Nagshekar: 50 ಲಕ್ಷ ರೂ ವಂಚನೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಖ್ಯಾತ ನಿರ್ದೇಶಕ ನಾಗಶೇಖರ್

ಸ್ಯಾಂಡಲ್​ವುಡ್​​ನ ಖ್ಯಾತ ನಿರ್ದೇಶಕ ನಾಗಶೇಖರ್ (Nagshekar)​ ತಮಗೆ ವಂಚನೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 50 ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಬೆಂಗಳೂರಿನ ಆರ್.ಆರ್ ನಗರ (RR Nagar) ಪೊಲೀಸ್ ಠಾಣೆಗೆ ನಿರ್ದೇಶಕ ದೂರು ನೀಡಿದ್ದಾರೆ. ಆರ್.ಆರ್ ನಗರದ ಮೀನಾ ಹಾಗೂ ರಾಜ್​ಕುಮಾರ್ ವಿರುದ್ಧ ದೂರು ನೀಡಲಾಗಿದೆ. ಮನೆ ಖರೀದಿಗೆ ಮಾತನಾಡಿ, ನಾಗಶೇಖರ್ ಹಣ ನೀಡಿದ್ದರು. ಇದೀಗ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಇತ್ತ ಹಣವೂ ಇಲ್ಲ, ಮನೆಯೂ ಇಲ್ಲ; ತಮಗೆ ವಂಚನೆಯಾಗಿದೆ ಎಂದು ನಾಗಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣವೇನು?
ಆರ್​.ಆರ್​.ನಗರದ ಜಯಣ್ಣ ಲೇಔಟ್‌ನಲ್ಲಿ ಮನೆ ಖರೀದಿ ಮಾಡಲು ಮುಂದಾಗಿದ್ದ ನಿರ್ದೇಶಕ ನಾಗಶೇಖರ್, ಅದಕ್ಕಾಗಿ 2 ಕೋಟಿ 70 ಲಕ್ಷ ರೂ.ಗೆ ಮೀನಾ ಎಂಬುವವರ ಬಳಿ ಮಾತುಕತೆ ನಡೆಸಿದ್ದರು. 2020ರ ಆಗಸ್ಟ್‌ನಲ್ಲಿ ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಅಗ್ರಿಮೆಂಟ್ ಬಳಿಕ ಹಂತ ಹಂತವಾಗಿ ಮೀನಾ ಅವರ ಖಾತೆಗೆ ಹಣ ವರ್ಗಾವಣೆ ಮಾಡಿದ್ದ ನಾಗಶೇಖರ್, ಒಟ್ಟು ₹ 50 ಲಕ್ಷ ನೀಡಿದ್ದರು.

ಆದರೆ ಈಗ ಮತ್ತೊಬ್ಬರಿಗೆ ಮನೆ ಮಾರಾಟ ಮಾಡಲಾಗಿದೆ ಎಂದು ನಿರ್ದೇಶಕ ನಾಗಶೇಖರ್ ದೂರು ನೀಡಿದ್ದಾರೆ. ಅಲ್ಲದೇ ಸೇಲ್ ಅಗ್ರಿಮೆಂಟ್ ಬಳಿಕ ಪಡೆದಿದ್ದ 50 ಲಕ್ಷ ರೂ ಹಣವನ್ನು ವಾಪಸ್ ನೀಡಿಲ್ಲ ಎಂದು ನಿರ್ದೇಶಕ ಆರೋಪಿಸಿದ್ದಾರೆ. ದುಡ್ಡು, ಮನೆ ಎರಡೂ ಇಲ್ಲದೇ ಕಂಗಾಲಾಗಿರುವ ನಿರ್ದೇಶಕ, ಮೀನಾ ಹಾಗೂ ರಾಜ್​ಕುಮಾರ್ ವಿರುದ್ಧ ಆರ್​.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸೆಕ್ಷನ್ 420ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದೇನು?
ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಮನೆ ಖರೀದಿ ಮಾಡುವ ಸಲುವಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಅಕೌಂಟ್ ಮೂಲಕ ಇಪತ್ತು ಲಕ್ಷ ಹಾಗು ಬೇರೆ ರೂಪದಲ್ಲಿ ಉಳಿದ ಹಣ ಸೇರಿ ಒಟ್ಟು ಐವತ್ತು ಲಕ್ಷ ಹಣ ನೀಡಿದ್ದಾರೆ. ಕೋವಿಡ್ ಹಿನ್ನಲೆ ರಿಜಿಸ್ಟರ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಮನೆ ರಿಜಿಸ್ಟರ್ ಮಾಡಿಕೊಳ್ಳಲು ಹೋದಾಗ ಬೇರೆಯವರಿಗೆ ಸೇಲ್ ಅಗ್ರಿಮೆಂಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈಗ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ನಾಗಶೇಖರ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ನಿರ್ದೇಶಕ ನಾಗಶೇಖರ್ ಸ್ಯಾಂಡಲ್​ವುಡ್​ನಲ್ಲಿ ತಮ್ಮ ಚಿತ್ರಗಳಿಂದ ಗುರುತಿಸಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಅರಮನೆ, ಚೇತನ್ ನಟನೆಯ ಮೈನಾ, ಶ್ರೀನಗರ ಕಿಟ್ಟಿ, ರಮ್ಯಾ ಅಭಿನಯದ ಸಂಜು ವೆಡ್ಸ್ ಗೀತಾ, ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ, ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಸೇರಿದಂತೆ ಹಲವು ಖ್ಯಾತ ಸಿನಿಮಾಗಳನ್ನು ನಿರ್ದೇಶಿಸಿರುವ ಕೀರ್ತಿ ನಾಗಶೇಖರ್​ಗಿದೆ. ಇದಲ್ಲದೇ ‘ವೀರಕನ್ನಡಿಗ’ ಹಾಗೂ ‘ರಂಗ SSLC’ ಸಿನಿಮಾದಲ್ಲಿ ನಾಗಶೇಖರ್ ನಟಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *