ಆಕಾಶದಲ್ಲಿ ಇಂದು ಸಂಜೆ ಮತ್ತೆ ಸರಣಿ ಬೆಳಕು ಕಾಣಲಿದೆ; ಕಾರಣ ಇಲ್ಲಿದೆ ನೋಡಿ

ಶಿವಮೊಗ್ಗ: ನಿನ್ನೆ (ಡಿಸೆಂಬರ್ 20) ಸಂಜೆ 7.30ರ ಸುಮಾರಿಗೆ ಆಕಾಶದಲ್ಲಿ ನಕ್ಷತ್ರಗಳು ಒಂದರ ಹಿಂದೆ ಒಂದಂತೆ ಚಲಿಸುವ ಹಾಗೆ ಅಪರೂಪದ ಸನ್ನಿವೇಶವೊಂದು ಗೋಚರಿಸಿತ್ತು. ಸರಪಳಿಯಂತೆ ಬೆಳಕಿನ ಸರವೊಂದು ಸಾಗುತ್ತಿದ್ದುದನ್ನು ಕಂಡು ಜನ ಆಶ್ವರ್ಯ ಪಟ್ಟಿದ್ದಾರೆ. ಜನರು ತಮ್ಮ ತಮ್ಮ ಮೊಬೈಲ್ನಲ್ಲಿ ಆ ದೃಶ್ಯವನ್ನು ಸೆರೆ ಹಿಡಿದು ಏಲಿಯನ್ ಇರಬಹುದು ಅಂತ ಭಯ ಪಟ್ಟಿದ್ದರು. ಆದರೆ ಜನರು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಇದು ಅಮೇರಿಕದ ಸ್ಪೇಸ್ ಎಕ್ಸ್ ಕಂಪನಿಯ ಕೃತಕ ಉಪಗ್ರಹಗಳು ಅಂತ ತಿಳಿದುಬಂದಿದೆ.

ಆಕಾಶದಲ್ಲಿ ನಿನ್ನೆ ಗೋಚರವಾದಂತೆ ಇಂದೂ ಕೂಡ ಸರಣಿ ಬೆಳಕು ಕಾಣಲಿದೆಯಂತೆ. ಇಂದು ಸಂಜೆ 7.15ಕ್ಕೆ ಬೆಳಕು ಗೋಚರವಾಗಲಿದೆಯಂತೆ. ಸ್ಟಾರ್ ಲಿಂಕ್ ಜಗತ್ತಿನಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೌಲಭ್ಯ ಒದಗಿಸಲು ಮುಂದಾಗಿದೆ. ಡಿ.18ರಂದು ಅಮೆರಿಕದ ಕ್ಯಾಲಿಫೋರ್ನಿಯದಿಂದ 52 ಉಪಗ್ರಹಗಳನ್ನು ಹಾರಿಬಿಡಲಾಗಿತ್ತು. ಈ ಉಪಗ್ರಹಗಳು ತೀರಾ ಕೆಳಗೆ ಸುತ್ತುತ್ತಿರುತ್ತವೆ. ಈ ಹಿನ್ನಲೆ ಭೂಮಿಗೆ ಸುಲಭವಾಗಿ ಗೋಚರಿಸುತ್ತವೆ.

ಎಲಾನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ ಅಮೆರಿಕದ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದ ಸರಣಿ ಉಪಗ್ರಹಗಳ ಮಾಲೆಯಿದು. ಸ್ಟಾರ್ ಲಿಂಕ್ ಎಂಬ ಯೋಜನೆಯಡಿ 1,800ಕ್ಕೂ ಅಧಿಕ ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದೆ. ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ. 2018ರ ಫೆ.22ರಂದು ಆರಂಭವಾದ ಈ ಯೋಜನೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ.

ಸ್ಟಾರ್​ಲಿಂಕ್​ನ ರಾಕೆಟ್​ಗಳು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿವೆ. ಇದು ಸ್ಟಾರ್‌ಲಿಂಕ್​ ಕಂಪನಿಯ 34ನೇ ಉಡಾವಣೆಯಾಗಿದ್ದು, ಭೂಮಿಯ ಕೆಳಹಂತದ ಕಕ್ಷೆಗೆ 2,000 ಉಪಗ್ರಹಗಳನ್ನು ಸೇರಿಸುವ ಗುರಿಯನ್ನು ಸ್ಟಾರ್‌ಲಿಂಕ್ ಇಟ್ಟುಕೊಂಡಿದೆ. ಅಂತರಿಕ್ಷಕ್ಕೆ ಇಷ್ಟೊಂದು ಉಪಗ್ರಹಗಳನ್ನು ಕಳಿಸಿದರೆ ಅಲ್ಲಿಯೂ ಟ್ರಾಫಿಕ್ ಜಾಂ ಆಗಲಾರದೆ? ಇತರ ದೇಶಗಳ ಬಾಹ್ಯಾಕಾಶ ಚಟುವಟಿಕೆಗಳಿಗೆ ತೊಂದರೆಯಾಗದೆ ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಿದ್ದಾರೆ.

ಯುಎಫ್ಒ‌ ಎಂದು ಅನುಮಾನ ವ್ಯಕ್ತಪಡಿಸಿತ್ತಿರುವ ಜನರಿಗೆ ಅಧಿಕಾರಿಗಳು ಯುಎಫ್‌ಒ‌ ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ. ಎರಡು ವಾರದ ಹಿಂದೆ ಪಂಜಾಬ್​ನ ಕೆಲ ಪ್ರದೇಶಗಳಲ್ಲಿ ಇದೇ ರೀತಿ ಆಕಾಶದಲ್ಲಿ ದೀಪಗಳ ಸಾಲು ಪತ್ತೆಯಾಗಿದೆ. ಪಂಜಾಬ್, ಹಿಮಾಚಲ ಪ್ರದೇಶ ಭಾಗದಲ್ಲಿ ದೀಪಗಳ ಸಾಲು ಕಾಣಿಸಿಕೊಂಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *