ಪ್ರೀತಿಸಿ ಮದುವೆಯಾದ ಮಗಳನ್ನ ಜುಟ್ಟು ಹಿಡಿದು ಎಳೆದೊಯ್ದ ಅಪ್ಪ, ಅಪ್ಪನ ವಿರುದ್ಧ ದೂರು ಕೊಟ್ಟ ಮಗಳು
ಮೈಸೂರು: ಪ್ರೀತಿಸಿ ಮದುವೆಯಾದ ಮಗಳನ್ನ ಜೀವನದುದ್ದಕ್ಕೂ ಸಾಕಿಸಲುಹಿದ ಅಪ್ಪ ಜುಟ್ಟು ಹಿಡಿದು ಎಳೆದೊಯ್ದಿದ್ದಾರೆ. ಇದರ ವಿರುದ್ಧ ಸಿಟ್ಟಿಗೆದ್ದ ಮಗಳು ಅಪ್ಪನ ಮೇಲೆ ದೂರು ಕೊಟ್ಟಿದ್ದಾಳೆ. ಇದೆಲ್ಲಾ ಫ್ಯಾಮಿಲಿ ಡ್ರಾಮಾ ನಡೆದಿದ್ದು ನಂಜನಗೂಡಿನ ಸಬ್ ರಿಜಿಸ್ಟ್ರಾರ್ ಆಫೀಸ್ನಲ್ಲಿ. ಪೋಷಕರ ವಿರೋಧ ಲೆಕ್ಕಿಸದೆ ಪ್ರೀತಿಸಿದ ಯುವಕನನ್ನು ಯುವತಿ ಮೈಸೂರಿನ ನಂಜನಗೂಡಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದಾಳೆ. ತನ್ನ ಮಾತನ್ನ ಲೆಕ್ಕಿಸದೇ ಹೋದ ಮಗಳನ್ನ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಎಳೆದುಕೊಂಡು ಹೋಗಲು ಯತ್ನಿಸಿದ್ದಾರೆ. ಆ ವೇಳೆ ಮಗಳ ಮಾಂಗಲ್ಯ ಸರ ಕಿತ್ತುಹಾಕಿದ್ದಾರೆ. ಆದರೂ ತಂದೆಗೆ ಡೋಂಟ್ ಕೇರ್ ಎಂದ ಮಗಳು ಸಾರ್ವಜನಿಕರ ನೆರವಿನಿಂದ ತಪ್ಪಿಸಿಕೊಂಡು ಪ್ರಿಯತಮನನ್ನು ಸೇರಿಕೊಂಡಿದ್ದಾಳೆ. ಬಳಿಕ ಮಗಳು ತನಗೆ ತನ್ನ ತಂದೆಯಿಂದ ರಕ್ಷಣೆ ಬೇಕು ಎಂದು ಸಾರ್ವಜನಿಕವಾಗಿ ಅವಲತ್ತುಕೊಂಡಿದ್ದಾಳೆ.
ನಂಜನಗೂಡು ತಾಲೂಕು ಹರತಲೆ ಗ್ರಾಮದ ಚೈತ್ರ ಎಂಬಾಕೆ ಪ್ರೀತಿಸಿ ಮದುವೆಯಾದ ಯುವತಿ. ಹರತಲೆ ಗ್ರಾಮದ ಚೈತ್ರ ಹಾಗೂ ಹಲ್ಲರೆ ಗ್ರಾಮದ ಮಹೇಂದ್ರ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸಿದ್ದಾರೆ. ಡಿಸೆಂಬರ್ 8 ರಂದು ಮದುವೆ ಆಗಿದ್ದಾರೆ. ನೊಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವಿವಾಹವನ್ನ ನೊಂದಾಯಿಸಿಕೊಳ್ಳಲು ಬಂದಿದ್ದಾರೆ. ನೊಂದಣಿ ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆಯೇ ಚೈತ್ರ ತಂದೆ ಬಸವರಾಜ ನಾಯ್ಕ ಪ್ರತ್ಯಕ್ಷವಾಗಿ ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ತುಹಾಕಿ ಜುಟ್ಟು ಹಿಡಿದು ಎಳೆದಾಡುತ್ತಾ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ತಮ್ಮ ಮದುವೆಗೆ ಪೋಷಕರ ವಿರೋಧ ಇದೆ, ಜೊತೆಗೆ ಬೆದರಿಕೆಯೂ ಇದೆ ಎಂದು ಪ್ರಿಯತಮನನ್ನ ತಬ್ಬಿಹಿಡಿದು ಚೈತ್ರ ಆತಂಕ ವ್ಯಕ್ತಪಡಿಸಿದ್ದಾಳೆ. ತನ್ನ ತಂದೆಯಿಂದ ತನಗೆ ರಕ್ಷಣೆ ಬೇಕೆಂದು ನಂಜನಗೂಡು ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಾಳೆ.
ಕಾಲೇಜಿಗೆ ಹೋಗುವಾಗ, ಬರುವಾಗ ಪುಂಡರಿಂದ ಕಿರುಕುಳ: ಬೇಸತ್ತ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಚಿತ್ರದುರ್ಗ: ಪುಂಡರ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶೀರನಕಟ್ಟೆ ಗ್ರಾಮದಲ್ಲಿ ರಾಧಿಕಾ(17) ನೇಣಿಗೆ ಶರಣಾದ ದುರ್ದೈವಿ ಬಾಲಕಿ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶೀರನಕಟ್ಟೆಯ ಮುದ್ದಪ್ಪ, ಸುದೀಪ್, ಕೋಟಿ, ಅಭಿ ವಿರುದ್ಧ ಕಿರುಕುಳದ ಆರೋಪ ಮಾಡಲಾಗಿದೆ. ರಾಧಿಕಾ ಕಾಲೇಜಿಗೆ ಹೋಗುವಾಗ, ಬರುವಾಗ ಜಡೆ ಹಿಡಿದು ಎಳೆದು ಅಶ್ಲೀಲವಾಗಿ ಮಾತನಾಡಿ ಆರೋಪಿಗಳು ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ತನ್ನ ಪೋಷಕರ ಬಳಿಯೂ ರಾಧಿಕಾ ಹೇಳಿಕೊಂಡಿದ್ದಳಂತೆ. ಈ ಬಗ್ಗೆ ಆರೋಪಿಗಳ ವಿರುದ್ಧ ರಾಧಿಕಾ ಪೋಷಕರು ಹೊಸದುರ್ಗ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.