆ ಮುಂದೆ ಬಂದು ಕೂತ್ಕೊತ್ತಾರೆ, ಇಂತಹ ನೋವು ಮರೆಯಲು ಒಂದು ಕ್ವಾರ್ಟರ್ ಕುಡಿದು ಮಲಗಬೇಕೋ ಅಥವಾ ವಿಷ ಕುಡಿಬೇಕಾ ಸ್ವಾಮಿ ಎಂದು ನಗೆ ಚಟಾಕಿ ಹಾರಿಸಿದರು.

ಮಾತು ಮುಂದುವರಿಸಿದ ರೇವಣ್ಣ ಅವರು, ನನಗೂ ಒಂದು ನೋವಿದೆ ಅಂತ ಅಂದ್ರು. ಹಾಸನದಿಂದ ಬೇಲೂರು ಸಂಪರ್ಕಕ್ಕೆ ಕಲ್ಪಿಸುವ ಈ ಮಾರ್ಗದಲ್ಲಿ ಸುಮಾರು 40 ಬಾರ್ ಸಿಗುತ್ತವೆ.ಇವುಗಳಿಗೆ ಅನುಮತಿ ನೀಡುವ ಮೂಲಕ ಬಿಜೆಪಿ ಸರ್ಕಾರ ದೊಡ್ಡ ಸಾಧನೆ ಮಾಡಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು, (ಸಾಂದರ್ಭಿಕ ಚಿತ್ರ)

ಈಗ ಪ್ರತಿದಿನ ಹೆಣ್ಣು ಮಕ್ಕಳು ಅಳುತ್ತಿದ್ದಾರೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅಣ್ಣ ಶರಾಬು ನಿಲ್ಲಿಸಿ ಅಂತ ಕೇಳಿಕೊಂಡಿದ್ರು,. ಅಂತೆಯೇ ಕುಮಾರಸ್ವಾಮಿ ಎಣ್ಣೆ ಬಂದ್ ಮಾಡಿದ್ರು ಅಂತ ಹೇಳಿದರು.

ಈಗ ಎಣ್ಣೆ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ. ಅಂದು ಹೆಣ್ಮಕ್ಕಳ ಮಾತು ಕೇಳಿ ಕುಮಾರಣ್ಣ ನಮ್ಮನ್ನ ಹಾಳು ಮಾಡಿಬಿಟ್ಟ ಅಂತ ಗಂಡು ಮಕ್ಕಳು ಅಂತವರೆ. 10 ರೂ.ಗೆ ಸಿಗ್ತಿದ್ದ ಕ್ವಾರ್ಟರ್ 60 ರೂಪಾಯಿ ಆಗಿದೆ ಏನ್ ಮಾಡೋದಪ್ಪ ಅಂತ ನಗೆ ಚಟಾಕಿ ಮೂಲಕ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸಿದರು.