ಬೆಳಗ್ಗೆ 7 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಲವೆಡೆ ಲಘು ಭೂಕಂಪ, ಆತಂಕ ಪಡಬೇಡಿ ಎಂದು ಜಿಲ್ಲಾಧಿಕಾರಿ ಲತಾ ಅಭಯ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಹಲವೆಡೆ ಸ್ಫೋಟದ ಅನುಭವವಾಗಿದೆ. ಬೆಳಗ್ಗೆ 7 ಗಂಟೆಯಿಂದ 7.30ರೊಳಗೆ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ವಿವಿಧೆಡೆ ಕೇಳಿ ಬಂದ ಸದ್ದಿಗೆ ಜನ ಬೆಚ್ಚಿಬಿದ್ದಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಲಘು ಭೂಕಂಪವಾಗಿರುವುದಾಗಿ ಕೇಳಿ ಬಂದಿದೆ. ಜಿಲ್ಲೆಯಲ್ಲಿ 2 ಬಾರಿ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 2.9 ರಿಂದ 3 ರಷ್ಟು ತೀವ್ರತೆ ದಾಖಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಆದನ್ನಗಾರಹಳ್ಳಿ, ರೆಡ್ಡಿ ಗೊಲ್ಲವಾರಹಳ್ಳಿ, ಪೆರೇಸಂದ್ರ ಗ್ರಾಮದ ಸುತ್ತಮುತ್ತ ಸ್ಫೋಟದ ಸದ್ದು ಕೇಳಿ ಬಂದಿದೆ. ಈ ಬಾರಿ ಮಳೆ ಜಾಸ್ತಿಯಾಗಿದೆ. ಅಂತರ್ಜಲ ಉಕ್ಕುತ್ತಿದೆ. ಹಾಗಾಗಿ ವಿಫಲ ಕೊಳವೆ ಬಾವಿಗಳ ಮೂಲಕ ಅಂತರ್ಜಲ ಮರುಪೂರಣದಿಂದ ಏರ್ ಬ್ಲಾಸ್ಟ್ ಆಗಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಆದ್ರೆ ಜಿಲ್ಲೆಯಲ್ಲಿ 2 ಬಾರಿ ಭೂಮಿ ಕಂಪಿಸಿದ್ದು ಲಘು ಭೂಕಂಪವಾಗಿರುವುದು ಕೇಳಿ ಬಂದಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರ (ಕೆ.ಎಸ್.ಎನ್.ಡಿ.ಎಂ.ಸಿ.) ಸ್ಪಷ್ಟ ಪಡಿಸಿದೆ.
ಮಂಡಿಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2.9 ತೀವ್ರತೆ ಹಾಗೂ ಭೋಗಪರ್ತಿ ಗ್ರಾಮದ ಬಳಿ 3.0 ತೀವ್ರತೆಯ ಸಣ್ಣ ಪ್ರಮಾಣದ ಭೂಕಂಪನವಾಗಿದೆ. ಸದ್ಯ ಈ ಬಗ್ಗೆ ಸ್ಷಷ್ಟನೆ ನೀಡಿರುವ ಜಿಲ್ಲಾಧಿಕಾರಿ ಲತಾ ಆರ್, ಸಾರ್ವಜನಿಕರು ಭಯಭೀತರಾಗದಂತೆ ತಿಳಿಸಿದ್ದಾರೆ.
ಕಲಬುರಗಿಯಲ್ಲೂ ಕೇಳಿ ಬಂದಿತ್ತು ಸದ್ದು
ಕಲಬುರಗಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಭೂಮಿ ಒಳಗಿಂದ ಭಾರೀ ಸದ್ದು ಕೇಳಿಬಂದಿದ್ದು ಜನರು ಆತಂಕಗೊಂಡಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ 2 ಬಾರಿ ಸದ್ದು ಕೇಳಿ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದು, ಭಾರೀ ಸದ್ದಿನಿಂದಾಗಿ ಜನರು ಬೆದರಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ, ಹೊಸಳ್ಳಿ, ಕೆರಳ್ಳಿ ಸೇರಿ ಕೆಲ ಗ್ರಾಮಗಳಲ್ಲಿ ಸದ್ದು ಕೇಳಿದೆ. ಗಡಿಕೇಶ್ವರದಲ್ಲಿ ಬೆಳಗ್ಗೆ ಕೂಡ ಭಾರೀ ಶಬ್ದ ಕೇಳಿ ಬಂದಿದ್ದು, ಕೆಲವೆಡೆ ಭೂಕಂಪನದ ಅನುಭವವೂ ಆಗಿದೆ.
ಗಡಿಕೇಶ್ವರ, ಹೊಸಳ್ಳಿ, ಕೆರಳ್ಳಿ ಸೇರಿದಂತೆ ಕೆಲ ಗ್ರಾಮದಲ್ಲಿ ಭೂ ಕಂಪನ ಅನುಭವ ಆಗಿದ್ದು, ಜನರು ಲಘು ಭೂಕಂಪನ ಆಗಿದೆ ಎಂದೇ ಭಾವಿಸಿದ್ದಾರೆ. ಆದರೆ, ಗಡಿಕೇಶ್ವರದಲ್ಲಿ ಭಾರೀ ಸದ್ದು ಕೇಳಿ ಬಂದಿದ್ದರೆ, ಸೇಡಂ ಪಟ್ಟಣದ ಕೆಲವೆಡೆ ಕೂಡಾ ಲಘು ಭೂಕಂಪನದ ಅನುಭವ ಆಗಿದೆ.
ಭೂಮಿಯಿಂದ ಸದ್ದು ಬರುತ್ತಿದ್ದಂತೆಯೇ ಜನರು ಹೆದರಿ ಹೊರಗೆ ಓಡಿ ಬಂದಿದ್ದು, ಏನೋ ಸ್ಫೋಟಿಸುತ್ತಿದೆ ಎಂದು ಕೆಲವರು ಭಾವಿಸಿದ್ದಾರೆ. ಭೂಕಂಪ, ಸ್ಫೋಟ ಹೀಗೆ ಯಾವ ಕಾರಣವೆಂದು ನಿಖರವಾಗಿ ತಿಳಿದು ಬರದ ಕಾರಣ ಎಲ್ಲರೂ ಆತಂಕಿತರಾಗಿದ್ದು, ಇತ್ತೀಚೆಗೆ ಅಲ್ಲಲ್ಲಿ ಇಂತಹ ಸದ್ದು ಮರುಕಳಿಸುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.