ಯೂಟ್ಯೂಬ್ ವಿಡಿಯೋ ನೋಡ್ಕೊಂಡು ಪತ್ನಿಗೆ ಡೆಲಿವರಿ ಮಾಡಿಸಿದ ವ್ಯಕ್ತಿ- ಮಗು ಸಾವು, ಹೆಂಡತಿ ಐಸಿಯುಗೆ ಶಿಫ್ಟ್

ರಾಣಿಪೇಟ್(ತಮಿಳುನಾಡು): ಯೂಟ್ಯೂಬ್ (Youtube) ನೋಡಿಕೊಂಡು ಜನ ಅಡುಗೆ, ಕಸೂತಿ, ಕೋಡಿಂಗ್ (coding) ಕೂಡಾ ಕಲಿಯುತ್ತಾರೆ. ಈಗಿನ ಕಾಲದಲ್ಲಿ ಯೂಟ್ಯೂಬ್ ಒಂದು ರೀತಿ ಎಲ್ಲರ ಫೋನ್​ನಲ್ಲಿರೋ ಸ್ಕೂಲ್ ರೀತಿ ಆಗಿಬಿಟ್ಟಿದೆ. ಆದ್ರೆ ಅದು ಅತಿರೇಕಕ್ಕೆ ಹೋಗಿ ಅವಾಂತರಕ್ಕೆ ಕಾರಣವಾಗಬಾರದು ಅಷ್ಟೇ. ದುರದೃಷ್ಟವಶಾತ್ ಯೂಟ್ಯೂಬ್ ವಿಡಿಯೋ ಮೇಲೆ ತಮಿಳುನಾಡಿನ ವ್ಯಕ್ತಿಯೊಬ್ಬನಿಗೆ ಅದೆಷ್ಟು ನಂಬಿಕೆ ಇತ್ತೆಂದರೆ ಆತ ತನ್ನ ಗರ್ಭಿಣಿ (pregnant) ಹೆಂಡತಿಗೆ ಮನೆಯಲ್ಲೇ ಡೆಲಿವರಿ (Delivery) ಮಾಡಿಸಲು ಹೊರಟುಬಿಟ್ಟ. ಇದರಿಂದಾಗಿ ಮುದ್ದಾದ ಗಂಡುಮಗು ಹುಟ್ಟುವಾಗಲೇ ಅಸುನೀಗಿದ್ದು (baby died) ಆತನ ಪತ್ನಿ ವಿಪರೀತ ರಕ್ತಸ್ರಾವವಾಗಿ (heavy bleeding) ಆಸ್ಪತ್ರೆ ಸೇರಿದ್ದಾಳೆ. ಸದ್ಯ ಈ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ.

ಸೋಮವಾರ(ಡಿಸೆಂಬರ್ 20)ರಂದು ತಮಿಳುನಾಡಿನ ಲೋಕನಾಥನ್ ರನ್ನು ರಾಣಿಪೇಟೆಯ ಪೊಲೀಸರು ಬಂಧಿಸಿದರು. 2020ನೇ ಇಸವಿಯಲ್ಲಿ ಲೋಕನಾಥನ್ ಮತ್ತು ಗೋಮತಿ ಮದುವೆಯಾಗಿದ್ದರು. ಡಿಸೆಂಬರ್ 13ರಂದು ಗೋಮತಿಗೆ ಪ್ರಸವ ಆಗಬೇಕಿತ್ತು. ಆದರೆ ಡಿಸೆಂಬರ್ 18ರಂದು ಆಕೆಗೆ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಆಗ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇಚ್ಛಿಸದ ಲೋಕನಾಥನ್ ಯೂಟ್ಯೂಬ್ ವಿಡಿಯೋಗಳನ್ನು ನೋಡಿಕೊಂಡು ಅಲ್ಲಿ ತಿಳಿಸಿದಂತೆ ತಾನೇ ಮನೆಯಲ್ಲಿ ಹೆರಿಗೆ ಮಾಡಿಸಲು ನಿರ್ಧರಿಸಿದ್ದರು. ಲೋಕನಾಥನ್ ಸಹೋದರಿ ಗೀತಾ ಕೂಡಾ ಇವರಿಗೆ ಸಹಾಯ ಮಾಡಲು ಜೊತೆಗಿದ್ದರು.

ಬಹಳ ಪ್ರಯಾಸದಿಂದ ಗೋಮತಿಗೆ ಹೆರಿಗೆಯೇನೋ ಆಯಿತು. ಆದರೆ ಮಗು ಜನಿಸುವಾಗಲೇ ಮೃತಪಟ್ಟಿತ್ತು. ಅಲ್ಲದೇ ಗೋಮತಿಗೆ ವಿಪರೀತ ರಕ್ತಸ್ರಾವ ಆಗಲು ಶುರುವಾಯಿತು. ನಂತರ ಆಕೆಯನ್ನು ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲೋಕನಾಥನ್ ಕರೆದುಕೊಂಡು ಹೋದರು. ಆದರೆ ಅಲ್ಲಿನ ವೈದ್ಯರು ಆಕೆಯನ್ನು ದೊಡ್ಡ ಆಸ್ಪತ್ರೆಗೆ ಶಿಫ್ಟ್ ಮಾಡಲು ತಿಳಿಸಿದರು. ಸದ್ಯ ಗೋಮತಿ ವೆಲ್ಲೂರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

32 ವರ್ಷ ವಯಸ್ಸಿನ ಲೋಕನಾಥನ್ ನೇಮಿಲಿ ಜಿಲ್ಲೆಯ ಬಳಿಯ ಪಾಣಪಾಕ್ಕಂನಲ್ಲಿ ಸಣ್ಣ ಕಿರಾಣಿ ಅಂಗಡಿ ನಡೆಸುತ್ತಾರೆ. ಅವರ ಪತ್ನಿ ಗೋಮತಿಗೆ 28 ವರ್ಷ ವಯಸ್ಸು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಣಿಪೇಟ್ ಪೊಲೀಸರು ಲೋಕನಾಥನ್ ರನ್ನು ಸುಪರ್ದಿಗೆ ಪಡೆದಿದ್ದಾರೆ. ಆದರೆ ಇಡೀ ಪ್ರಹಸನ ಪತ್ನಿಯ ಒಪ್ಪಿಗೆಯ ಮೇರೆಗೇ ನಡೆದಿದ್ದರಿಂದ ಯಾವುದೇ ಪ್ರಕರಣ ದಾಖಲಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಗೋಮತಿ ಗರ್ಭಿಣಿಯಾದಾಗಿನಿಂದ ರೆಗ್ಯುಲರ್ ಚೆಕಪ್ ಗೆ ಕೂಡಾ ವೈದ್ಯರ ಬಳಿ ತೆರಳುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇಡೀ ಪ್ರಕರಣದ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದ್ದು ಪಿಎಂಕೆ ನಾಯಕ ಡಾ ಅನ್ಬುಮಣಿ ರಾಮದಾಸ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರಸವ ಎನ್ನುವುದು ಬಹಳ ಸಂಕೀರ್ಣವಾದ ವಿಚಾರ. ಒಂದು ಸಣ್ಣ ತಪ್ಪು ಕೂಡಾ ತಾಯಿ ಮತ್ತು ಮಗುವಿನ ಜೀವಕ್ಕೇ ಎರವಾಗಬಹುದು. ಇದು ಜ್ಯೂಸ್ ಅಥವಾ ಗಂಡನಿಗೆ ಮ್ಯಾಗಿ ಮಾಡಿ ಕೊಟ್ಟಂತೆ ಅಲ್ಲ, ಯೂಟ್ಯೂಬ್ ವಿಡಿಯೋ ನೋಡಿಕೊಂಡು ಮಾಡಲು” ಎಂದು ಟ್ವೀಟ್ ಮಾಡಿದ್ದಾರೆ.

ದಯವಿಟ್ಟು ಯಾರೂ ಇಂಥಾ ಅಪಾಯದ ಕೆಲಸಗಳಿಗೆ ಕೈ ಹಾಕಬೇಡಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 108 ಗೆ ಕರೆ ಮಾಡಿದರೆ ತರಬೇತಿ ಪಡೆದ ತಜ್ಞರು ಆಂಬ್ಯುಲೆನ್ಸ್ ನಲ್ಲೇ ಸೂಕ್ತ ರೀತಿಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಾರೆ. ಅದನ್ನು ಬಿಟ್ಟು ಹೀಗೆ ಜೀವಕ್ಕೆ ಎರವಾಗುವ ಕೆಲಸಗಳನ್ನು ಮಾಡಬೇಡಿ ಎಂದಿದ್ದಾರೆ.

ಈ ಕುಟುಂಬದ ನಿರ್ಧಾರದಿಂದ ಸದ್ಯ ಮಗುವನ್ನು ಕಳೆದುಕೊಂಡಿದ್ದಾರೆ. ಪತ್ನಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇತ್ತ ಪತಿ ಪೊಲೀಸರ ಅತಿಥಿಯಾಗಿದ್ದಾನೆ. ಒಟ್ಟಿನಲ್ಲಿ ಜೀವದ ಜೊತೆ ಆಟವಾಡುವ ಕೆಲಸ ನಡೆದಿದೆ ಎನ್ನುವುದೇ ಖೇದಕರ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *